Gym Ravi Reaction: 'ದರ್ಶನ್ ಅವರದ್ದು ತಾಯಿ ಹೃದಯ'- ಜಿಮ್ ರವಿ
ಬೆಂಗಳೂರು ಜೂನ್ 12: ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಚ್ಚಿ ಬೀಳಿಸಿದೆ. ಅದರಲ್ಲೂ ಈ ಕೊಲೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ಭಾಗಿಯಾಗಿದ್ದಾರೆನ್ನುವ ಆರೋಪ ಅಭಿಮಾನಿಗಳ ನಿದ್ದೆಗೆಡಿಸಿದೆ. ನಟ ದರ್ಶನ್ ಈಗ ಪೊಲೀಸ್ ವಶದಲ್ಲಿದ್ದು ಚಂದನವನವೇ ಶಾಕ್ ಆಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದವರಲ್ಲಿ ಜಿಮ್ ರವಿ ಕೂಡ ಒಬ್ಬರು. ಹಾಗಾದರೆ ಜಿಮ್ ರವಿ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದೆ. ಚಂದನವನದ ಸೆಲೆಬ್ರಿಟಿಗಳು ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಅಚ್ಚರಿಯೊಂದಿಗೆ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಮ್ ರವಿ, 'ನಮಗೆ ಈ ಪ್ರಕರಣದಿಂದ ತುಂಬಾ ಶಾಕ್ ಆಗಿದೆ. ಅವರು ಈ ಕೆಲಸ ಮಾಡುತ್ತಾರೆ ಎಂದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ ನಾವು ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕು' ಎಂದು ಹೇಳಿದರು.

'ನಾನು ದರ್ಶನ್ ಆಪ್ತ. ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ದರ್ಶನ್ ಅವರದ್ದು ತಾಯಿ ಹೃದಯ, ಅವರು ಈ ರೀತಿ ಮಾಡಿದ್ದಾರೆ ಅಂದರೆ ನನಗೆ ನಂಬಲು ಆಗ್ತಾಯಿಲ್ಲ. ಏನಾಗಿದೆ ಅನ್ನೋದು ತನಿಖೆ ಆಗ್ಬೇಕು. ಅವರು ಮಾಡಿದ ಸಾಧನೆ, ಸಮಾಜಮುಖಿ ಕೆಲಸವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಇಲ್ಲಿ ಆಗಿರುವ ಘಟನೆ ತುಂಬಾ ದು:ಖ ತಂದಿದೆ. ಸತ್ಯಾಸತ್ಯತೆ ಏನು ಎನ್ನುವುದು ಹೊರಬರಲಿ. ನಾನು ಕಾಯುತ್ತಿದ್ದೇನೆ' ಎಂದರು.
'ನಾನು ದರ್ಶನ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಭೇಟಿಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಇದರ ಬಗ್ಗೆ ಸತ್ಯ ಹೊರಬರಬೇಕು. ಅಭಿಮಾನಿಗಳಿಗೆ ಹಾಗೂ ಕನ್ನಡ ಇಂಡಸ್ಟ್ರಿಗೆ ಅವರ ಬಗ್ಗೆ ಸತ್ಯ ಗೊತ್ತಾಗಬೇಕು' ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ
ಚಿತ್ರದುರ್ಗ ರೇಣುಕಾಸ್ವಾಮಿ ಅವರ ಮೃತ ದೇಹ ಭಾನುವಾರ (ಜೂನ್ 9) ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಪತ್ತೆಯಾಗಿತ್ತು. ನಾಯಿಗಳು ಎಳೆದಾಡುತ್ತಿದ್ದ ಮೃತ ದೇಹದ ಬಗ್ಗೆ ಸ್ಥಳೀಯ ಅಪಾರ್ಟ್‌ಮೆಂಟ್ ಒಂದರ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಇದೊಂದು ಕೊಲೆ ಎಂದು ಗೊತ್ತಾಗಿದೆ.

