ಬಿಡದಿ ಪಾದಯಾತ್ರೆಯಂತೆ ಇದೂ ಒಡಕಿನ ವೇದಿಕೆ ಆಗುತ್ತೆ! ಬಿಜೆಪಿ-ಜೆಡಿಎಸ್‌ಗೆ ಶಿವರಾಜ ತಂಗಡಗಿ ಟಾಂಗ್
ಬೆಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು 'ಪಾದಯಾತ್ರೆಯಲ್ಲ ಪಶ್ಚಾತಾಪ ಯಾತ್ರೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ. ಕಲಾಪವನ್ನು ನಡೆಸಲು ಬಿಡದೇ ಬಿಜೆಪಿ-ಜೆಡಿಎಸ್ ನಾಯಕರು ಅಡ್ಡಿ ಮಾಡಿದ್ದರೆಂದು ಈ ಹಿಂದೆಯು ಗುಡುಗಿದ್ದ ತಂಗಡಗಿ ಇದೀಗ ಮತ್ತೆ ಎರಡು ವಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ವಾಲ್ಮೀಕಿ ನಿಗಮ ಹಗರಣದ ಆರೋಪಿಯಾಗಿರುವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು ಸೆಪ್ಟಂಬರ್ 1ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ರಾಯಚೂರಿನಿಂದ ಬಳ್ಳಾರಿವರೆಗೆ ವಿವಿಧ ಮಾರ್ಗಗಳ ಮೂಲಕ ಈ ಪಾದಯಾತ್ರೆ ಜರುಗಲಿದೆ.

ಜನರ ಶಾಪಕ್ಕೆ ಗುರಿಯಾಗಿ ಪಾದಯಾತ್ರೆ
ಪಾದಯಾತ್ರೆಗೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಶಿವರಾಜ ತಂಗಡಗಿ ಅವರು, ಬಿಜೆಪಿ-ಜೆಡಿಎಸ್ ಸಚಿವ ನಾಗೇಂದ್ರ ಹೆಸರಿನಲ್ಲಿ ಕೈಗೊಳ್ಳುತ್ತಿರುವುದು ಪಾದಯಾತ್ರೆ ಅಲ್ಲ, ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಯಾಗದಂತೆ ಹಾಳು ಮಾಡಿ ಜನರ ಶಾಪಕ್ಕೆ ಗುರಿಯಾಗಿರುವ ನಡೆಸುತ್ತಿರುವ ಪಶ್ಚಾತಾಪ ಯಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಶತಮಾನದಲ್ಲೇ ವರದಿಯಾಗದಂತಹ ಬರ ಈ ವರ್ಷ ಎದುರಾಗಿದೆ. ಹೀಗಿರುವಾಗ ಜನರ ಪರ ಕೇಂದ್ರದಿಂದ ಪರಿಹಾರಕ್ಕೆ ಒತ್ತಾಯಿಸುವ ಬದಲು ಪ್ರತಿಪಕ್ಷಗಳ ನಾಯಕರು ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಅವರು ವಿಪಕ್ಷಗಳ ನಡೆ ಟೀಕಿಸಿದರು.
ದೋಸ್ತಿಗಳ ಒಡಕು ಪ್ರದರ್ಶನಕ್ಕೆ ವೇದಿಕೆ
ಬಿಡದಿ ಪಾದಯಾತ್ರೆಯಂತೆ ಇದೂ ಸಹ ದೋಸ್ತಿಗಳ ಒಡಕು ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಬಿಡದಿ ವಿಚಾರದಲ್ಲಿ ವಿಜಯೇಂದ್ರ ಅವರು ಮಾಡಿರುವ ಅವಮಾನಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಲು ಸಾಧ್ಯವೇ ಇಲ್ಲ.
ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ ಒಂದೇ ದಿನದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಜೆಡಿಎಸ್ ಅಲ್ಲದೆ ಬಿಜೆಪಿಯ ಆಂತರಿಕ ಕಚ್ಚಾಟಕ್ಕೂ ಇದು ವೇದಿಕೆಯಾಗಲಿದೆ. ಬಿ. ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ನಡುವೆ ಕ್ರೆಡಿಟ್ ವಾರ್ ಕದನವಾಗಿ ಬದಲಾಗಿದೆ ಎಂದು ಅವರು ಪಾದಯಾತ್ರೆ ಕುರಿತು ಲೇವಡಿ ಮಾಡಿದರು.
