ಕನ್ನಡಿಗರಿಗೆ ಹೆದರಿ ಕರ್ನಾಟಕದಿಂದಲೇ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ!
ಕರ್ನಾಟಕದಲ್ಲಿ ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎಂದು ದರ್ಪದಿಂದ ಮಾತನಾಡಿದ್ದ ಚಂದಾಪುರ ಎಸ್‌ಬಿಐ ಬ್ಯಾಂಕ್‌ನ ಲೇಡಿ ಮ್ಯಾನೇಜರ್ ಹುದ್ದೆಯಲ್ಲಿದ್ದ ಮಹಿಳೆಯನ್ನು ರಾತ್ರೋರಾತ್ರಿ ಕರ್ನಾಟಕದಿಂದಲೇ ಎತ್ತಂಗಡಿ ಮಾಡಲಾಗಿದೆ. ಈಗಾಗಲೇ ಆ ಅಧಿಕಾರಿ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದರೂ ಕೋಪ ತಣ್ಣಗಾಗಿಲ್ಲ. ಅಧಿಕಾರಿ ನಗುತ್ತಾ ಕಾಟಾಚಾರದಿಂದ ಕ್ಷಮೆ ಕೇಳಿದ್ದಾರೆ ಎಂದು ಮತ್ತೆ ಆಕೆಯ ವಿರುದ್ಧ ಸಿಡಿದೆದ್ದಿದ್ದಾರೆ. ಸೀದಾ ಎಸ್‌ಬಿಐ ಬ್ಯಾಂಕ್‌ಗೆ ಮುತ್ತಿಗೆ ಹಾಕುವ ಮೂಲಕ ಕನ್ನಡ ಪರ ಸಂಘಟನೆಗಳು ಬಿಸಿ ಮುಟ್ಟಿಸಿವೆ.
ಬ್ಯಾಂಕ್‌ನಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ನಾನು ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ. ಇದು ಇಂಡಿಯಾ, ಹಿಂದಿ ಅಷ್ಟೇ ಎಂದು ದರ್ಪದಿಂದ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿ ಕೂಡಲೇ ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೆ ಆ ಬ್ಯಾಂಕ್‌ಗೆ ಮುತ್ತಿಗೆ ಹಾಕುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರರಿಂದ ಎಸ್‌ಬಿಐ ಕೂಡಲೇ ಎಚ್ಚೆತ್ತುಕೊಂಡಿದೆ. ಬ್ಯಾಂಕ್ ಆಡಳಿತ ಮಂಡಳಿಯು ಆ ಮ್ಯಾನೇಜರ್ ಅನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡಲ್ಲ ಎಂದಿದ್ದಕ್ಕೆ ಹೊರ ರಾಜ್ಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ನಾನು ಕರ್ನಾಟಕದಲ್ಲಿ ಎಂದಿಗೂ ಕನ್ನಡದಲ್ಲಿ ಮಾತನಾಡಲ್ಲ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರಿಂದ ಆ ಅಧಿಕಾರಿಯಿಂದ ಕನ್ನಡದಲ್ಲೇ ಕ್ಷಮೆ ಕೇಳಿಸಿ, ಕೂಡಲೇ ಟ್ರಾನ್ಸ್‌ಫರ್ ಮಾಡಲಾಗಿದೆ. ಕನ್ನಡ ಮಾತನಾಡದ ಮೇಲೆ ಅವರ ಕರ್ನಾಟಕದಲ್ಲಿ ಇರುವುದು ಸರಿಯಲ್ಲ ಎಂದು ಮನಗಂಡು ರಾಜ್ಯದಿಂದಲೇ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ತಣ್ಣಗಾಗದ ಕೋಪ
