ಬೆಂಗಳೂರಿನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ- ಠೇವಣಿ ಹಿಂಪಡೆಯುವಿಕೆಗೆ ಮಿತಿ, ಠೇವಣಿದಾರರಲ್ಲಿ ಆತಂಕ
ಬೆಂಗಳೂರು, ಜುಲೈ 25: ಬೆಂಗಳೂರು ಮೂಲದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ. ಠೇವಣಿ ಹಿಂಪಡೆಯುವಿಕೆಯ ಮಿತಿಯನ್ನು 50,000 ರೂ.ಗೆ ನಿರ್ಬಂಧಗೊಳಿಸಿದೆ. ಬ್ಯಾಂಕಿನ ದುರ್ಬಲ ಆರ್ಥಿಕ ಪರಿಸ್ಥಿತಿಯು ಈ ಕ್ರಮಕ್ಕೆ ಕಾರಣವಾಗಿದೆ ಎಂದು ಆರ್‌ಬಿಐ ಹೇಳಿದೆ. ಇದು ಠೇವಣಿದಾರರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.
ಪೂರ್ವಾನುಮತಿಯಿಲ್ಲದೆ ಹೊಸ ಸಾಲಗಳನ್ನು ನೀಡಲು ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸಲು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ಅವಕಾಶವಿಲ್ಲ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ 5 ಲಕ್ಷ ರೂ.ವರೆಗಿನ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಠೇವಣಿದಾರರು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ತಿಳಿಸಿದೆ.
ವ್ಯಾಪಾರದ ನಿರ್ಬಂಧಗಳನ್ನಷ್ಟೇ ಹೇರಿದ್ದೇವೆ. ಆದರೆ, ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸುವುದಿಲ್ಲ ಎಂದು ಆರ್‌ಬಿಐ ಉಲ್ಲೇಖಿಸಿದೆ.
ಆರ್ಥಿಕ ಪರಿಸ್ಥಿತಿ ಸುಧಾರಿಸುವವರೆಗೆ ಈ ನಿರ್ಬಂಧಗಳೊಂದಿಗೆ ತನ್ನ ವ್ಯವಹಾರವನ್ನು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಕೈಗೊಳ್ಳಲಿದೆ ಎಂದು ಆರ್‌ಬಿಐ ಹೇಳಿದೆ.
ಸಂದರ್ಭಗಳಿಗೆ ಅನುಗುಣವಾಗಿ ತನ್ನ ಆದೇಶಗಳನ್ನು ಮಾರ್ಪಾಡು ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಜುಲೈ 24, 2023 ರಂದು ಈ ನಿರ್ಬಂಧಗಳನ್ನು ವಿಧಿಸಲಾಗಿದೆ.

ಆರು ತಿಂಗಳ ಅವಧಿಗೆ ವ್ಯಾಪಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಆರ್‌ಬಿಐ ಹೇಳಿದೆ.
ಮೇ ತಿಂಗಳಲ್ಲಿ, ಆರ್‌ಬಿಐ ಕೆಲವು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ವಿತ್ತೀಯ ದಂಡವನ್ನು ವಿಧಿಸಿತ್ತು.
ಲಭ್ಯವಿರುವ ಕೊನೆಯ ವಾರ್ಷಿಕ ವರದಿಯ ಪ್ರಕಾರ, ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ( ಮಾರ್ಚ್ 31, 2021 ರಂತೆ ) ಒಟ್ಟು ರೂ 1,679 ಕೋಟಿ ಠೇವಣಿ ಮತ್ತು ರೂ 1,128 ಕೋಟಿ ಸಾಲಗಳನ್ನು ಹೊಂದಿದೆ. ಆ ದಿನಾಂಕದ ನಂತರ ಡೇಟಾ ಲಭ್ಯವಿಲ್ಲ. ಬೆಂಗಳೂರಿ ಹಾಗೂ ಮೈಸೂರಿನ ವಿವಿಧ ಭಾಗಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸುಮಾರು 13 ಶಾಖೆಗಳನ್ನು ಹೊಂದಿದೆ.
ಬೆಂಗಳೂರಿನ ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿನಗರ, ಬಾಣಸವಾಡಿ, ಬನಶಂಕರಿ 2ನೇ ಹಂತ, ಕೋರಮಂಗಲ, ಗಾಂಧಿ ಬಜಾರ್, ಜಯನಗರ 5ನೇ ಬ್ಲಾಕ್, , ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3ನೇ ಹಂತಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ. ಮೈಸೂರಿನ ಕುವೆಂಪು ನಗರದಲ್ಲಿ ಈ ಬ್ಯಾಂಕ್ ತನ್ನ ಶಾಖೆಯನ್ನು ಹೊಂದಿದೆ.












Click it and Unblock the Notifications