#SaveNandini : ಬೆಂಗಳೂರಿನಲ್ಲಿ ಅಮೂಲ್ ಹಾಲು ಮಾರಾಟ: ನಂದಿನಿ ಉಳಿಸಿ ಎಂದ ಕನ್ನಡಿಗರು
ಬೆಂಗಳೂರು, ಏಪ್ರಿಲ್ 6: ಬೆಂಗಳೂರಿನಲ್ಲಿ ಗುಜರಾತ್‌ನ ಹಾಲು ಮಾರಾಟ ಸಂಸ್ಥೆ ಅಮೂಲ್‌ನ ಹಾಲು ಬೆಂಗಳೂರಿನಲ್ಲಿ ಮಾರುಕಟ್ಟೆಗೆ ಬರಲಿದೆ. ಇದಕ್ಕೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದ್ದು, ಟ್ವೀಟ್ಟರ್‌ನಲ್ಲಿ ಬಾಯ್ಕಾಟ್ ಅಮೂಲ್ ಸೇವ್ ನಂದಿನಿ ಕೆಎಂಎಫ್ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನ ಶುರುವಾಗಿದೆ.
ಬುಧವಾರವಷ್ಟೇ ಅಮೂಲ್ ಕನ್ನಡದಲ್ಲಿ ವೈಟ್‌ಫೀಲ್ಡ್‌ನಿಂದ ಕೆಂಗೇರಿವರೆಗೆ ಅಮೂಲ್ ಉತ್ಪನ್ನಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿತ್ತು. ಹಾಲು ಮೊಸರಿನ ತಾಜಾತನದ ಹೊಸ ಅಲೆ ಬೆಂಗಳೂರಿಗೆ ಬರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆರ್ಡರ್ ಮಾಡಬಹುದು. ನಿಮ್ಮ ಮನೆ ಬಾಗಿಲಿಗೆ ತಾಜಾ ಹಾಲು ಮತ್ತು ಮೊಸರು ಲಭ್ಯವಾಗಲಿದೆ ಎಂದು ಟ್ವೀಟ್ ಮಾಡಿತ್ತು. ಕರ್ನಾಟಕದ ಕೆಎಂಎಫ್ ಹಾಗೂ ಗುಜರಾತ್‌ನ ಅಮೂಲ್ ವೀಲಿನಕ್ಕೆ ಸಂಬಂಧಿದಂತೆ ಎದ್ದ ವಿವಾದ ತಣ್ಣಗಾಗುವುದರ ಒಳಗೆ ಈಗ ಅಮೂಲ್ ಉತ್ಪನ್ನದ ಸುದ್ದಿ ಬಂದಿರುವುದು ಕನ್ನಡಿಗರಲ್ಲಿ ಸಹಜವಾಗಿ ಆಕ್ರೋಶವನ್ನು ತಂದಿದೆ.

ಬೆಂಗಳೂರಿನಲ್ಲಿ ಅಮುಲ್ ಹಾಲು, ಮೊಸರಿನ ದರ ಎಷ್ಟಿರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸದ್ಯ ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿಯೇ ಸಿಂಹಪಾಲು ಹೊಂದಿದೆ. ಹೀಗಾಗಿ ಅಮುಲ್ ಯಾವ ರೀತಿಯ ಮಾರಾಟ ತಂತ್ರ ಅನುಸರಿಸಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಈಗಾಗಲೇ ಕರ್ನಾಟಕ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಮಾರಾಟವಾಗುತ್ತಿರುವ ಅಮೂಲ್ ಹಾಲು ಅಲ್ಲಿ ಅಷ್ಟೇನೂ ಮಾರುಕಟ್ಟೆಯನ್ನು ಹಿಡಿದಿಲ್ಲ. ಒಂದು ಅಂದಾಜಿನ ಪ್ರಕಾರ ದಿನಕ್ಕೆ 500 ಲೀಟರ್ ಹಾಲು ವ್ಯಾಪಾರವಾಗುವುದೇ ಹೆಚ್ಚು.
ಬೆಂಗಳೂರಿನ ಹಾಲು, ಮೊಸರು ಮಾರುಕಟ್ಟೆಯಲ್ಲಿ ನಂದಿನಿ ಶೇ 70ರಷ್ಟು ಪಾಲು ಹೊಂದಿದೆ. ಮುಂಬೈ ದೆಹಲಿಗಳಲ್ಲಿ ಬಹುತೇಕ ಮಾರಾಟವಾಗುವ ಅಮೂಲ್ ತನ್ನ ವಿಸ್ತರಣೆಯ ಭಾಗವಾಗಿ ಈಗ ಬೆಂಗಳೂರಿಗೆ ಕಾಲಿಡುತ್ತಿದೆ. ಕಳೆದ ಡಿಸೆಂಬರ್ನಲ್ಲಿ ಮಂಡ್ಯದ ಗೆಜ್ಜಲಗೆರೆ ಮೆಗಾ ಡೇರಿ ಉದ್ಘಾಟನೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಎಂಎಫ್ ಮತ್ತು ಅಮುಲ್ ಜತೆಯಾಗಿ ಸಾಗಿದರೆ ಸಹಕಾರಿ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಬಹುದು ಎಂದು ಹೇಳಿದ್ದರು. ಇದನ್ನು ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಆದರೆ, ನಂತರದಲ್ಲಿ ರಾಜ್ಯ ಬಿಜೆಪಿ ನಾಯಕರು, ಸಚಿವರು ಕೆಎಂಎಫ್ ಮತ್ತು ಅಮುಲ್ ವಿಲೀನಗೊಳಿಸುವ ಪ್ರಸ್ತಾವ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಈ ಬೇಸಿಗೆಯಲ್ಲಿ ಸ್ವಲ್ವ ಮಟ್ಟಿಗೆ ಕೆಎಂಎಫ್‌ನಿಂದ ಹಾಲು ಮಾರಾಟ ಕುಸಿತ ಕಂಡಿತ್ತು. ಅಲ್ಲದೆ ಇತ್ತೀಚೆಗೆ ನಂದಿನಿ ಹಾಲನ್ನು ಡೈರಿಯಿಂದ ಬೆಂಗಳೂರಿನಾದ್ಯಂತ ಸರಬರಾಜು ಮಾಡುತ್ತಿದ್ದ ಚಾಲಕರು ಸಿಡಿದೆದ್ದಿದ್ದರು. ಬೇಸಿಗೆಯಲ್ಲಿ ಹಾಲು ಮಾರಾಟದಲ್ಲಿ ಉಂಟಾದ ಕೊರತೆಯನ್ನು ನೆಪವಾಗಿಟ್ಟುಕೊಂಡು ಅಮೂಲ್ ಇಲ್ಲಿಯವರೆಗೆ ಇದ್ದ ಸ್ವಯಂ ನಿಯಂತ್ರಣ ರೇಖೆ ಗಡಿದಾಟಿ ಇಲ್ಲಿ ಹಾಲು ಮಾರುಕಟ್ಟೆಗೂ ದಾಳಿ ಮಾಡುವ ಉದ್ದೇಶದಲ್ಲಿ ಪ್ಲಾಸ್ಟಿಕ್ ಸ್ಯಾಚೆಟ್‌ಗಳಲ್ಲಿ ಹಾಲು ಸರಬರಾಜು ಮಾಡುವ ಸುದ್ದಿ ನೀಡಿದೆ.

ಇತ್ತೀಚೆಗೆ ಅಮೂಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರ್.ಎಸ್.ಸೋಧಿ ರಿಲಯನ್ಸ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಅಮೂಲ್ ಹಾಲು ಮಾರಾಟದ ಬಗ್ಗೆ ಕರ್ನಾಟಕದಲ್ಲಿ ಹಾಲು ಉತ್ಪಾದಕರ ಆಧಾರಸ್ತಂಭವಾಗಿರುವ ಕೆಎಂಎಫ್ ಈ ಬೆಳವಣಿಗೆಯನ್ನು ಗಮನಿಸಲಾಗುತ್ತಿದೆ. ಕರ್ನಾಟಕದ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೇ ಅಮೂಲ್ ಹಾಲು ಪೂರೈಕೆಯಾಗುತ್ತಿದೆ. ಅವರು ಹೆಚ್ಚಿನ ದರ ನಿಗದಿಪಡಿಸಿದ್ದಾರೆ. ಹೀಗಾಗಿ ನಮ್ಮ ವಹಿವಾಟಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಕಾರಣ ಅವರು ಹೆಚ್ಚು ಬೆಲೆ ವಿಧಿಸುತ್ತಿದ್ದಾರೆ ಎಂದು ಕೆಎಫ್‌ಎಂನ ಮೂಲಗಳು ತಿಳಿಸಿವೆ.
ಅಮೂಲ್ ಬಗ್ಗೆ ಟ್ವೀಟ್ಟರ್‌ನಲ್ಲಿ ಆಕ್ರೋಶ ಜೋರಾಗುತ್ತಿದ್ದು, ನಂದಿನಿ ಹಾಲು, ಮೊಸರನ್ನಲ್ಲದೆ ಬೇರೆ ಯಾವುದೇ ಬ್ರಾಂಡ್ ಬಳಸೋದಿಲ್ಲ, ಅದರಲ್ಲೂ ಗುಜ್ಜುಗಳ ಅಮೂಲ್ ಬಳಸೋದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದು ಕೆಲವರು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇಷ್ಟುದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು,ಈಗ ನಂದಿನಿಯ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications