ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಆರೋಪಿಯಿಂದ ಉದ್ಯಮಿಗೆ 25 ಕೋಟಿ ವಂಚನೆ
ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಆರೋಪಿಯಾಗಿದ್ದ ರಾಹುಲ್ ತೋನ್ಸೆ ವಿರುದ್ಧ ಕೆಸಿನೋದಲ್ಲಿ ಹೂಡಿಕೆ ಮಾಡಿಸಿ, ಲಾಭದ ಆಸೆ ತೋರಿಸಿ ಬೆಂಗಳೂರಿನ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ರಾಹುಲ್ ತೋನ್ಸೆ ಆತನ ಅಪ್ಪ ರಾಮಕೃಷ್ಣ, ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬಣ್ಣಬಣ್ಣದ ಮಾತನಾಡಿ ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಸದ್ಯ ರಾಹುಲ್ ತೋನ್ಸ್ ತಂದೆ ಪ್ರಕರಣದ ಎ1 ರಾಮಕೃಷ್ಣ ರಾವ್ ಬಂಧಿಸಲಾಗಿದೆ. ಹೊಡಿಕೆ ನೆಪದಲ್ಲಿ ವಂಚನೆ ಮಾಡಿದ ಆರೋಪದ ಮೇಲೆ ರಾಹುಲ್ ತೋನ್ಸೆ ವಿರುದ್ಧ ಈ ಹಿಂದೆ ನಟಿ ಸಂಜನಾ ಗಲ್ರಾನಿ ಕೂಡ ಇಂದಿರಾನಗರದಲ್ಲಿ ದೂರು ನೀಡಿದ್ದರು. ಇದೀಗ ಬಸವೇಶ್ವರ ನಗರ ಉದ್ಯಮಿ ವಿವೇಕ್ ಹೆಗ್ಡೆ ಹಾಗೂ ಅವರ ಸ್ನೇಹಿತರಿಗೆ 25.5 ಕೋಟಿ ರೂಪಾಯಿ ಮೋಸ ಮಾಡಿರುವ ಆರೋಪದ ಮೇಲೆ ದೂರು ದಾಖಲಾಗಿದೆ.

ಏನಿದು ಪ್ರಕರಣ?
07-02-2023ರಂದು ದೂರುದಾರ ವಿವೇಕ್ ಹೆಗ್ಡೆಗೆ ಸ್ನೇಹಿತರ ಮೂಲಕ ರಾಮಕೃಷ್ಣ ರಾವ್ ಪರಿಚಯವಾಗಿದ್ದು, ಉದ್ಯಮಿಯ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಸಭೆ ಆಗಿತ್ತು. ಈ ಸಭೆಯಲ್ಲಿ ಉದ್ಯಮಿಯ ಸ್ನೇಹ ಗಳಿಸಿಕೊಂಡಿದ್ದ ರಾಮಕೃಷ್ಣ ರಾವ್, ಶ್ರೀಲಂಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಹಲವು ವ್ಯಾಪಾರಗಳಲ್ಲಿ ಲಾಭವಿದೆ ಎಂದು ನಂಬಿಸಿದ್ದರು. ಮಗಳು ರಕ್ಷಾ, ಅಳಿಯ ಚೇತನ್ ಮತ್ತು ಮಗ ರಾಹುಲ್ ಎಲ್ಲಾ ವ್ಯಾಪಾರ ನಿರ್ವಹಿಸುತ್ತಿದ್ದಾರೆ ಎಂದಿದ್ದರು. ಅಲ್ಲದೇ ತಮ್ಮ ಮೊಬೈಲ್ ಮೂಲಕ ಮಗಳು ರಕ್ಷಾ ಮತ್ತು ಅಳಿಯ ಚೇತನ್ ಜೊತೆ ಮಾತಾನಾಡಿಸಿದ್ದರು ಎನ್ನಲಾಗಿದೆ.
ಅಲ್ಲದೇ ಸಾಲದ ರೂಪದಲ್ಲಿ ನೀಡುವ ಹಣಕ್ಕೆ 4% ರಂತೆ ಬಡ್ಡಿ ನೀಡುವುದಾಗಿ ತಿಳಿಸಿದ್ದರು. ಅಳಿಯ ಹಾಗೂ ಮಗಳು ಶ್ರೀಲಂಕಾದ ಬೆಲ್ಲಾ ಜಿಯೋ ಎಂಬ ಕ್ಯಾಸಿನೋದಲ್ಲಿ ಟೇಬಲ್ ಹೊಂದಿದ್ದಾರೆ. ಮಗ ರಾಹುಲ್ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾನೆ ಎಂದು ಉದ್ಯಮಿಗೆ ನಂಬಿಸಿದ್ದರು. ಹಲವು ಬಾರಿ ಫೋನ್‌ನಲ್ಲಿ ಮಾತುಕತೆ ನಡೆಸಿ, ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿದ್ದರು.
ಜೊತೆಗೆ ದೂರುದಾರಿಗೆ ಶ್ರೀಲಂಕಾಗೆ ಟಿಕೆಟ್ ಮತ್ತು ಅಲ್ಲಿನ ವಾಸ್ತವ್ಯದ ವ್ಯವಸ್ಥೆ ಮಾಡಿ ತಮ್ಮ ಉದ್ಯಮ ಇದೆ ಎಂದು ನಂಬಿಸಲು ಕರೆಸಿಕೊಂಡಿದ್ದರು. ಈ ವೇಳೆ ರಾಹುಲ್ ಶ್ರೀಲಂಕಾದಲ್ಲಿನ ಬೆಲ್ಲಾ, ಜಿಯೋ ಕ್ಯಾಸಿನೋಗೆ ಕರೆದೊಯ್ದಿದ್ದು ನಂಬಿಸಿದ್ದ. ಹೀಗೆ ಹೊಸ ಹೊಸ ನಾಟಕವಾಡಿ ಬರೊಬ್ಬರಿ 3.5 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ. ಜೊತೆಗೆ ದೂರುದಾರ ವಿವೇಕ್ ಹೆಗ್ಡೆ ಸ್ನೇಹಿತರ ಮೂಲಕ 22 ಕೋಟಿ ರೂಪಾಯಿ ಬಂಡವಾಳ ಹಾಕಿಸಿಕೊಂಡು ಪಂಗನಾಮ ಹಾಕಿದ್ದಾರೆ. ಬಳಿಕ ಹಣ ವಾಪಸ್ ಕೇಳಿದಾಗ ಫೋನ್ ನಂಬರ್ ಬ್ಲಾಕ್ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಸದ್ಯ ಪ್ರಕರಣದ ಎ-೧ ಆರೋಪಿಯನ್ನು ಬಂಧಿಸಲಾಗಿದೆ.












Click it and Unblock the Notifications