ಸರಗಳ್ಳನನ್ನು ಹಿಡಿದಿದ್ದ ಚಂದ್ರಕುಮಾರ್‌ಗೆ ಸನ್ಮಾನ, ಉಡುಗೊರೆ
ಬೆಂಗಳೂರು, ಜೂನ್ 25 : ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಬಂಧಿಸಿದ್ದ ಪೇದೆ ಚಂದ್ರಕುಮಾರ್‌ನನ್ನು ರವಿ ಡಿ.ಚನ್ನಣ್ಣನವರ್ ಇಂದು ಸನ್ಮಾನಿಸಿದರು. 1 ಲಕ್ಷ ರೂ. ನಗದು, ಒಂದು ಪಲ್ಸರ್ ಬೈಕ್ ಅನ್ನು ಬಹುಮಾನವಾಗಿ ಅವರಿಗೆ ನೀಡಲಾಗಿದೆ.
ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರು ಸೋಮವಾರ ಜ್ಞಾನ ಭಾರತಿ ಪೊಲೀಸ್ ಠಾಣೆಯ ಮುಖ್ಯಪೇದೆ ಚಂದ್ರಕುಮಾರ್ ಅವರನ್ನು ಸನ್ಮಾನಿಸಿದರು. ರಜೆ ನೀಡಿ ಕುಟುಂಬ ಸಮೇತ ಪ್ರವಾಸ ಹೋಗಲು ಅವಕಾಶ ನೀಡಿದರು.
ಜೂನ್ 17ರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಚುತ್ ಕುಮಾರ್ ಅವರ ಬೈಕ್ ಹಿಂಬಾಲಿಸಿದ್ದ ಚಂದ್ರಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದು ಅಚ್ಚುತ್ ಕುಮಾರ್ ಕೆಳಗೆ ಬೀಳಿಸಿ ಅವರನ್ನು ಬಂಧಿಸಿ ಸಾಹಸ ಮೆರೆದಿದ್ದರು.

ಬೆಂಗಳೂರು ಮತ್ತು ತುಮಕೂರು ನಗರದಲ್ಲಿ ಸುಮಾರು 70 ಸರಗಳ್ಳತನ ಪ್ರಕರಣದಲ್ಲಿ ಅಚ್ಚುತ್ ಕುಮಾರ್ ಭಾಗಿಯಾಗಿದ್ದು, ಬೆಂಗಳೂರು ಪೊಲೀಸರು ಆತನಿಗಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು. ಚಂದ್ರಕುಮಾರ್‌ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು 1 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.
ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ರವರಿಗೆ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಯಿತು.#Rewarded #ChandraKumarHC pic.twitter.com/mMT4GfQu4E
— Ravi D Channannavar, IPS (@DCPWestBCP) June 25, 2018
ಇಂದು ಪಶ್ಚಿಮ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಚಂದ್ರಕುಮಾರ್ ಅವರನ್ನು ಸನ್ಮಾನಿಸಿದ ರವಿ ಡಿ.ಚನ್ನಣ್ಣನವರ್ 1 ಲಕ್ಷ ರೂ. ಬಹುಮಾನ ನೀಡಿದರು. ಉಚಿತವಾಗಿ ದಕ್ಷಿಣ ಭಾರತ ಪ್ರವಾಸಕ್ಕೆ ತೆರಳುವ ಉಡುಗೊರೆ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಕುಮಾರ್, 'ಇಲಾಖೆ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ. ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಇದು ಪ್ರೇರಣೆಯಾಗಿದೆ' ಎಂದು ಹೇಳಿದರು.












Click it and Unblock the Notifications