ಬಿಬಿಎಂಪಿಗೆ 1 ಸಾವಿರ ಕೋಟಿ ಅನುದಾನ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಮೇ 09 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿಗೆ 1000 ಕೋಟಿ ರೂ. ಅನುದಾನವನ್ನು ಘೋಷಣೆ ಮಾಡಿದ್ದಾರೆ. ಪಾಲಿಕೆ ಕಟ್ಟಡಗಳ ದರಗಳನ್ನು ಪರಿಷ್ಕರಣೆ ಮಾಡಲು ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಬಿಎಂಪಿಯಲ್ಲಿ ಆರ್ಥಿಕ ಅಶಿಸ್ತು ಉಂಟಾಗಲು ಅವಾಸ್ತವಿಕ ಬಜೆಟ್ ಕಾರಣ. ಇದಕ್ಕೆ ಆಡಳಿತಲ್ಲಿದ್ದ ಬಿಜೆಪಿಯೇ ಹೊಣೆ ಎಂದು ದೂರಿದರು. [ಬೆಂಗಳೂರಿಗೆ ಮೂರು ಎಲಿವೇಡೆಡ್ ರಸ್ತೆ ಕೊಡುಗೆ]

ಬಿಬಿಎಂಪಿಯಲ್ಲಿ 2,500 ಕೋಟಿ ರೂ. ಮೊತ್ತದ ಕಾಮಗಾರಿಗಳು ಬಾಕಿ ಇವೆ. ಇದರಲ್ಲಿ 1,677 ಚಾಲನೆಯಲ್ಲಿರುವ ಕಾಮಗಾರಿಗಳಾಗಿವೆ. 1,800 ಕೋಟಿ ರೂ. ಮೊತ್ತದ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಜೊತೆಗೆ 3,100 ಕೋಟಿ ರೂ. ಸಾಲವಿದೆ ಎಂದು ಮುಖ್ಯಮಂತ್ರಿಗಳು ವಿವರಣೆ ನೀಡಿದರು. [2015ರ ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು]
ಬಿಬಿಎಂಪಿ ಕಟ್ಟಡಗಳ ಬಾಡಿಗೆ ದರ ಪರಿಷ್ಕರಣೆ ಸುಮಾರು ವರ್ಷಗಳಿಂದ ನಡೆದಿಲ್ಲ. ಆದ್ದರಿಂದ ದರಗಳನ್ನು ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ. ಜಾಹೀರಾತು ಫಲಕಗಳಿಂದ ಪಾಲಿಕೆಗೆ ವಾರ್ಷಿಕ 1 ಸಾವಿರ ಕೋಟಿ ಆದಾಯ ಬರಬೇಕು. ಆದರೆ, 25-30 ಕೋಟಿ ರೂ. ಸಂಗ್ರಹವಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
1 ಸಾವಿರ ಕೋಟಿ ನೆರವು : ಪಾಲಿಕೆಯ ಆರ್ಥಿಕ ಸಂಕಷ್ಟವನ್ನು ಗಮನಿಸಿ 1 ಸಾವಿರ ಕೋಟಿ ರೂ. ನೆರವು ಒದಗಿಸಲು ಸರ್ಕಾರ ಮುಂದಾಗಿದೆ. ಈ ಹಣವನ್ನು ಹೊಸ ಕಾಮಗಾರಿಗಳಿಗೆ ಮಾತ್ರ ಬಳಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೊಸದಾಗಿ ಕೈಗೆತ್ತಿಕೊಳ್ಳುವ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ವಿವರಣೆ ನೀಡಿದರು.












Click it and Unblock the Notifications