ಸಿದ್ದರಾಮಯ್ಯಗೆ ಭಾರತದ ಇತಿಹಾಸ ಜ್ಞಾನದ ಕೊರತೆ: ರೇಣುಕಾಚಾರ್ಯ
ಬೆಂಗಳೂರು ಜೂನ್ 1: ನೀವು ಎಷ್ಟೇ ಅರಚಿಕೊಂಡು ಅಬ್ಬರಿಸಿದರೂ ಪ್ರಯೋಜನವಿಲ್ಲ. ಏಕೆಂದರೆ, ಈ ಬಾರಿ ಪರಮೇಶ್ವರ್ ಗೆ ಯಾಮಾರಿಸಿದಂತೆ ಮಹಾನಾಯಕನ ಬೆನ್ನಿಗೆ ಚೂರಿ ಹಾಕಲು ಸಾಧ್ಯವೇ ಇಲ್ಲ. ನೀವು ಗುಂಡಿ ತೋಡುವ ಮೊದಲೇ ಅವರು, ಭೇಟೆ ಮುಗಿಸುತ್ತಾರೆ. ಯಾವುದಕ್ಕೂ ಎಚ್ಚರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕರ ಎಂಪಿ ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಇಂದು ಸರಣಿ ಟ್ವಿಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. 'ದಲಿತರನ್ನು ಮುಟ್ಟಿದರೆ ಗ್ಲಿಸರಿನ್ ಹಾಕಿ ಕೈ ತೊಳೆದುಕೊಳ್ಖುವ ಸಿದ್ದರಾಮಯ್ಯನವರೇ, ನೀವು ಆ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದೀರಾ? ದಲಿತರಿಗೆ ಮಾಡಿದ ಅನ್ಯಾಯದಿಂದಲೇ ಸಿಡಿದೆದ್ದು, ಸೇಡು ತೀರಿಸಿಕೊಂಡ ಪರಿಣಾಮವೇ, ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು. ಬಾದಾಮಿಯಲ್ಲಿ ತಿಣಕಾಡಿ ಒಂದು ಸಾವಿರ ಚಿಲ್ಲರೆ ಮತಗಳಿಂದ ಗೆದ್ದದ್ದು' ಎಂದು ವ್ಯಂಗ್ಯವಾಡಿದ್ದಾರೆ.
|
ರಾಜ್ಯದ 5 ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಗೆಲುವು
ದಲಿತರನ್ನು ಬಳಸಿಕೊಂಡು ನಂತರ ಮೂಲೆಗುಂಪು ಮಾಡುವ ಕಾಂಗ್ರೆಸ್ ಪಕ್ಷದ ನೈಜಮುಖ ಏನೆಂಬುದು ಗೊತ್ತಾಗಿದ್ದರಿಂದಲೇ ಆ ಸಮುದಾಯ ಬಿಜೆಪಿಯನ್ನು ಬಲವಾಗಿ ಕೈ ಹಿಡಿದಿದೆ. 2018 ರ ವಿಧಾನಸಭೆಯ 36 ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಗೆದ್ದದ್ದು 18 ಕ್ಷೇತ್ರದಲ್ಲಿ. ಅಂದರೆ ಅರ್ಧದಷ್ಟು.
2019 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 5 ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಗೆಲುವು. ಚಾಮರಾಜನಗರ, ಕೋಲಾರ, ಚಿತ್ರದುರ್ಗ, ಬಿಜಾಪುರ, ಹಾಗೂ ಕಲಬುರಗಿಯಲ್ಲಿ ಕಾಂಗ್ರೆಸ್ ತಿರಸ್ಕರಿಸಿ ನಮ್ಮ ಪಕ್ಷವನ್ನು ಕೈ ಹಿಡಿದರು. ಈಗ ಹೇಳಿ, ಸ್ವಾಭಿಮಾನಿ ದಲಿತರು, ಕಾಂಗ್ರೆಸ್ ಪರವೋ ಅಥವಾ ಬಿಜೆಪಿ ಪರವೋ? ಎಂದು ದಲಿತನ್ನು ರೇಣುಕಾಚಾರ್ಯ ಅವರು ಪ್ರಶ್ನೆ ಮಾಡಿದ್ದಾರೆ.

