ಗೌರಿ ಲಂಕೇಶ್ ಹತ್ಯೆ ತನಿಖೆಗೆ ಸ್ಕಾಟ್ಲೆಂಡ್ ಪೊಲೀಸರ ನೆರವು
ಬೆಂಗಳೂರು, ಸೆಪ್ಟೆಂಬರ್ 15: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ), ಈವರೆಗೆ ಯಾವುದೇ ವಿಶೇಷ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ಪೊಲೀಸರ ನೆರವು ಕೋರಿದ್ದಾರೆ.
ಎಸ್ಐಟಿಯಿಂದ ಮನವಿ ಬಂದ ಹಿನ್ನೆಲೆಯಲ್ಲಿ, ಸ್ಕಾಟ್ಲೆಂಡ್ ನಿಂದ ನಾಲ್ವರು ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವಾರ ಕಳೆದಿದ್ದರೂ ಕೊಲೆಗಾರರ ಸುಳಿವನ್ನು ನಿಖರವಾಗಿ ಕೊಡುವಂಥ ಯಾವುದೇ ಸಾಕ್ಷಿಯು ಈವರೆಗೆ ಎಸ್ಐಟಿಗೆ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ, ಇರುವ ಸಾಕ್ಷ್ಯಾಧಾರಗಳನ್ನು ಇನ್ನಷ್ಟು, ಮತ್ತಷ್ಟು ಪರಿಶೀಲನೆಗೊಳಿಸುವ ಅವಶ್ಯಕತೆ ಎಸ್ಐಟಿಗೆ ಕಂಡುಬಂದಿದೆ.
ಹಾಗಾಗಿ, ಇಂಥ ಸೀಮಿತ ಸಾಕ್ಷ್ಯಾಧಾರಗಳಲ್ಲೇ ಏನಾದರೊಂದು ಹೊಸ ಮಾಹಿತಿ ಕಲೆಹಾಕುವಲ್ಲಿ ನಿಷ್ಣಾತರಾಗಿರುವ ಸ್ಕಾಟ್ಲೆಂಡ್ ಪೊಲೀಸರ ಸಹಾಯ ಪಡೆಯಲು ಎಸ್ಐಟಿ ಮುಂದಾಗಿದೆ.
ಪಿಸ್ತೂಲಿನಿಂದ ಹಾರಿರುವ ಗುಂಡಿನ ಮಾದರಿ, ಅದು ದೇಹದ ಮೇಲೆ ಗಾಯ ಸೇರಿದಂತೆ ಇಂಡ್ಯುವಿಷ್ಯುಯಲ್ ಕ್ಯಾರೆಕ್ಟರ್ ಚೆಕ್, ಚೇಂಬರ್ ಮಾರ್ಕ್ ಮುಂತಾದ ಕೆಲವಾರು ವಿಶೇಷ ಪರೀಕ್ಷೆಗಳ ಮೂಲಕ ಸ್ಕಾಟ್ಲೆಂಡ್ ಪೊಲೀಸರು ಗುಂಡು ಹಾರಿದ ಪಿಸ್ತೂಲಿನ ನಿಖರವಾದ ಮಾಹಿತಿ, ಕೊಲೆಗಾರರ ಸಂಚಿನ ಬಗ್ಗೆ ನಿಖರವಾದ ವಿವರಗಳನ್ನು ನೀಡಬಲ್ಲವರಾಗಿದ್ದಾರೆಂದು ಮೂಲಗಳು ತಿಳಿಸಿವೆ.












Click it and Unblock the Notifications