ಪ್ರತಿಭಟನೆ ಬೆಂಬಲಿಸಿದ ಎಎಪಿಯಿಂದ ಒಪಿಎಸ್ ಮರುಜಾರಿ ಭರವಸೆ
ಬೆಂಗಳೂರು, ಡಿಸೆಂಬರ್ 20: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಆಮ್ ಆದ್ಮಿ ಪಾರ್ಟಿ (ಎಎಪಿ) ಬೆಂಬಲಿಸಿದೆ. ಜೊತೆಗೆ ಪಕ್ಷ ಅಧಿಕಾರಕ್ಕೆ ಬಂದರೆ ಒಪಿಎಸ್ ಅನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.
ಪ್ರತಿಭಟನೆ ನಡೆಯುತ್ತಿರುವ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನಕ್ಕೆ ಪಕ್ಷದ ಮುಖಂಡರ ಜತೆ ತೆರಳಿದ ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಬೆಂಬಲ ಸೂಚಿಸಿ ಮಾತನಾಡಿದರು. ಎಎಪಿಗೆ ಅಧಿಕಾರ ಸಿಕ್ಕರೆ ಒಪಿಎಸ್ ಜಾರಿಗೆ ತರುವುದಾಗಿ ಪಂಜಾಬ್ ಚುನಾವಣೆ ವೇಳೆ ಭರವಸೆ ನೀಡಿತ್ತು. ಅದರಂತೆ ಅಲ್ಲಿನ ಸಚಿವ ಸಂಪುಟವು ಒಪಿಎಸ್ ಜಾರಿಗೆ ನವೆಂಬರ್ ತಿಂಗಳಿನಲ್ಲಿ ಅನುಮೋದನೆ ನೀಡಿ ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ ಎಂದು ವಿವರಿಸಿದರು.
ಗುಜರಾತ್‌ನಲ್ಲಿ ಕೂಡ ಒಪಿಎಸ್ ಜಾರಿ ಕುರಿತು ಎಎಪಿ ಗ್ಯಾರೆಂಟಿ ನೀಡಿತ್ತಾದರೂ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೆ ತರಲು ಬದ್ಧರಾಗಿದ್ದೇವೆ. ಚುನಾವಣಾ ಪ್ರಣಾಳಿಕೆ ಹಾಗೂ ಜನರಿಗೆ ನೀಡುವ ಗ್ಯಾರೆಂಟಿ ಕಾರ್ಡ್‌ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸುತ್ತೇವೆ. ಎಎಪಿಯು ಸರ್ಕಾರಿ ನೌಕರರ ಹಿತ ಕಾಪಾಡಲು ಸದಾ ಬದ್ಧವಾಗಿರುತ್ತದೆ ಎಂದು ಅವರು ಪುನರುಚ್ಚರಿಸಿದರು.

ಬಿಜೆಪಿ ಬಂಡವಾಳಶಾಹಿಗಳು ಮಾತ್ರ ಬೇಕು
ಆಮ್ ಆದ್ಮಿ ಪಾರ್ಟಿ ಮುಖಂಡರು ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳಿಗೆ ಬಂಡವಾಳಶಾಹಿ ಉದ್ಯಮಿಗಳು ಮಾತ್ರ ಮುಖ್ಯವಾಗಿದ್ದಾರೆ. ನೌಕರರು, ಕಾರ್ಮಿಕರು, ರೈತರು, ಸಣ್ಣಪುಟ್ಟ ಉದ್ದಿಮೆದಾರರು ಸೇರಿದಂತೆ ಜನಸಾಮಾನ್ಯರ ಅಗತ್ಯಗಳು ಬಿಜೆಪಿ ಸರ್ಕಾರಗಳಿಗೆ ಲೆಕ್ಕಕ್ಕೇ ಇಲ್ಲ ಎಂದು ದೂರಿದರು.

ಸರ್ಕಾರಿ ನೌಕರರಿಗೆ ಪ್ರತಿಭಟನೆಯ ದುಸ್ಥಿತಿ
ರಾಜ್ಯದಲ್ಲಿ ಇಷ್ಟು ದಿನ ಬೇರೆಬೇರೆ ವರ್ಗದ ಜನರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಕರ್ನಾಟಕ ರಾಜ್ಯ ಸರ್ಕಾರಿ ನೌಕರರೇ ಬೀದಿಗಿಳಿಯುವ ಸ್ಥಿತಿ ಬಂದಿದೆ. ಸರ್ಕಾರಿ ನೌಕರರ ಬಗ್ಗೆ ಬಿಜೆಪಿ ನಾಯಕರಿಗೆ ಸ್ವಲ್ಪವಾದರೂ ಕಾಳಜಿಯಿದ್ದರೆ, ಶೀಘ್ರವೇ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಒಪಿಎಸ್ ಜಾರಿಗೆ ತರಲಿ ಎಂದು ಅವರು ಆಗ್ರಹಿಸಿದರು.

ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ನಿಂದ ಅಭದ್ರತೆ
ಆಮ್ ಆದ್ಮಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ರವಿಶಂಕರ್ ಅವರು, 2006ರ ನಂತರ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಎನ್‌ಪಿಎಸ್‌ನಿಂದಾಗಿ ಅಭದ್ರತೆ ಕಾಡುತ್ತಿದೆ. ನಿವೃತ್ತಿ ನಂತರದ ಬದುಕಿನ ಬಗ್ಗೆ ಅವರು ಚಿಂತೆಗೀಡಾಗಿದ್ದಾರೆ. ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ಹೆಚ್ಚೇನೂ ಆರ್ಥಿಕ ಹೊರೆ ಆಗುವುದಿಲ್ಲ ಎಂದರು.
ಎನ್‌ಪಿಎಸ್ ಟ್ರಸ್ಟ್‌ನಲ್ಲಿ ವಂತಿಗೆ ಮೊತ್ತವೇ 16 ಸಾವಿರ ಕೋಟಿಗೂ ಹೆಚ್ಚಿದೆ. ಒಪಿಎಸ್ ಮರು ಜಾರಿಯಾದರೆ ವಂತಿಗೆ ಕಟ್ಟುವುದು ತಪ್ಪುತ್ತದೆ. ಎನ್‌ಪಿಎಸ್ ರದ್ದುಗೊಳಿಸಿದಾಗ ಬಡ್ಡಿಸಮೇತ ವಾಪಸ್ ಬರುವ ವಂತಿಗೆ ಹಣವನ್ನು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು ಎಂದು ತಿಳಿಸಿದರು.

ಯಾಕೇ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ?
2006ರ ನಂತರ ನೇಮಕವಾಗಿ ಸರ್ಕಾರಿ ನೌಕರರಿಗಾಗಿ ಈ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದರಿಂದ ಈ ನೌಕರರು ನಿವೃತ್ತಿ ಸಂದರ್ಭದಲ್ಲಿ ಯಾವುದೇ ಆರ್ಥಿಕ ಸೌಲಭ್ಯವಿಲ್ಲದೇ ನಿವೃತ್ತಿಗೊಳ್ಳಬೇಕಿದೆ. ಈಗಾಗಲೇ ದೇಶದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್‌ಪಿಎಸ್) ರದ್ದುಗೊಳಿಸಿ ಅಲ್ಲಿ ಹಳೆಯ ಪಿಂಚಣೆ ವ್ಯವಸ್ಥೆಯನ್ನು (ಒಪಿಎಸ್) ಜಾರಿಗೆ ತಂದಿದ್ದಾರೆ. ಅದೇ ಮಾದರಿಯಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲೂ ಎನ್‌ಪಿಎಸ್ ರದ್ದು ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದಲ್ಲಿ ಸುಮಾರು 20ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ವೇಳೆ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸುರೇಶ್ ರಾಥೋಡ್, ಮೋಹನ್ ದಾಸರಿ, ಜ್ಯೋತೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications