ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ಪತ್ತೆ, ಆಮೇಲೆ ನಾಪತ್ತೆ
ಬೆಂಗಳೂರು ಏಪ್ರಿಲ್ 19: ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೋಟಿ ಕೋಟಿ ಹಣ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಆದರೆ ಆ ಹಣ ಕೆಲ ಹೊತ್ತಲ್ಲಿ ನಾಪತ್ತೆಯಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಏಳು ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದ ನಂತರ ಆ ಹಣ ಮಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ದಕ್ಷಿಣ ವಿಭಾಗದ ಪೊಲೀಸರು ನಗದು ಪತ್ತೆಯಾದ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಮೇಲೆ ಗದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ತಡರಾತ್ರಿ ಪೊಲೀಸರು ವಾಹನಗಳ ತಪಾಸಣೆ ನಡೆಸುವ ವೇಳೆ ಏಳು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಅಚ್ಚರಿ ಎಂದರೆ ಹಣ ಪತ್ತೆಯಾಗುತ್ತಿದ್ದಂತೆ ಐಎಎಸ್ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದು, ಬಳಿಕ ಹಣ ಎಲ್ಲಿ ಹೋಗಿದೆ ಎಂಬುದು ನಿಗೂಢವಾಗಿದೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಪತ್ತೆಯಾದ ಬೃಹತ್ ಮೊತ್ತದ ಹಣ ಇದಾಗಿದೆ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರಿಗೆ ಸಿಕ್ಕ ಕೋಟ್ಯಾಂತರ ರೂಪಾಯಿಗಳನ್ನು ಯಾರ ಕೈಗೂ ಸಿಗದೇ ತೆಗೆದುಕೊಂಡು ಹೋಗಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆದ ದಿನದಿಂದಲೇ (ಮಾರ್ಚ್ 29) ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಆಯೋಗದ ಅಧಿಕಾರಿಗಳು ಅಕ್ರಮ ನಡೆಯದಂತೆ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚೆಕ್‌ಪೋಸ್ಟ್, ಅಗತ್ಯ ತಪಾಸಣೆ ನಡೆಸುವ ಮೂಲಕ ಕೆಟ್ಟೆಚ್ಚರ ವಹಿಸಲಾಗುತ್ತಿದೆ.
ಕೆ.ಆರ್.ಮಾರುಕಟ್ಟೆ ದಾಖಲೆ ರಹಿತ ಹಣ ವಶ
ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಪೊಲೀಸರು ಆಟೋ ರಿಕ್ಷಾವೊಂದರಲ್ಲಿ ಒಂದು ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಬೆಂಗಳೂರು ನಗರ ಕೆ.ಆರ್.ಮಾರುಕಟ್ಟೆ ಸಮೀಪ ಗುರುವಾರ ಆಟೋ ರಿಕ್ಷಾವೊಂದರಲ್ಲಿ ದಾಖಲೆಯೇ ಇಲ್ಲದ ಅಪಾರ ಪ್ರಮಾಣದ ಹಣ ಸಾಗಾಣೆ ಆಗುತ್ತಿತ್ತು. ಇದನ್ನು ತಡೆದ ಚುನಾವಣಾಧಿಕಾರಿಗಳು ಮತ್ತು ಪೊಲೀಸರು ತಪಾಸಣೆ ನಡೆಸಿದಾಗ ಲೆಕ್ಕಕ್ಕೆ ಸಿಗದ ಸುಮಾರು 1ಕೋಟಿ ಹಣ ದೊರೆತಿದೆ. ಕೂಡಲೇ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಹಲವೆಡೆ ಝಣ ಝಣ ಕಾಂಚಾಣಾ
ಇನ್ನು ಕಳೆದ ತಿಂಗಳು ವಿಜಯಪುರ ಜಿಲ್ಲೆಯ ಚಡಚಣ ಪೊಲೀಸರು ಅನುಮಾನಾಸ್ಪದವಾಗಿ ಕಾರಿನಲ್ಲಿ ತೆರಳುತ್ತಿದ್ದವರ ತಪಾಸಣೆ ಮಾಡಿ ದಾಖಲಾತಿ ಇಲ್ಲದೆ ಸಾಗಾಟ ಮಾಡುತ್ತಿದ್ದ 480 ಗ್ರಾಂ ಚಿನ್ನಾಭರಣ 6 ಲಕ್ಷ ನಗದು ವಶಪಡಿಸಿಕೊಂಡಿದ್ದರು.
ಮಂಡ್ಯದ ನಾಗಮಂಗಲ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. ನಾಗಮಂಗಲ ತಾಲೂಕು ಚಿಣ್ಯ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ಘಟನೆ ನಡೆದಿದ್ದು, ಹೊಸದುರ್ಗದಿಂದ ಮಂಡ್ಯ ತಾಲೂಕಿನ ಶಿವಳ್ಳಿಗೆ ಬರುತ್ತಿದ್ದ ಕ್ಯಾಂಟರ್ನಲ್ಲಿ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ. 50 ಕೆ.ಜಿ ತೂಕದ 250 ಚೀಲಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾಮನಗರ ತಾಲೂಕಿನ ಹನುಮಂತನಗರ ಚೆಕ್ ಪೋಸ್ಟ್ನಲ್ಲಿ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋವಾ ಕಾರಿನಲ್ಲಿ ಜಯಂತ್ ಎಂಬವರು ಬೆಂಗಳೂರಿನಿಂದ ಮೈಸೂರಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು. ಘಟನೆ ಬಗ್ಗೆ ಬಿಡದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಇಂದು ಒಂದೇ ದಿನ ದಾಖಲೆ ಇಲ್ಲದ 10 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ 200 ಲೀಟರ್ ಮದ್ಯ, 65 ಕೆ.ಜಿ ಡ್ರಗ್ಸ್, ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 27 ಕಡೆಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. 25 ಮಂದಿ ಕ್ರಿಮಿನಲ್ ಗಳನ್ನು ಗಡಿಪಾರು ಮಾಡಲಾಗಿದೆ. ಉಳಿದಂತೆ ಇಬ್ಬರು ಕ್ರಿಮಿನಲ್ ಗಳ ಮೇಲೆ ಗೂಂಡಾ ಆಕ್ಟ್ ದಾಖಲು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.












Click it and Unblock the Notifications