Scratch card scam: ಎಚ್ಚರ... ಬೆಂಗಳೂರಲ್ಲಿ ಶುರುವಾಗಿದೆ 'ಸ್ಕ್ರ್ಯಾಚ್ ಕಾರ್ಡ್' ಸ್ಕ್ಯಾಮ್
ಬೆಂಗಳೂರು, ಮೇ. 12: ಸಿಲಿಕಾನ್ ಸಿಟಿ ಸೇರಿ ಅನೇಕ ನಗರಗಳಲ್ಲಿ ಆನ್‌ಲೈನ್ ಶಾಪಿಂಗ್ ಜೋರಾಗಿಯೇ ನಡೆಯುತ್ತಿದೆ. ಇ ಕಾಮರ್ಸ್ ವೆಬ್‌ಸೈಟ್‌ಗಳ ಸೋಗಿನಲ್ಲಿ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸ್ಕ್ರ್ಯಾಚ್ ಕಾರ್ಡ್‌ಗಳನ್ನು ಕಳುಹಿಸಿ ಲೂಟಿ ಮಾಡುತ್ತಿರುವ ಹೊಸ ಹಗರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೇ 7 ರಂದು ಪಶ್ಚಿಮ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ 45 ವರ್ಷದ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಪೊಲೀಸ್ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಮೂರು ತಿಂಗಳ ಕಾಲ ನಡೆದ ಈ ವಂಚನೆಯಲ್ಲಿ ಮಹಿಳೆ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮೀಶೋ ಹೆಸರಲ್ಲಿ 18 ಲಕ್ಷ ರೂಪಾಯಿ ವಂಚನೆ
ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ ಜನವರಿ 28, 2024 ರಂದು ಮಹಿಳೆ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೀಶೋನಿಂದ ಎಂದು ಹೇಳಿಕೊಳ್ಳುವ ಲಕೋಟೆ ಒಂದನ್ನು ಪಡೆದಿದ್ದಾರೆ. ಲಕೋಟೆಯೊಳಗೆ ಅವರಿಗೆ ಸೂಚನೆಗಳು, ಸಂಪರ್ಕ ವಿವರಗಳು ಮತ್ತು ಸ್ಕ್ರ್ಯಾಚ್ ಕಾರ್ಡ್ ಜೊತೆಗೆ ಪತ್ರ ಕೂಡ ಇತ್ತು.
ಮಹಿಳೆ ತನ್ನ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದ್ದಾರೆ. ಸೂಚನೆಗಳ ಪತ್ರ ಮತ್ತು ಸಂಪರ್ಕ ವಿವರಗಳೊಂದಿಗೆ ಸ್ಕ್ರ್ಯಾಚ್ ಕಾರ್ಡ್ ಅನ್ನು ಗೀಚಿದಾಗ ಆಕೆ 15.51 ಲಕ್ಷ ರೂಪಾಯಿ ಗೆದ್ದಿದ್ದಾರೆ ಎಂದು ಹೇಳಲಾಗಿದೆ. ಕೂಡಲೇ ಪತ್ರದಲ್ಲಿ ಇದ್ದ ನಂಬರ್‌ಗೆ ಡಯಲ್ ಮಾಡಿ ವಿಷಯ ತಿಳಿಸಿದ್ದಾರೆ. ಕರೆಯ ಇನ್ನೊಂದು ತುದಿಯಲ್ಲಿರುವ ವ್ಯಕ್ತಿಯು ಸ್ಕ್ರ್ಯಾಚ್ ಕಾರ್ಡ್‌ನ ಛಾಯಾಚಿತ್ರಗಳನ್ನು ಮತ್ತು ಆಧಾರ್ ಸೇರಿಸದಂತೆ ಕೆಲವು ಗುರುತಿನ ಚೀಟಿಗಳನ್ನು ಶೇರ್ ಮಾಡುವಂತೆ ಕೇಳಿಕೊಂಡಿದ್ದಾರೆ.

ಅಗತ್ಯವಿರುವ ಎಲ್ಲಾ ವಿವರಗಳನ್ನು ಕಳುಹಿಸಿದ ನಂತರ, ಮಹಿಳೆಯು ಕರ್ನಾಟಕದಲ್ಲಿ ಲಾಟರಿ ಟಿಕೆಟ್ ಕಾನೂನುಬಾಹಿರ ಆಗಿರುವುದರಿಂದ ಮೊದಲು 30% ತೆರಿಗೆಯನ್ನು ಪಾವತಿಸಬೇಕು. ಫೆಬ್ರವರಿ ಮತ್ತು ಮೇ ನಡುವೆ ಅನೇಕ ಬಾರಿ ಹಣವನ್ನು ವರ್ಗಾಯಿಸುವಂತೆ ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಹಣ ಕಳುಹಿಸಿದ ಬಳಿಕ ಎಲ್ಲಾ ಹಣ ಮತ್ತು ನಿಜವಾದ ಲಾಟರಿ ಮೊತ್ತವನ್ನು ಹಾಕಲಾಗುತ್ತದೆ ಎಂದು ಭರವಸೆ ನೀಡಲಾಗಿತ್ತು. ಮಹಿಳೆಯು RTGS ಮೂಲಕ ಒಟ್ಟು 18 ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದಾರೆ ಎಂದು ವರದಿಯಾಗಿದೆ.
ಬಳಿಕ ಇನ್ನೊಂದು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ. ವಂಚಕರ ಮೇಲೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಮತ್ತು ಸೆಕ್ಷನ್‌ಗಳ 66 ಸಿ (ಗುರುತಿನ ಕಳ್ಳತನಕ್ಕೆ ಶಿಕ್ಷೆ) ಮತ್ತು 66 ಡಿ (ಕಂಪ್ಯೂಟರ್ ಸಂಪನ್ಮೂಲ ಬಳಸಿ ವಂಚನೆ), 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ) ಮತ್ತು IPC 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications