ಠಾಣೆ ಮೆಟ್ಟಿಲೇರಿದ ರಾಬಿನ್ ಅಪ್ಪ ಅಮ್ಮನ ಕಿತ್ತಾಟ
ಮಡಿಕೇರಿ, ಏ.30: ದುಬೈನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಬ್ಯಾಟ್ ಬೀಸುತ್ತಿದ್ದ ಕ್ರಿಕೆಟರ್ ರಾಬಿನ್ ಉತ್ತಪ್ಪ ಬೆಂಗಳೂರಿಗೆ ಬರುತ್ತಿದ್ದಂತೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರಾಬಿನ್ ಅವರ ಊರಿನಲ್ಲಿ ಅಪ್ಪ-ಅಮ್ಮ ಕಾದಾಡಿಕೊಂಡಿದ್ದಾರೆ. ರಾಬಿನ್ ಅವರ ಅಮ್ಮ ರೋಸ್ಲಿನ್ ಅವರು ಪತಿ ವೇಣು ವಿರುದ್ಧ ಕೊಲೆ ಯತ್ನ ಆರೋಪ ಹೊರೆಸಿ ದೂರು ದಾಖಲಿಸಿದ್ದಾರೆ.
ಏಪ್ರಿಲ್ 18 ರಂದು ಬೆಂಗಳೂರಿನಿಂದ ನಾಕೂರು ಗ್ರಾಮದಲ್ಲಿರುವ ಮನೆಗೆ ರಾಬಿನ್ ರ ತಾಯಿ ರೋಸ್ಲಿನ್, ಸೋದರಿ ಶರೋನ್ ಮತ್ತು ಕುಟುಂಬಸ್ಥರು ಆಗಮಿಸಿದ್ದಾರೆ. ಊರಿನಲ್ಲೆ ಬಹುಕಾಲದಿಂದ ನೆಲೆಸಿರುವ ಪತಿ ವೇಣು ಅವರ ಜತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೊಲೆ ಮಾಡುವುದಕ್ಕೂ ವೇಣು ಉತ್ತಪ್ಪ ಮುಂದಾಗಿದ್ದಾರೆ ಎಂದು ರೋಸ್ಲಿನ್ ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೇಣು ಉತ್ತಪ್ಪ ಅಂತಾರಾಷ್ಟ್ರೀಯ ಹಾಕಿ ರೆಫ್ರಿ ಆಗಿದ್ದಾರೆ. ರಾಬಿನ್ ಉತ್ತಪ್ಪರ ಮದುವೆ ನಿಶ್ಚಯದ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.

ರಾಬಿನ್ ಉತ್ತಪ್ಪ ಅವರು ಇತ್ತೀಚೆಗೆ ಟೆನ್ನಿಸ್ ಆಟಗಾರ್ತಿ ಶೀತಲ್ ಗೌತಮ್ ಜತೆ ಸುತ್ತಾಡಿಕೊಂಡಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ವಿಜಯ್ ಮಲ್ಯ ಮಾಲೀಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡದಲ್ಲಿದ್ದ ರಾಬಿನ್ ಸದ್ಯಕ್ಕೆ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾರೆ.
ಐಪಿಎಲ್ 7 ರ ಮೊದಲ ಹಂತದ ಪಂದ್ಯಾವಳಿಗಳು ದುಬೈ, ಶಾರ್ಜಾದಲ್ಲಿ ನಿಗದಿಯಾಗುತ್ತಿದ್ದಂತೆ ಜತೆಗಾರ್ತಿ ಶೀತಲ್ ರನ್ನು ಅರಬ್ ನಾಡಿಗೆ ರಾಬಿನ್ ಕರೆಸಿಕೊಂಡಿದ್ದರು. ಬೆಂಗಳೂರು ಮೂಲದ ಶೀತಲ್ ಅವರನ್ನು ರಾಬಿನ್ ಉತ್ತಪ್ಪ ಅವರಿಗೆ ಸಹ ಆಟಗಾರರಾದ ಮನೀಷ್ ಪಾಂಡೆ ಹಾಗೂ ಕೆ.ಎಲ್. ರಾಹುಲ್ ಮೂಲಕ ಪರಿಚಯವಾಗಿತ್ತು. ಇಬ್ಬರ ಫೇಸ್ ಬುಕ್ ನಲ್ಲಿ ಮುಂದುವರಿದ ಸ್ನೇಹ ಈಗ ಪ್ರೀತಿಗೆ ತಿರುಗಿತ್ತು. ಇಬ್ಬರ ಪ್ರೀತಿಯನ್ನು ವಿವಾಹ ಬಂಧನಕ್ಕೆ ಒಳಪಡಿಸಲು ಕುಟುಂಬದವರು ಆತುರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ವಿಷಯವಾಗಿ ರಾಬಿನ್ ಅಪ್ಪ -ಅಮ್ಮ ಕಿತ್ತಾಡಿಕೊಂಡಿದ್ದಾರೆ. ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿನಂತೆ ರಾಬಿನ್ ವೃತ್ತಿ ಬದುಕು ಸಂಸಾರ ತಾಪತ್ರಯದಿಂದ ಮಂಕಾಗಿದ್ದು ಸುಳ್ಳಲ್ಲ.












Click it and Unblock the Notifications