ಅಷ್ಟರಲ್ಲಿ ಠಾಣೆಗೆ ಕೆಲವರು ಆಗಮಿಸಿ ಕೊಲೆ ತಾವೇ ಮಾಡಿದವರು ಎಂದು ಹೇಳಿಕೊಂಡಿದ್ದಾರೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆಯ ಹಿಂದೆ ನಟ ದರ್ಶನ್ ಹೆಸರು ಕೇಳಿ ಬಂದಿದೆ. ವಿಚಾರಣೆ ಚುರುಕುಗೊಳಿಸಿದಾಗ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ದರ್ಶನ್ ಬಂಧನ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಮಂಗಳವಾರ (ಜೂನ್ 11) ಮೈಸೂರಿನಿಂದು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಅವರೊಂದಿಗೆ ಒಟ್ಟು 13 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು ಎನ್ನುವ ಕಾರಣಕ್ಕೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದರು. ಹೀಗಾಗಿ ಪವಿತ್ರಾ ಗೌಡ ದರ್ಶನ್‌ಗೆ ಈ ಮಾಹಿತಿ ನೀಡಿದ್ದಾರೆ. ಬಳಿಕ ದರ್ಶನ್ ತಮ್ಮ ಗ್ಯಾಂಗ್ ಕಳುಹಿಸಿ ರೇಣುಕಾಸ್ವಾಮಿ ಅವರನ್ನು ಪತ್ತೆ ಮಾಡಿಸಿದ್ದಾರೆ.

ಕೊಲೆ ಆಗಿದ್ದು ಹೇಗೆ?
ಶನಿವಾರ (ಜೂನ್ 8) ಬೆಳಗ್ಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ದರ್ಶನ್ ಗ್ಯಾಂಗ್ ಅಪಹರಣ ಮಾಡಿದೆ. ಮದ್ಯಾಹ್ನ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನಲ್ಲಿರುವ ನಟ ದರ್ಶನ್ ಆಪ್ತರ ಶೆಡ್ಡಿಗೆ ಕರೆದುಕೊಂಡು ಬರಲಾಗಿದೆ. ರೇಣುಕಾಸ್ವಾಮಿ ಅವರನ್ನು ಶೆಡ್ಡಿಗೆ ಕರೆತಂದ ಗ್ಯಾಂಗ್ ದರ್ಶನ್‌ಗೆ ಮಾಹಿತಿ ನೀಡಿದೆ. ಅಲ್ಲಿಗೆ ರಾತ್ರಿ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ತೆರಳಿದ್ದಾರೆ. ಅಲ್ಲಿ ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಲಾಗಿದೆ.
ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಅಲ್ಲಿಂದ ಸಾಗಿಸಿ ಚರಂಡಿಗೆ ದರ್ಶನ್ ಗ್ಯಾಂಗ್ ಎಸೆದು ಹೋಗಿದೆ. ಭಾನುವಾರ (ಜೂನ್ 9) ಬೆಳಗ್ಗೆ ರೇಣುಕಾಸ್ವಾಮಿ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ.
ದರ್ಶನ್ ಹೇಳುವುದೇನು?
ವಿಚಾರಣೆ ವೇಳೆ ಆರಂಭದಲ್ಲಿ ತಾವು ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದ ದರ್ಶನ್ ಬಳಿಕ ತಾವು ಶೆಡ್ಡಿಗೆ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ರೇಣುಕಾಶ್ವಾಮಿ ಮುಖ ನೋಡಿ ಬಂದಿದ್ದೆ ಅಷ್ಟೇ. ನಾನು ಕೊಲೆ ಮಾಡಲು ಹೇಳಿಲ್ಲ. ನಂತರ ಏನು ಆಯ್ತು ನನಗೆ ಗೊತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ.
ಅಲ್ಲದೆ ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದಾಗ ದರ್ಶನ್ ಕಾರು ಶೆಡ್ಡಿಗೆ ಹೋಗಿರುವ ದೃಶ್ಯ ಸಿಕ್ಕಿವೆ. ಇದರಿಂದ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವನ್ನೇ ಮೂಡಿಸಿದೆ. ನಿಜವಾಗಲೂ ಈ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದರಾ ಅಥವಾ ಇಲ್ವಾ ಅನ್ನೋದು ತನಿಖೆಯಿಂದ ಮಾತ್ರ ಹೊರಬರಲಿದೆ.












Click it and Unblock the Notifications