ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ಕೊಲೆ ಆರೋಪಿಗಳು

ಸುಬ್ರಮಣ್ಯಪುರದ ಎಂ.ರಾಮಚಂದ್ರ(38), ಚನ್ನಪಟ್ಟಣದ ಮಲ್ಲೇಶ(34) ಜೆ.ಪಿ.ನಗರದ ಶ್ರೀನಿವಾಸ(40) ಬಂಧಿತರು. ಮಲ್ಲೇಶ್ವರಂ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರವಾಹನದಲ್ಲಿ ರಾಮಚಂದ್ರ ಮತ್ತು ಮಲ್ಲೇಶ ಇಬ್ಬರು ಪ್ರಯಾಣಿಸುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳ ಬಗ್ಗೆ ಮತ್ತಷ್ಟು ಅನುಮಾನ ಬಂದು ವಿಚಾರಣೆ ನಡೆಸಿದಾಗ ರಿಯಲ್ ಎಸ್ಟೇಟ್ ಎಜೆಂಟ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ? ಜನಾರ್ದನ ಎಂಬವನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯೋಗದಲ್ಲಿದ್ದು, ಕೊಲೆ ಆರೋಪಿಗಳಿಗೆ ಪರಿಚಯವಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಣ ತೊಡಗಿಸುವಂತೆ ಹೇಳಿದ್ದ. ಆರೋಪಿಗಳು ಜನಾರ್ದನ ಮಾತಿಗೆ ಮರುಳಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಣ ತೊಡಗಿಸಿದ್ದರು. ಆದರೆ ಜನಾರ್ದನ ಆರೋಪಿಗಳು ನೀಡಿದ್ದ ಹಣವನ್ನು ಸ್ವಂತಕ್ಕೆ ಬಳಸಿದ್ದ ಮಾತ್ರವಲ್ಲದೇ ಆರೋಪಿಗಳು ಹಣ ಕೇಳಲು ಬಂದಾಗ ಅವರಿಗೆ ಬೆದರಿಕೆ ಹಾಕಿ ಕಳುಹಿಸುತ್ತಿದ್ದ.
ಕೊಲೆಗೆ ಸ್ಕೆಚ್: ಜನಾರ್ದನ ಕಳ್ಳಾಟಕ್ಕೆ ರೋಸಿಹೋದ ಆರೋಪಿಗಳು ಅವನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಐದು ದಿನಗಳ ಹಿಂದೆ ಆತನನ್ನು ಕಾರಿನಲ್ಲಿ ನೆಲಮಂಗಲಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಯ ಡಾಬಾವೊಂದರಲ್ಲಿ ಚೆನ್ನಾಗಿ ಮದ್ಯಪಾನ ಮಾಡಿಸಿ ಬಳಿಕ ಶ್ರವಣಬೆಳಗೊಳ ಮತ್ತು ಹಿರಿಸಾವೆ ಮಧ್ಯೆ ಇರುವ ಮತ್ತಿಕಟ್ಟೆ ಗ್ರಾಮದ ಹತ್ತಿರ ಬರುವಾಗ ಹಗ್ಗದಿಂದ ಕುತ್ತಿಗೆ ಬಿಗಿದು ರಾಡಿನಿಂದ ಹೊಡೆದು ಜನಾರ್ದನನ್ನು ಕೊಲೆ ಮಾಡಿದ್ದರು. ಕೊಲೆಯಾದ ಜನಾರ್ದನ ದೇಹವನ್ನು ಮತ್ತಿಕಟ್ಟೆ ಗ್ರಾಮದ ಕೆರೆಯ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು. ಈ ಕೊಲೆ ಸಂಬಂಧಿಸಿದಂತೆ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.











Click it and Unblock the Notifications