ಬೆಂಕಿ ಇಟ್ಟವರು ಪಾತ್ರಧಾರಿಗಳು ಅಷ್ಟೇ, ಸೂತ್ರಧಾರಿ ಬೇರೆಯವನೇ ಇದ್ದಾನೆ!
ಬೆಂಗಳೂರು, ಆ. 14: ''ನನ್ನ ಮನೆ ಅಂಗಳದ ಕಾರುಗಳಿಗೆ ಬೆಂಕಿ ಇಟ್ಟಿರುವ ಹಿಂದೆ ಕೇಬಲ್ ಮಾಫಿಯಾ ಇದೆ. ಈಗ ಅರೆಸ್ಟ್ ಅಗಿರುವರು ಕೇವಲ ಪಾತ್ರಧಾರಿಗಳು. ಸೂತ್ರಧಾರಿ ಬೇರೆಯವನೇ ಇದ್ದಾನೆ. ಪಾತ್ರಧಾರಿಗಳಿಗೂ ಸೂತ್ರಧಾರಿಗೂ ಇರುವ ಸಂಪರ್ಕದ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಇನ್ನೆರಡು ದಿನದಲ್ಲಿ ಆ ಸೂತ್ರಧಾರಿ ಹೊರಗೆ ಬರ್ತಾನೆ ನೋಡ್ತಾಯಿರಿ!''
ಆಗಸ್ಟ್ 12 ರಂದು ಮಧ್ಯರಾತ್ರಿ ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷ ವಯಸ್ಸಿನ ಮೂವರು ಬಂಧನಕ್ಕೆ ಒಳಗಾಗಿದ್ದಾರೆ. ಈ ವಯಸ್ಸಿನ ಹುಡುಗರಿಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮೇಲಿನ ದ್ವೇಷಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಎದ್ದಿತ್ತು. ಈ ಕುರಿತು ಒನ್ಇಂಡಿಯಾ ಕನ್ನಡ ಕೇಳಿದ ಪ್ರಶ್ನೆಗೆ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಹೊಸ ಆಯಾಮವೇ ಪಡೆದುಕೊಳ್ಳುವ ಸಾಧ್ಯತೆಯಿದೆ.
ಶಾಸಕ ಸತೀಶ್ ರೆಡ್ಡಿ ಶಾಸಕರಾದವರು. ನೀವೇ ಹೇಳಿದ್ದೀರಿ ನನಗೆ ರಾಜಕೀಯ ಶತ್ರುಗಳು ಇಲ್ಲ ಅಂತ. ಹೀಗಿರುವಾಗ 20 ವರ್ಷ ವಯಸ್ಸಿನ ಹುಡುಗರು ನಿಮ್ಮ ಮೇಲೆ ಯಾಕೆ ದ್ವೇಷ ಸಾಧಿಸಿ ಬೆಂಕಿ ಇಟ್ಟರು? ಹೀಗೊಂದು ಪ್ರಶ್ನೆ ಮುಂದೆ ಇಡುತ್ತಿದ್ದಂತೆ, ಹೆಸರು ಹೇಳದೇ ತನ್ನನ್ನು ಟಾರ್ಗೆಟ್ ಮಾಡಿರುವ ಮಾಫಿಯಾ ಬಗ್ಗೆ ಪ್ರಸ್ತಾಪಿಸಿದರು. ನಿಜ ನನಗೆ ರಾಜಕೀಯ ದ್ವೇಷಿಗಳು ಇಲ್ಲ. ಆದರೆ ಬೊಮ್ಮನಹಳ್ಳಿಯ ಕೇಬಲ್ ಮಾಫಿಯಾ ನನ್ನ ಮೇಲೆ ದ್ವೇಷ ಸಾಧಿಸುತ್ತಿದೆ. ಈಗ ಬಂಧನಕ್ಕೆ ಒಳಗಾಗಿರುವ ಮೂವರು ಕೇವಲ ಪಾತ್ರಧಾರಿಗಳು ಮಾತ್ರ, ಇದರ ಸೂತ್ರಧಾರಿ ಬೇರೆಯವನೇ ಇದ್ದಾನೆ. ಪಾತ್ರಧಾರಿಗಳು ಹಾಗೂ ಸೂತ್ರಧಾರಿ ಮಾತುಕತೆ ನಡೆಸಿರುವ ಸಂವಹನ ವಿವರ ಪೊಲೀಸರಿಗೆ ಸಾಕ್ಷಿ ಸಮೇತ ಲಭ್ಯವಾಗಿವೆ. ಆ ಹೆಸರನ್ನು ನಾನು ಹೇಳಿದರೆ ತಪ್ಪಾಗುತ್ತದೆ. ಆದರೆ, ಪೊಲೀಸರೇ ಹೇಳಿದರೆ ಅದಕ್ಕೆ ಅರ್ಥ ಇರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಬಂಧಿತ ಆರೋಪಿಗಳು ಫೈಬರ್ ನೆಟ್ ವರ್ಕ್‌ನಲ್ಲಿ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಇದಕ್ಕೂ ತಾಳೆ ಆಗುತ್ತಿದೆ. ಆದ್ರೆ ನಾನು ಯಾರ ಹೆಸರು ಹೇಳುವುದಿಲ್ಲ. ಪೊಲೀಸರು ತನಿಖೆ ಮಾಡುವಾಗ ನಾನು ಯಾರ ಹೆಸರು ಹೇಳುವುದಿಲ್ಲ. ಆರೋಪಿಗಳು ಯಾರ ಜತೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರಿಗೆ ಸಿಡಿಆರ್ ಮಾಹಿತಿ ಇದೆ. ಒಂದು ರೀತಿಯಲ್ಲಿ ಮಾಫಿಯಾ ಜತೆ ಲಿಂಕ್ ಇದೆ. ಎರಡು ದಿನದಲ್ಲಿ ಎಲ್ಲವೂ ಆಚೆ ಬರುತ್ತದೆ. ಬಂಧಿತ ಆರೋಪಿಗಳು ಪಾತ್ರಧಾರಿಗಳು ಅಷ್ಟೇ? ಸೂತ್ರಧಾರಿ ಬೇರೆ ಇದ್ದಾನೆ. ಇದು ಮಾಫಿಯಾ. ನನಗೆ ರಾಜಕೀಯ ದ್ವೇಷ ಇಲ್ಲದೇ ಇರಬಹುದು ನನ್ನ ಮನೆ ಘಟನೆ ಹಿಂದೆ ಖಂಡಿತಾ ಕೇಬಲ್ ಮಾಫಿಯಾ ಇದೆ. ಇದರ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಬೆದರಿಸುವ ತಂತ್ರಗಾರಿಕೆ ಎಂದು ಸತೀಶ್ ರೆಡ್ಡಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಆ ಸೂತ್ರಧಾರಿ ಕೇಬಲ್ ಸೋಮನೇ ? : ಇನ್ನು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಯಾರ ಹೆಸರು ಪ್ರಸ್ತಾಪ ಮಾಡದೇ ಕೇಬಲ್ ಮಾಫಿಯಾ ಹೆಸರು ಪ್ರಸ್ತಾಪಿಸಿದ್ದಾರೆ. ಮೂವರು ಆರೋಪಿಗಳು ಕೇವಲ ಪಾತ್ರಧಾರಿಗಳು ಎಂದಿದ್ದಾರೆ. ಬಂಧಿತ ಆರೋಪಿಗಳ ಜತೆ ಸೂತ್ರಧಾರಿಯೊಬ್ಬ ಇದ್ದಾನೆ. ಅದು ಕೇಬಲ್ ಮಾಫಿಯಾ ಎಂಬ ಸುಳಿವು ನೀಡಿದ್ದಾರೆ. ಸತೀಶ್ ರೆಡ್ಡಿ ಕೊಟ್ಟಿರುವ ಸುಳಿವು ಹಾಗೂ ಅವರ ಆಪ್ತ ವರ್ಗ ಬೆರಳು ತೋರುತ್ತಿರುವ ಹೆಸರು ಕೇಬಲ್ ಸೋಮ ಅವರದ್ದು ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಪ್ರಜಾ ಪರಿವರ್ತನಾ ಪಾರ್ಟಿ ವತಿಯಿಂದ ಸತೀಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದ ಕೇಬಲ್ ಸೋಮ ಅವರು ಕೇವಲ 2100 ಮತ ಗಳಿಸಿದ್ದರು. ಚುನಾವಣಾ ಪ್ರಚಾರವನ್ನಂತೂ ಬಿರುಸಿನಿಂದ ನಡೆಸಿದ್ದರು. ಕೇಬಲ್ ವಿಚಾರವಾಗಿ ಸತೀಶ್ ರೆಡ್ಡಿ ಜತೆ ವೈಮನಸ್ಯ ಇಟ್ಟುಕೊಂಡಿದ್ದು, ಇದರ ವಿಚಾರವಾಗಿ ಮೂವರನ್ನು ಬಿಟ್ಟು ಕಾರುಗಳಿಗೆ ಬೆಂಕಿ ಇಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕೇಬಲ್ ವಹಿವಾಟು ಹೊಂದಿರುವ ಎಚ್.ಎನ್. ಸೋಮಶೇಖರ್ ಹೊಂಗಸಂದ್ರದ ನಿವಾಸಿ.
ಕಳೆದ ವಿಧಾನ ಸಭಾ ಚುನಾವಣಾ ಕಣದಲ್ಲಿ ಸತೀಶ್ ರೆಡ್ಡಿ ವಿರುದ್ಧ ಸ್ಪರ್ಧಿಸಿದ್ದರು. ಈ ಕುರಿತು ಕೇಬಲ್ ಸೋಮ ಅವರ ಪ್ರತಿಕ್ರಿಯೆ ಪಡೆಯಲು ಒನ್ಇಂಡಿಯಾ ಕನ್ನಡ ಪ್ರಯತ್ನಿಸಿತು. ಸೋಮ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಸತೀಶ್ ರೆಡ್ಡಿ ಅವರ ಮಾರ್ಮಿಕ ಮಾತುಗಳು ಮಾತ್ರ ಕೇಬಲ್ ಸೋಮನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದು, ಎರಡು ದಿನದಲ್ಲಿ ಅಸಲಿ ಸತ್ಯ ಬಯಲಿಗೆ ಬರಲಿದೆ.












Click it and Unblock the Notifications