ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪವಿತ್ರಾ ಗೌಡ ಅಸ್ವಸ್ಥ: ಆಸ್ಪತ್ರೆಗೆ ಶಿಫ್ಟ್
ಬೆಂಗಳೂರು, ಜೂನ್ 18: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಪೊಲೀಸ್ ಠಾಣೆಯಲ್ಲೇ ಅಸ್ವಸ್ಥಗೊಂಡಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆಯ ವೇಳೆ ಪವಿತ್ರಾ ಗೌಡಗೆ ಅನಾರೋಗ್ಯ ಕಾಡಿದ್ದು, ಇಂದು ಮಧ್ಯಾಹ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವೈದ್ಯರನ್ನು ಕರೆಸಲಾಗಿತ್ತು.
ಪವಿತ್ರಾ ಗೌಡ ತಪಾಸಣೆ ನಡೆಸಿದ ವೈದ್ಯರು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಪವಿತ್ರಾ ಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪವಿತ್ರಾ ಗೌಡ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಬಂಧನವಾಗಿ ಒಂದು ವಾರ ಕಳೆದಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ರಾತ್ರಿ ವೇಳೆ ಸಾಂತ್ವನ ಕೇಂದ್ರಲ್ಲಿರುವ ಪವಿತ್ರಾ ಗೌಡರನ್ನು ಮತ್ತೆ ಬೆಳಗ್ಗೆ ಠಾಣೆಗೆ ಕರೆ ತಂದು ವಿಚಾರಣೆ ಮಾಡಲಾಗುತ್ತದೆ. ಈ ವೇಳೆ ಪೊಲೀಸ್ ಠಾಣೆಯಲ್ಲಿ ಪವಿತ್ರಾ ಗೌಡ ಊಟ ತಿಂಡಿ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕಸ್ಟಡಿ ವೇಳೆ ಸರಿಯಾಗಿ ಊಟ ತಿಂಡಿ ಸೇವಿಸದೇ ಪವಿತ್ರಾ ಗೌಡ ಅಸ್ವಸ್ಥರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನವೂ ಊಟ ಮಾಡಿರಲಿಲ್ಲ. ಹೀಗಾಗಿ ವಿಚಾರಣೆ ವೇಳೆ ಪವಿತ್ರಾ ಗೌಡ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದ್ದು, ಊಟ-ತಿಂಡಿ ಬಿಟ್ಟು ಅಸ್ವಸ್ಥರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥಗೊಂಡಿರುವ ಪವಿತ್ರಾ ಗೌಡಗೆ ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಮುಗಿದ ಬಳಿಕ ಪುನಃ ಠಾಣೆಗೆ ಕರೆದು ತರಲಿದ್ದಾರೆ.
ಪವಿತ್ರಾ ಗೌಡಗೆ ಪಶ್ಚಾತ್ತಾಪ
'ನನಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ಗಳನ್ನು ಮಾಡುತ್ತಿದ್ದ. ಇದನ್ನು ನಾನು ಮನೆ ಕೆಲಸದವ ಪವನ್ಗೆ ಕಳುಹಿಸಿದ್ದೆ. ಅವನಿಗೆ ಕಳುಹಿಸುವ ಮೊದಲು ಈ ವಿಚಾರ ದರ್ಶನ್‌ಗೆ ಗೊತ್ತಾಗಬಾರದು ಎಂದು ಹೇಳಿದ್ದೆ. ದರ್ಶನ್‌ಗೆ ಗೊತ್ತಾದರೆ ಏನಾದರೂ ಅನಾಹುತ ಆಗಬಹುದು ಅಂತಲೂ ಹೇಳಿದ್ದೆ. ನನಗೆ ಕೊಲೆ ಮಾಡುತ್ತಾರೆ ಎನ್ನುವ ಕಲ್ಪನೆಯೂ ಇರಲಿಲ್ಲ. ಕೆಟ್ಟದಾಗಿ ಮೆಸೇಜ್ ಮಾಡಿದ ಎಂದು ಚಪ್ಪಲಿಯಲ್ಲಿ ಹೊಡೆದು ವಾಪಸ್ ಬಂದೆ ಎಂದು ಪವಿತ್ರಾ ಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
'ಕೊಲೆಯಾದ ರೇಣುಕಾಸ್ವಾಮಿ ನನಗೆ ಕಳುಹಿಸುತ್ತಿದ್ದ ಮೆಸೇಜ್‌ಗಳ ಬಗ್ಗೆ ದರ್ಶನ್‌ಗೆ ಹೇಳಿ ತಪ್ಪು ಮಾಡಿದೆ. ಅಶ್ಲೀಲ ಮೆಸೇಜ್ ತೋರಿಸಿ, ಹೇಳಿದ್ದಕ್ಕೆ ಇಷ್ಟೆಲ್ಲಾ ಆಯ್ತು. ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ದರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದು ತಪ್ಪಾಯಿತು. ಅಶ್ಲೀಲ ಮೆಸೇಜ್‌ಗಳನ್ನು ಅವರಿಗೆ ತೋರಿಸಿ ಹೇಳಬಾರದಿತ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತದೆ ಅಂತಾ ಅಂದುಕೊಂಡಿರಲಿಲ್ಲ' ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications