Prajwal Revanna sexual assault case: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರೆಂಟ್
ಬೆಂಗಳೂರು, ಮೇ. 19: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಶನಿವಾರ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಬೆಂಗಳೂರಿನ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ವಿರುದ್ಧ ಹೊರಡಿಸಲಾದ ಮೊದಲ ವಾರಂಟ್ ಆಗಿದೆ. ಪ್ರಜ್ವಲ್ ಅವರ ತಂದೆ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಕೂಡ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ವಾರಂಟ್ ಹೊರಡಿಸಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪುತ್ರ ರೇವಣ್ಣ, ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಬಳಿಕ ಏಳು ದಿನಗಳ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಂದಿದ್ದಾರೆ. ಎನ್‌ಡಿಎಯ ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ವಿರುದ್ಧ ಮೂವರು ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಮೂರು ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಎಸ್ಐಟಿ ಮನವಿ ಮೇರೆಗೆ ಅರೆಸ್ಟ್ ವಾರಂಟ್
ಅರೆಸ್ಟ್ ವಾರಂಟ್ ಹೊರಡಿಸಿರುವುದು ಅವರ ಪಾಸ್‌ಪೋರ್ಟ್ ರದ್ದುಪಡಿಸುವ ಮೊದಲ ಹೆಜ್ಜೆಯಾಗಿದೆ. ಈ ವಾರಂಟ್ ಅವರು ದೇಶಕ್ಕೆ ವಾಪಸ್ ಆಗುವಂತೆ ಮಾಡುತ್ತದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಮನವಿಯ ಮೇರೆಗೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ವಾರಂಟ್ ಹೊರಡಿಸಿದೆ.
ಲೈಂಗಿಕ ಕಿರುಕುಳದ ಅನೇಕ ಪ್ರಕರಣಗಳ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ಅವರು ಏಪ್ರಿಲ್ 27 ರ ಬೆಳ್ಳಂಬೆಳಗ್ಗೆ ದೇಶದಿಂದ ಜರ್ಮನಿಗೆ ಪರಾರಿಯಾಗಿದ್ದಾರೆ. ಇಂಟರ್‌ಪೋಲ್ ಅವರ ಪ್ರಸ್ತುತ ಸ್ಥಳವನ್ನು ಕೋರಿ ಅದರ 196 ಸದಸ್ಯ ರಾಷ್ಟ್ರಗಳಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಇನ್ನೂ ಪ್ರತಿಕ್ರಿಯೆ ಪಡೆಯುವ ಹಂತದಲ್ಲೇ ಇದೆ.
ಗುಪ್ತಚರ ಮೂಲಗಳ ಪ್ರಕಾರ ಅವರು ಯುರೋಪ್‌ನಾದ್ಯಂತ ಪ್ರಯಾಣಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಹಂಗೇರಿ, ಆಸ್ಟ್ರಿಯಾ, ಇಂಗ್ಲೆಂಡ್ ಮತ್ತು ದುಬೈಗೆ ಹೋಗಿದ್ದರು ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಏಪ್ರಿಲ್ 27 ರಂದು ಜರ್ಮನಿಗೆ ಹೊರಟಿದ್ದ ಅವರು ಮೇ 15 ರಂದು ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಕಾಯ್ದಿರಿಸಿದ್ದರು, ಇತ್ತೀಚೆಗೆ ಕೊನೆಯ ಕ್ಷಣದಲ್ಲಿ ಅದನ್ನು ರದ್ದುಗೊಳಿಸಿದರು. ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೂ ಅವರು ಹಿಂತಿರುಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣನಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ತೋರಿಸುವ ಸಾವಿರಾರು ಸ್ಪಷ್ಟ ವೀಡಿಯೊಗಳು ಸಾರ್ವಜನಿಕವಾಗಿ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಸಂಸತ್ರಸ್ತರಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರ ಶಿಫಾರಸಿನ ಮೇರೆಗೆ ಕರ್ನಾಟಕ ಸರ್ಕಾರವು ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.












Click it and Unblock the Notifications