ಕೇಂದ್ರದಿಂದಾಗುವ ಅನ್ಯಾಯ ಪ್ರಶ್ನಿಸಿ
ಕೇಂದ್ರದಿಂದ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸದೇ ಆಧಾರರಹಿತವಾಗಿ ನಾಗೇಂದ್ರ ರಾಜೀನಾಮೆ ಕೇಳುತ್ತಿರುವ ಪ್ರತಿಪಕ್ಷಗಳಿಗೆ ದಾರಿಯುದ್ದಕ್ಕೂ ಜನರೇ ಮಂಗಳಾರತಿ ಮಾಡಲಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯ ಆದಾಗ, ನೀಟ್ ಪರೀಕ್ಷೆ ಅಕ್ರಮದಿಂದ 20 ಕ್ಕೂ ಹೆಚ್ಚು ಮಂದಿ ಅಮಾಯಕ ವಿದ್ಯಾರ್ಥಿಗಳು ಸಾವನ್ನಪ್ಪಿದಾಗ ಸುಮ್ಮನಿದ್ದ ಪ್ರತಿಪಕ್ಷಗಳು ಈಗ ಹಾರಾಡುತ್ತಿರುವುದನ್ನು ಜನರೇ ಪ್ರಶ್ನಿಸಲಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡಲೇಬೇಕು ಎಂದಿದ್ದರೆ, ಮೊದಲು ಕರ್ನಾಟಕಕ್ಕೆ ಕೊಟ್ಟ ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ ಎಂದು ತಿರುಗೇಟು ನೀಡಿದರು. ಜೊತೆಗೆ ವಿಪಕ್ಷಗಳ ನಡೆ ಖಂಡಿಸಿ ಒಂದಷ್ಟು ಪ್ರಶ್ನೆಗಳನ್ನು ಬಿಜೆಪಿ-ಜೆಡಿಎಸ್ ಮುಂದೆ ಇಟ್ಟಿದ್ದಾರೆ.
ವಿಪಕ್ಷಗಳಿಗೆ ಸಚಿವರ ನೇರ ಪ್ರಶ್ನೆ ಹೀಗಿವೆ
* 2023ರಲ್ಲಿ ಘೋಷಿಸಿದ ₹5,300 ಕೋಟಿ ಮೇಲ್ದಂಡೆ ಭದ್ರಾ ಅನುದಾನ ಎಲ್ಲಿ?
* ಕರ್ನಾಟಕದ ನ್ಯಾಯಯುತ ತೆರಿಗೆ ಪಾಲು ಎಲ್ಲಿ?
* ಬಾಕಿ ಇರುವ ಕೇಂದ್ರ ಅನುದಾನಗಳು ಎಲ್ಲಿ?
* ಮೇಕೆದಾಟು, ಮಹದಾಯಿ, ಕೃಷ್ಣಾ ಯೋಜನೆಗಳಿಗೆ ಅನುಮತಿ ಎಲ್ಲಿ?
* ನರೇಗಾ ಅಡಿ ಉದ್ಯೋಗ ಸೃಷ್ಟಿ ಎಲ್ಲಿ?
* ಜಲಜೀವನ್ ಅಡಿ ಬರಬೇಕಿವು 16,000 ಕೋಟಿ ರು. ಬಾಕಿ ಎಲ್ಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ನೀವು ಇದೆಲ್ಲವನ್ನು ಕೇಂದ್ರ ಸರ್ಕಾರ ಮುಂದೆ ಪಶ್ನಿಸಬೇಕು.ರಾಜ್ಯದ ಹಕ್ಕಿಗಾಗಿ ಪಾದಯಾತ್ರೆ ಮಾಡಿ, ರಾಜಕೀಯ ನಾಟಕಕ್ಕಾಗಿ ಅಲ್ಲ. ರಾಜ್ಯ ಮೊದಲು ರಾಜಕೀಯ ನಂತರ ಎಂದು ಅವರು ತಿಳಿಸಿದರು.


Click it and Unblock the Notifications
