Karnataka: ವಾಹನಗಳಿಗೆ ಸುರಕ್ಷಾ ನೋಂದಣಿ ಫಲಕ (HSRP) ಯೋಜನೆಯಲ್ಲಿ ಅಕ್ರಮ?: ವಿವಿ ವಿದ್ಯಾರ್ಥಿಗಳ ಒಕ್ಕೂಟ
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ಮುನ್ನವೇ ಅಕ್ರಮದ ಸಂಚು ನಡೆದಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷ ಲೋಕೇಶ್ ರಾಮ್ ಮಾತನಾಡಿ, ಈ ವಿಚಾರ ಕುರಿತು ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ. ದೂರಿನ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳೂವಂತೆ ಆಗ್ರಹಿಸಿದ್ದೇವೆ ಎಂದರು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಈ HSRP ಯೋಜನೆಯನ್ನು ಲಂಚದ ಆಸೆಗಾಗಿ ಹಾದಿತಪ್ಪಿಸುವ ಹುನ್ನಾರ ನಡೆದಿದೆ. ವಾಹನ ಕಳ್ಳತನ ತಡೆಯುವುದು, ಕದ್ದ ವಾಹನಗಳನ್ನು ಬಳಸಿ ನಡೆಯುವ ಕೃತ್ಯಗಳನ್ನು ಹಾಗೂ ಕಾನೂನು ಉಲ್ಲಂಘನೆಯಂತಹಾ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ HSRP ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
20,000 ಹೆಚ್ಚು ಕುಟುಂಬಗಳು ಬೀದಿಗೆ ?
ವಾಹನಗಳ 'ನಂಬರ್ ಪ್ಲೇಟ್' ನಲ್ಲಿಯೇ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈ ಪ್ರಕ್ರಿಯೆ ಕರ್ನಾಟಕದಲ್ಲೂ ಜಾರಿಗೆ ಬರಲಿದ್ದು ಸಾರಿಗೆ ಇಲಾಖೆಯು ನಿಯಮಗಳನ್ನು ಸಿದ್ದಪಡಿಸಿದೆ. ಈ ಯೋಜನೆಗಾಗಿ ತಯಾರಿಕಾ ಕಂಪನಿಗಳ ಆಯ್ಕೆ ಪ್ರಕ್ರಿಯೆ ಹಳಿತಪ್ಪಿದೆ. ಸುಮಾರು 20,000 ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಅವರು ಯೋಜನೆ ಬಗ್ಗೆ ವಿವರಿಸಿದರು.
ಯೋಜನೆಗಾಗಿ ವಿಶಿಷ್ಟ ತಂತ್ರಜ್ಞಾನದ ನಂಬರ್ ಪ್ಲೇಟ್'ಗಳನ್ನು ತಯಾರಿಸುವ ಸುಮಾರು 20 ಕಂಪನಿಗಳಿಗೆ ಕೇಂದ್ರ ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಆದರೆ ಕರ್ನಾಟಕದಲ್ಲಿ ಕೆಲವು ಮಾಫಿಯಾಗಳ ಒತ್ತಡಕ್ಕೆ ಒಳಗಾಗಿ ಕೇವಲ 4-5 ಕಂಪನಿಗಳ ಉತ್ಪನ್ನಗಳಿಗಷ್ಟೇ ಅನುಮತಿ ನೀಡಲು ರಹಸ್ಯ ತಯಾರಿ ನಡೆದಿದೆ.

ಸಾರಿಗೆ ಇಲಾಖೆ ಅಧಿಕಾರಿಗಳ ಭಾರೀ ಪ್ರಮಾಣದ ಲಂಚದ ಆಸೆಯಿಂದಾಗಿ ಇಡೀ ಯೋಜನೆಯೇ ಹಾದಿ ತಪ್ಪುವ ಸಾಧ್ಯತೆಗಳಿವೆ ಎಂದು ಲೋಕೇಶ್ ರಾಮ್ ಕಳವಳ ವ್ಯಕ್ತಪಡಿಸಿದರು.
ಹಳೇ ವಾಹನಗಳಗೆ ನಂಬರ್ ಪ್ಲೇಟ್ ಅಳವಡಿಕೆ ಸವಾಲು
ದೇಶದಲ್ಲಿ ಪ್ರಸಕ್ತ ಇರುವ ಸುಮಾರು 30 ಕೋಟಿ ಹಳೆಯ ವಾಹನಗಳ ಪೈಕಿ ಕರ್ನಾಟಕದಲ್ಲೇ 2 ಕೋಟಿಗಳಷ್ಟು ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳಿಗೆ ನಂಬರ್ ಪ್ಲೇಟ್ ಅಳವಡಿಸಲು ಈ HSRP ಸುಮಾರು ರೂ.400 ರಿಂದ 950 ರೂಪಾಯಿ ದರ ಇದ್ದು ತಯಾರಿ ವೆಚ್ಚಕ್ಕಿಂತ ದುಪ್ಪಟ್ಟು ದರದಲ್ಲಿ ಮಾರಾಟವಾಗಲಿದೆ. ಶೇಕಡಾ 50ರಷ್ಟು ಲಾಭವಿದ್ದು ಸುಮಾರು 500 ಕೋಟಿ ರೂಪಾಯಿ ಲಾಭವನ್ನು ದೋಚಲು ಕೆಲವು ಕಂಪನಿಗಳು ಅಡ್ಡ ದಾರಿ ಹಿಡಿದಿವೆ ಎಂದರು.
ಇನ್ನೂ ಈ ಸುರಕ್ಷಾ ನಂಬರ್ ಪ್ಲೇಟುಗಳನ್ನು ಪೂರೈಸುವ ಅವಕಾಶವನ್ನು ಕೆಲವೇ ಕಂಪನಿಗಳಿಗಷ್ಟೇ ಸೀಮಿತಗೊಳಿಸುವ ಕ್ರಮ ಸರಿಯಲ್ಲ. ಎಲ್ಲ ಅನುಮೋದಿತ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ನೀಡುವ ಅವಕಾಶ ಸಿಗಬೇಕಿದೆ. ಒಂದು ವೇಳೆ ಸರ್ಕಾರ ಅಥವಾ ಅಧಿಕಾರಿಗಳು ಒಳ ಒಪ್ಪಂದ ಮಾಡಿ ನಿರ್ದಿಷ್ಟ ಕಂಪೆನಿಗಳಿಗಷ್ಟೇ HSRP ಪೂರೈಸುವ ಅವಕಾಶ ನೀಡಿದಲ್ಲಿ, ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸಾಧನವನ್ನು ಖರೀದಿಸುವ ಗ್ರಾಹಕನ ಆಯ್ಕೆ ಸ್ವಾತಂತ್ರವನ್ನೂ ಮೊಟಕುಗೊಳಿಸಿದಂತಾಗುತ್ತದೆ.
ಭ್ರಷ್ಟಾಚಾರ ಮುಕ್ತವಾಗಿ ಯೋಜನೆ ಜಾರಿಯಾಗಬೇಕಾದರೆ, ಎಲ್ಲಾ ಅನುಮೋದಿತ ಕಂಪನಿಗಳ HSRP ವಿತರಣೆಗೆ ರಾಜ್ಯದಲ್ಲಿ ಅವಕಾಶ ಸಿಗಬೇಕು. ಜನಸ್ನೇಹಿ ವ್ಯವಸ್ಥೆಯಲ್ಲಿ ಸ್ವಉದ್ಯೋಗಾಕಾಂಕ್ಷಿಗಳಿಗೂ ಅವಕಾಶ ಸಿಗುವಂತೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.












Click it and Unblock the Notifications