ವಿಡಿಯೋ ಮೂಲಕ ಕ್ಷಮೆ ಕೇಳಿದ್ದರೂ ಬ್ಯಾಂಕ್ ವಿರುದ್ಧ ಕನ್ನಡಿಗರ ಕೋಪ ತಣ್ಣಗಾಗಿಲ್ಲ. ಇಂದು ಕೂಡ ಬ್ಯಾಂಕ್‌ಗೆ ಮುತ್ತಿಗೆ ಯತ್ನ, ಪ್ರತಿಭಟನೆ, ರಸ್ತೆ ತಡೆ ಮೂಲಕ ಕನ್ನಡಿಗರು ಖಡಕ್ ಎಚ್ಚರಿಕೆ ನೀಡುವ ಕೆಲಸ ಮುಂದುವರಿಸಿದ್ದಾರೆ. ದರ್ಪ ತೋರಿದ ಮ್ಯಾನೇಜರ್ ವಿರುದ್ಧ ಇಂದು ಚಂದಾಪುರದ ಶಾಖೆಗೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಚಂದಾಪುರದ ಎಸ್‌ಬಿಐ ಶಾಖೆಯಲ್ಲಿ 'ನಾನು ಕನ್ನಡ ಮಾತಾಡುವುದಿಲ್ಲ' ಎಂದು ಅಧಿಕಾರಿಯೊಬ್ಬರು ಹೇಳಿದ ವೀಡಿಯೋ ನೋಡಿದೆ. ಆ ಅಧಿಕಾರಿಯ ದುರಹಂಕಾರದ ನಡತೆಯನ್ನು ನಾನು ಖಂಡಿಸುತ್ತೇನೆ. ಬ್ಯಾಂಕ್ ಅಧಿಕಾರಿಗಳು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕಾದ್ದು ಅಗತ್ಯ. ಘಟನೆಯ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಚಂದಾಪುರದ ಎಸ್‌ಬಿಐ ಬ್ಯಾಂಕ್ ಶಾಖೆಯಲ್ಲಿ 'ನಾನು ಕನ್ನಡ ಮಾತಾಡುವುದಿಲ್ಲ' ಎಂದು ಅಧಿಕಾರಿಯೊಬ್ಬರು ತೋರಿರುವ ದುವರ್ತನೆ ಅತ್ಯಂತ ಖಂಡನೀಯ ಎಂದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಹಾಗು ನೌಕರರು ತಾವು ಸೇವೆ ಸಲ್ಲಿಸುತ್ತಿರುವ ನೆಲದ ಭಾಷೆ, ಸಂಸ್ಕೃತಿಗೆ ಗೌರವ ಕೊಡಬೇಕು. ಸ್ಥಳೀಯ ಗ್ರಾಹಕರ ಸಂವೇದನೆಗಳಿಗೆ, ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ನಡವಳಿಕೆ ಯಾವುದೇ ಕಾರಣಕ್ಕೂ ಒಪ್ಪುವಂತದಲ್ಲ. ಗ್ರಾಹಕರಿಂದ ಬ್ಯಾಂಕ್ ಇದೆಯೇ ಹೊರತು ಬ್ಯಾಂಕ್ ನಿಂದಾಗಿ ಗ್ರಾಹಕರಲ್ಲ. ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡಿ ಉದ್ಯೋಗ ಗಿಟ್ಟಿಸಿಕೊಂಡಿರುವ ಸಿಬ್ಬಂದಿ ಕಸ್ಟಮರ್ ಈಸ್ ದ ಕಿಂಗ್ ಎಂಬ ವ್ಯಾವಹಾರಿಕ ಸತ್ಯವನ್ನ ಮೊದಲು ಅರಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಸದಸ್ಯನಾಗಿ ನಾನು ಈ ವಿಷಯವನ್ನ ಅನೇಕ ಬಾರಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪ್ರತಿನಿಧಿಗಳು ಹಾಗೂ ಮುಖ್ಯಸ್ಥರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಇನ್ನು ಮುಂದಾದರೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಬಿಐ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕನ್ನಡ ಬರುವ ಸಿಬ್ಬಂದಿಯನ್ನೇ ನಿಯೋಜಿಸಿ: ಅಶೋಕ್
ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಧಿಕಾರಿಯೊಬ್ಬರು ಗ್ರಾಹಕರೊಂದಿಗೆ ಕನ್ನಡ ಮಾತನಾಡಲು ನಿರಾಕರಿಸಿರಿರುವ ಘಟನೆ ಅತ್ಯಂತ ಖೇದಕರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಅಪೇಕ್ಷೆ ಪಡುವುದು ಖಂಡಿತ ತಪ್ಪಲ್ಲ. ಹೊರರಾಜ್ಯಗಳಿಂದ ಸೇವೆ ಸಲ್ಲಿಸಲು ಬಂದಿರುವ ಪರಭಾಷಿಕ ಸಿಬ್ಬಂದಿಗಳು ಈ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸ್ಥಳೀಯ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ. ದಿನನಿತ್ಯದ ವ್ಯವಹಾರಕ್ಕೆ ಬೇಕಾದ ಸಾಮಾನ್ಯ ಪದಗಳು, ಸಣ್ಣ ಪುಟ್ಟ ಸಾಲುಗಳನ್ನದರೂ ಕಲಿಯಲು ಪ್ರಯತ್ನಿಸಬೇಕು. ಅದು ಬಿಟ್ಟು 'ನಾನು ಕನ್ನಡ ಮಾತಾಡುವುದಿಲ್ಲ' ಎಂದು ಅಗೌರವ ತೋರುವ ವರ್ತನೆ ಸುತಾರಾಂ ಒಪ್ಪುವಂತಹದ್ದಲ್ಲ ಎಂದಿದ್ದಾರೆ.
ಗ್ರಾಹಕರಿಗೆ ಇನ್ನು ಮುಂದೆ ಇಂತಹ ತೊಂದರೆ ಆಗದಂತೆ ತಡೆಯಬೇಕಾದರೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರೀಕರಿಗೆ, ಗ್ರಾಮೀಣ ಪ್ರದೇಶದ ಶಾಖೆಗಳಲ್ಲಿನ ಗ್ರಾಹಕರಿಗೆ ಉತ್ತಮ ಸೇವೆ ಸಿಗಬೇಕಾದರೆ ಕನ್ನಡ ಬರುವ ಸಿಬ್ಬಂದಿಯನ್ನು ಮಾತ್ರ ನಿಯೋಜಿಸುವುದು ಉತ್ತಮ. ಈ ಕುರಿತು ಬ್ಯಾಂಕಿನ ಮುಖ್ಯಸ್ಥರು, ಕೇಂದ್ರ ಹಣಕಾಸು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗೌರವದಿಂದ ನಡೆಸಿಕೊಳ್ಳಬೇಕಿರುವುದು ಹಾಗೂ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಆದ್ಯ ಕರ್ತವ್ಯ. ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಮಾತೃ ಭಾಷೆ ಹಾಗೂ ಸ್ಥಳೀಯ ಭಾಷೆಗಳಿಗೆ ವಿಶೇಷ ಗೌರವ ಹಾಗೂ ಪ್ರಾತಿನಿಧ್ಯ ನೀಡುತ್ತಿರುವ ಹೊತ್ತಲ್ಲಿ ಆನೇಕಲ್ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಬ್ಯಾಂಕ್ ಗ್ರಾಹಕರಿಗೆ "ಕನ್ನಡ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡುವುದಿಲ್ಲ ಹಿಂದಿಯಲ್ಲಿಯೇ ಮಾತನಾಡಿ" ಎಂದು ದರ್ಪ, ಅಹಂಕಾರ ತೋರಿದ ಘಟನೆ ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ತಕ್ಷಣವೇ ವರ್ಗಾಯಿಸಿರುವ ಎಸ್‌ಬಿಐ ಬ್ಯಾಂಕ್ ಹಿರಿಯ ಅಧಿಕಾರಿಗಳ ಕ್ರಮ ಶ್ಲಾಘನೀಯ. ನಾಡು, ನುಡಿ, ನೆಲ, ಜಲ, ಭಾಷೆಯ ವಿಚಾರದಲ್ಲಿ ಹಾಗೂ ಸ್ವಾಭಿಮಾನಿ ಕನ್ನಡಿಗರಿಗೆ ಅಪಮಾನವಾದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications