ಪಾದರಾಯನಪುರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಡಿಗೇಡಿಗಳ ಆವಾಜ್
ಬೆಂಗಳೂರು, ಏಪ್ರಿಲ್.20: ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆಗೆ ತೆರಳಿದ್ದ ವೇಳೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಂಧಲೆಯಲ್ಲಿ ಆಶಾ ಕಾರ್ಯಕರ್ತೆಯರು ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯಕೀಯ ತಪಾಸಣೆ ಮತ್ತು ಕೊರೊನಾ ಶಂಕಿತರ ಸ್ಥಳಾಂತರಕ್ಕೆ ತೆರಳಿದ್ದ ವೇಳೆ ಕೆಲವು ಕಿಡಿಗೇಡಿಗಳು ತಮ್ಮ ಮೇಲೆ ಹಲ್ಲೆಗೆ ಮುಂದಾದರು. ಇನ್ನೊಂದು ಬಾರಿ ಇಲ್ಲಿಗೆ ಬಂದರೆ ನೋಡಿ ಎಂದು ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿದ್ದರು ಎಂದು ಆಶಾ ಕಾರ್ಯಕರ್ತೆಯರು ಆರೋಪಿಸುತ್ತಿದ್ದಾರೆ.
ಕಿಡಿಗೇಡಿಗಳು ದಾಂಧಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಅಲ್ಲಿಂದ ತೆರಳಿದ್ದಾರೆ. ಇನ್ನು, ಪಾದರಾಯನಪುರದಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ ಇದುವರೆಗೂ 54 ಜನರನ್ನು ಬಂಧಿಸಲಾಗಿದೆ.

54 ಜನರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು:
ಬೆಂಗಳೂರು ಪಾದರಾಯನಪುರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಜೆ.ಜೆ.ನಗರ ಠಾಣೆ ಪೊಲೀಸರು ಇದುವರೆಗೂ 54 ಜನರನ್ನು ಬಂಧಿಸಿದ್ದಾರೆ. ಗಲಾಟೆಯ ಹಿಂದಿನ ರಹಸ್ಯ ಏನು ಎಂಬುದನ್ನು ತಿಳಿದುಕೊಳ್ಳಲು ಎಲ್ಲರ ಮೊಬೈಲ್ ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು, ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 353, 307, ಎನ್ ಡಿಎಂಎ 353, 332, 324, ಹಾಗೂ 201ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದ್ ಮುಖರ್ಜಿ ತಿಳಿಸಿದ್ದಾರೆ.












Click it and Unblock the Notifications