Bengaluru Election: ಮಹಿಳೆಯರಿಗೆ ಮತದಾನದ ಅರಿವು ಮೂಡಿಸಲು ಪಿಂಕಥಾನ್‌ಗೆ ಚಾಲನೆ
ಬೆಂಗಳೂರು, ಮೇ 08: ನಗರದಲ್ಲಿ ಎಲ್ಲಾ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಂದು ನಮ್ಮ ಸಂವಿಧಾನ ನೀಡಿರುವಂತಹ ಮತದಾನದ ಅಧಿಕಾರವನ್ನು ಚಲಾಯಿಸುವುದರ ಜೊತೆಗೆ ಎಲ್ಲರಲ್ಲೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಮಹಿಳಾ ಮತದಾರರಲ್ಲಿ ಅರಿವು ಮೂಡಿಸಲು ಟೌನ್‌ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಪಿಂಕಥಾನ್ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು. ನಗರದಲ್ಲಿ ಎಲ್ಲಾ ಮಹಿಳೆಯರು ಮತಗಟ್ಟೆಗಳಿಗೆ ಬಂದು ತಪ್ಪದೇ ಮತದಾನ ಮಾಡುವ ಸಲುವಾಗಿ ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ. ತಪ್ಪದೇ ಮತ ಚಲಾಯಿಸಿ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಈಗಾಗಲೇ ಎಲ್ಲರಿಗೂ ಮತದಾರರ ಗುರುತಿನ ಚೀಟಿ ವಿತರಣೆ ಮಾಡಿದ್ದಾರೆ. ಅದರಲ್ಲಿ ಎಲ್ಲಾ ಮಾಹಿತಿಯೂ ಲಭ್ಯವಿರಲಿದೆ. ಇದರಿಂದ ಸುಲಭವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಬಹುದಾಗಿದ್ದು, ಎಲ್ಲರೂ ತಪ್ಪದೆ ಮತದಾನ ಮಾಡಲು ತಿಳಿಸಲಾಗಿದೆ.
ನಗರದಲ್ಲಿ 5 ಪಿಂಕ್ ಬೂತ್: ವಿವಿಧ ಅಲಂಕಾರ
ಮತದಾನದ ದಿನ ಮೇ 10ರಂದು ವೇತನ ಸಹಿತ ರೆಜೆ ಇರಲಿದೆ. ಎಲ್ಲರೂ ತಪ್ಪದೆ ಮತದಾನ ಮಾಡಿ. ಮಹಿಳೆಯರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ 5 ಪಿಂಕ್ ಬೂತ್ ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪಿಂಕ್ ಬೂತ್ ಗಳಲ್ಲಿ ಮಹಿಳಾ ಸಿಬ್ಬಂದಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಪಿಂಕ್ ಬಣ್ಣದಲ್ಲಿ ವಿವಿಧ ಚಿತ್ರಗಳನ್ನು ರಚಿಸುವುದು, ಮತದಾನ ಹಕ್ಕು ಚಲಾಯಿಸಲು ಬರುವವರಿಗೆ ಸ್ವಾಗತ ಕೋರುವುದು, ಸ್ವಾಗತ ಕಮಾನು, ಪಿಂಕ್ ಬಲೂನ್‌ಗಳ ಅಲಂಕಾರ ಸೇರಿದಂತೆ ಮಹಿಳೆಯರನ್ನು ಆಕರ್ಷಿಸುವ ರೀತಿ ಮತಗಟ್ಟೆಗಳನ್ನು ಸಿದ್ದಪಡಿಲಸಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪಿಂಕ್ ಮತಗಟ್ಟೆ ಜೊತೆಗೆ ವಿವಿಧ ಥೀಮ್ ಆಧಾರಿತ ಮತಗಟ್ಟೆ ಸಹ ಮಾಡಲಾಗುತ್ತಿದೆ. ಅದರಂತೆ ಅಂಗವಿಕಲರ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ತಂತ್ರಜ್ಞಾನ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ಸೈನಿಕ ಮತಗಟ್ಟೆ, ಕ್ರೀಡಾ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಸೈನಿಕರ ವಿಶೇಷ ಮತಗಟ್ಟೆಗಳಿರಲಿವೆ ಎಂದರು.
ವಾರ್ಡ್‌ಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ
ಇನ್ನೂ ಮುಖ್ಯವಾಗಿ ಮತದಾನದ ದಿನ ಬುಧವಾರ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದಾದರು ಮತಗಟ್ಟೆಗಳ ಬಳಿ ತುರ್ತು ಸಂಧರ್ಭ ಎದುರಾದಲ್ಲಿ ಆಂಬ್ಯುಲೆನ್ಸ್ ಮತ್ತು ವೈದ್ಯ ಸಿಬ್ಬಂದಿ ಸೇವೆಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ.
ವಿವಿಧ ರಂಗಗಳ ಮಹಿಳಾ ಪ್ರತಿನಿಧಿಗಳು ಪಿಂಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡುವ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿದರು. ವಿಶೇಷ ಚೇತನರು, ವೈದ್ಯರು, ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಸಹಾಯ ಸಂಘದ ಗುಂಪುಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವೋಟ್-ಎ-ಥಾನ್ ವಿಜೇತರಿಗೆ ಪ್ರಶಸ್ತಿ ವಿತರಣೆ
ಸಾರ್ವತ್ರಿಕ ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಆಯೋಜಿಸಿದ್ದ ವೋಟ್-ಎ-ಥಾನ್(Vote-A-Thon) ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5000ರೂ. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಯಿತು.












Click it and Unblock the Notifications