ಪ್ರಿಯಕರನೊಂದಿಗೆ ಸಿಕ್ಕ ನಂದಿನಿ, ಅಪಹರಣವೇ ಆಗಿಲ್ಲ
ಬೆಂಗಳೂರು, ಅಕ್ಟೋಬರ್ 16 : ಸದಾಶಿವನಗರದ ವಿವಾಹಿತ ಮಹಿಳೆ ನಂದಿನಿ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಂದಿನಿ ಮತ್ತು ಆಕೆಯ ಮಾಜಿ ಪ್ರಿಯಕರ ಅಂಥೋನಿ ಪತ್ತೆಯಾಗಿದ್ದು, ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.
'ನನ್ನ ಪತ್ನಿ ನಂದಿನಿಯನ್ನು ಆಕೆಯ ಮಾಜಿ ಪ್ರಿಯಕರ ಅಪಹರಣ ಮಾಡಿದ್ದಾನೆ' ಎಂದು ಧಾಮಸ್ ಸ್ಟಾಲಿನ್ ಗುರುವಾರ ಬೆಳಗ್ಗೆ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬುಧವಾರ ಸಂಜೆ ಪತಿಗೆ ಕರೆ ಮಾಡಿದ್ದ ನಂದಿನಿ 'ನನ್ನ ಅಪಹರಣವಾಗಿದೆ' ಎಂದು ಹೇಳಿ ಕರೆ ಕಟ್ ಮಾಡಿದ್ದಳು.

ನಂದಿನಿ ದೂರವಾಣಿ ಕರೆಯ ಮಾಹಿತಿ ಆಧರಿಸಿ ಆಕೆಯ ಪತಿ ಸದಾಶಿವನಗರ ಪೊಲೀಸರಿಗೆ ಗುರುವಾರ ದೂರು ನೀಡಿದ್ದರು. ಮೊಬೈಲ್ ಕರೆಗಳ ಮಾಹಿತಿ ಅನ್ವಯ ತನಿಖೆ ಆರಂಭಿಸಿದ ಪೊಲೀಸರು. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಂದಿನಿ ಮತ್ತು ಆಕೆಯ ಮಾಜಿ ಪ್ರಿಯಕರ ಅಂಥೋನಿಯನ್ನು ಪತ್ತೆ ಹಚ್ಚಿದ್ದಾರೆ. [ಪತ್ನಿಯನ್ನು ಕಿಡ್ನಾಪ್ ಮಾಡಿದ ಮಾಜಿ ಪ್ರಿಯಕರ!]
ಅಪಹರಣವಲ್ಲ : ನಂದಿನಿಯನ್ನು ಯಾರೂ ಅಪಹರಣ ಮಾಡಿರಲಿಲ್ಲ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. 'ನಾನೇ ಅಂಥೋನಿ ಜೊತೆ ತೆರಳಿದ್ದೆ, ಯಾರೂ ಅಪಹರಣ ಮಾಡಿರಲಿಲ್ಲ' ಎಂದು ನಂದಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಅಂಥೋನಿ ಮತ್ತು ನಂದಿನಿ ಲಿಂಗಾರಾಜಪುರ ಬಳಿಯ ಖಾಸಗಿ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಅಕ್ಟೋಬರ್ 14 ರಂದು ಕೆಲಸಕ್ಕೆ ಹೋಗಿದ್ದ ನಂದಿನಿ ಸಂಜೆ ಮನೆಗೆ ಬಂದಿರಲಿಲ್ಲ. ಪತಿಗೆ ಕರೆ ಮಾಡಿ ನನ್ನನ್ನು ಯಾರೋ ಅಪಹರಿಸಿದ್ದಾರೆ ಎಂದು ತಿಳಿಸಿದ್ದರು. ಆದರೆ, ಪೊಲೀಸರ ಮುಂದೆ ತಾನೇ ಅಂಥೋನಿ ಜೊತೆ ಹೋಗಿದ್ದೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.












Click it and Unblock the Notifications