'ದಲಿತರಿಂದಲೇ ನಿಮಗೆ ಪಾಠ' ರೇಣುಕಾಚಾರ್ಯ
ನನ್ನಿಂದಲೇ (ಸಿದ್ದರಾಮಯ್ಯ) ದಲಿತರ ಉದ್ದಾರ ಎಂದು ಬೊಬ್ಬೆ ಹಾಕಿದ ನಿಮಗೆ ಅದೇ ಸಮುದಾಯ ಮತ್ತೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬುದನ್ನು ಮರೆಯಬೇಡಿ. 2023 ರ ಚುನಾವಣೆಗೆ ಕಾಯುತ್ತಿದ್ದಾರೆ.
RSS ನಲ್ಲಿ ದಲಿತರಿಗೆ ಉನ್ನತ ಹುದ್ದೆಯ ಬಗ್ಗೆ ಮಾತನಾಡುವ ಮಾನ್ಯ ಸಿದ್ದರಾಮಯ್ಯನವರೇ 2018 ರ ವಿಧಾನಸಭೆ ಹಾಗೂ 2019 ರ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ವರ್ಗದ ಸ್ವಾಭಿಮಾನಿ ಜನತೆಯು ನಕಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದನ್ನು ಒಮ್ಮೆ ಆತ್ಮವಲೋಕನ ಮಾಡಿಕೊಂಡರೆ ನಿಮಗೆ ಒಳಿತು ಎಂದು ಕುಟುಕಿದ್ದಾರೆ.

ನರಿಯ ಕೂಗು ಗಿರಿಗೆ ಕೇಳಿಸುವುದುಂಟೆ?
RSS ವಿರುದ್ಧ ಮಾತನಾಡಿದರೆ ದೆಹಲಿ ನಾಯಕರು ಸಂತೃಪ್ತಿಗೊಳ್ಳಬಹುದು ಎಂದು ಭಾವಿಸಿದರೆ ಅದು ನಿಮ್ಮ ಭ್ರಮೆ ಅಷ್ಟೇ.! ಏಕೆಂದರೆ ನರಿಯ ಕೂಗು ಗಿರಿಗೆ ಕೇಳಿಸುವುದುಂಟೆ ? ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ನೀವು ಟೀಕೆ ಮಾಡಿದಷ್ಡು ಅದು ಎತ್ತರಕ್ಕೆ ಬೆಳೆಯುತ್ತಲೇ ಇದೆ. RSS ತನ್ನ ಎಲ್ಲಾ ಹುದ್ದೆಗಳನ್ನು ಒಂದೇ ಸಮುದಾಯಕ್ಕೆ ನೀಡಿದೆ ಎಂದು ರೋಧಿಸುತ್ತಿರುವ ಸಿದ್ದರಾಮಯ್ಯನವರೇ, ಕಳೆದ 20;ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಯಾರ ಬಳಿ ಇದೆ. ಇದರ ಬಗ್ಗೆ ಎಂದಾದರೂ ನೀವು ಪ್ರಶ್ನೆ ಮಾಡಿದ್ದೀರಾ? ಮಾಡಿದರೆ, ನಿಮಗೆ ನೇರವಾಗಿ ಸಿದ್ದರಾಮಯ್ಯನ ಹುಂಡಿಗೆ ಗೇಟ್ ಪಾಸ್ ಸಿಗಬಹುದೇ ಎಂಬ ಭಯ ಕಾಡುತ್ತಿದಿಯೇ? ಎಂದು ಟ್ವಿಟ್‌ನಲ್ಲಿ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

'ಪ್ರಶ್ನೆಯನ್ನೇ ಉತ್ತರವಾಗಿಸಿ ನುಣುಚಿಕೊಳ್ಳುವ ಸಿದ್ದರಾಮಯ್ಯ'
ಆರ್ ಎಸ್ ಎಸ್ ನಲ್ಲಿ ಬ್ರಾಹ್ಮಣ, ಗೌಡ, ಲಿಂಗಾಯತ, ಕುರುಬ, ಜೈನ, ಮಾರವಾಡಿ, ಯಾದವ ಮತ್ತು ಮುಸ್ಲಿಂ ಎನ್ನುವ ಯಾವ ಭೇದವನ್ನೂ ಇಟ್ಟಿಲ್ಲ. ಎಲ್ಲರೂ ರಾಷ್ಟ್ರೀಯ ಸ್ವಯಂ ಸೇವಕರೇ. ಎಲ್ಲರಲ್ಲಿಯೂ ಒಂದೇ ಭಾವನೆ ಒಂದೇ ದೇಶಭಕ್ತಿ. ಭೇದ - ಭಾವ ಇರುವುದು ನಿಮ್ಮ ಕಾಂಗ್ರೆಸ್‌ನಲ್ಲಿ ಮಾತ್ರ. ಪ್ರಶ್ನೆಗೆ ಪ್ರಶ್ನೆಯನ್ನೇ ಉತ್ತರವಾಗಿಸಿ ನುಣುಚಿಕೊಳ್ಳುವ ಸಿದ್ದರಾಮಯ್ಯನರ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ. ಅಹಂಕಾರಕ್ಕೆ ಉದಾಸೀನವೇ ಮುದ್ದು. ನಿರ್ಧಿಷ್ಟ ಗೊತ್ತು ಗುರಿ ಇಲ್ಲದವರಿಗೆಲ್ಲಾ ಉತ್ತರ ಕೊಡಲು ಸಮಯವಿರುವುದಿಲ್ಲ.
ಯಾಕೆ ಕಾಂಗ್ರೆಸ್ ನ ಉನ್ನತಾದೀಕಾರ ಒಂದೇ ಕುಟುಂಬ ದ ಹಿಡಿತದಲ್ಲದೆ.? ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೆಹರು ಕುಟುಂಬದವರು ಬಿಟ್ಟು ಬೇರೆ ಕಾಂಗ್ರೆಸ್ಸಿಗರನ್ನು ನೀವು ಕೂರಿಸಿ ನಂತರ ಈ ಪ್ರಶ್ನೆ ಕೇಳಬಹುದು ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನೆಹರೂ ಕುಟುಂಬದ ವರಿಗೇ ಯಾಕೆ ಕೊಡಬೇಕು ಆ ಪಕ್ಷದಲ್ಲಿ ಉಳಿದವರೆಲ್ಲ ನರ ಸತ್ತವರಾ? ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.

'ಸಿದ್ದರಾಮಯ್ಯಗೆ ಭಾರತದ ಇತಿಹಾಸದ ಜ್ಞಾನದ ಕೊರತೆ'
ಸಾಮಾಜಿಕ ನ್ಯಾಯ ಎಂದು ಕಂಡಕಂಡಲ್ಲಿ ಕಂಠಶೋಷಣೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯನವರೇ ವಿಧಾನ ಪರಿಷತ್ ಚುನಾವಣೆಯಲ್ಲಿ ದಲಿತರಿಗೆ ಟಿಕೆಟ್ ಕೊಡಬೇಕು ಎಂಬ ಆಲೋಚನೆ ಬರಲಿಲ್ಲವೇ? ಅಥವಾ ನಿಮ್ಮ ಬಾಲಬುಡಕರಿಗೆ ಕೈ ತಪ್ಪಿದ್ದರಿಂದ ಜಾಣಮೌನ ತೋರಿಸಿದೀರಾ?
ಅರ್ಯರು ಮತ್ತು ದ್ರಾವಿಡರ ಮೂಲದ ಬಗ್ಗೆ ಬೊಬ್ಬೆ ಹಾಕುತ್ತಿರುವ ನಿಮಗೆ ಭಾರತದ ಇತಿಹಾಸದ ಜ್ಞಾನದ ಕೊರತೆ ಇದೆ ಇರಬೇಕು. ಒಂದೇ ಸಮುದಾಯ ದ್ರಾವಿಡ ವರ್ಗಕ್ಕೆ ಸೇರಿದ್ದವರು ಎನ್ನುವುದಾದರೆ, ರಾಜ್ಯಸಭೆಯ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಅದೇ ಒಂದೇ ವರ್ಗಕ್ಕೆ ಸೇರಿದವರು. ಇವರನ್ನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತೀರಾ? ಎಂದು ರೇಣುಕಾಚಾರ್ಯ ಟೀಕಿಸಿದ್ದಾರೆ.












Click it and Unblock the Notifications