ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಯತ್ನ!
ಬೆಂಗಳೂರಿನಲ್ಲಿ ಜನವರಿ 2ರಂದು ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಯತ್ನದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಈ ಘಟನೆ ನಡೆದಿದ್ದು, ಯಾವುದೇ ದೂರು ದಾಖಲಾಗಿಲ್ಲ ಎಂದು ಮಾಧ್ಯಮದಲ್ಲಿ ವರದಿಯಾಗಿದೆ
ಬೆಂಗಳೂರು, ಜನವರಿ 7: ಯುವತಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜನವರಿ 2ರಂದು ಈ ಕೃತ್ಯ ನಡೆದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಈ ಘಟನೆ ಸಂಭವಿಸಿದೆ. ಸಂಜೆ ವೇಳೆ ಮೊಬೈಲ್ ಫೋನ್ ನೋಡಿಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ವ್ಯಕ್ತಿಯೊಬ್ಬ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.
ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೊಬೈಲ್ ನೋಡಿಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಗಾಬರಿಗೊಂಡ ಆಕೆ ಕೂಗಿಕೊಂಡಿದ್ದಾರೆ. ಆದರೆ ಅಲ್ಲೇ ಇದ್ದ ಮಹಿಳಾ ಪೊಲೀಸರು ಆಕೆ ನೆರವಿಗೆ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಆ ಯುವತಿ ಅಧಿಕೃತವಾಗಿ ದೂರು ದಾಖಲಿಸಿಲ್ಲ. ಆದರೆ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂಬುದು ಮಾಧ್ಯಮಗಳ ವರದಿಯಲ್ಲಿ ತಿಳಿದುಬಂದಿರುವ ಮಾಹಿತಿ.[ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?]

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ, ಕಮ್ಮನಹಳ್ಳಿಯಲ್ಲಿ ದುಷ್ಕರ್ಮಿಗಳು ಯುವತಿ ಮೇಲೆ ಎಸಗಿದ ದೌರ್ಜನ್ಯ, ಕೆ.ಜಿ.ಹಳ್ಳಿಯಲ್ಲಿ ನಾಲಗೆ ಕಚ್ಚಿದ ದುಷ್ಕರ್ಮಿ.. ಹೀಗೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications