'ಸಿಡಿ' ದೂರು ದಾಖಲಿಸಿದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದೇನು?
ಬೆಂಗಳೂರು, ಮಾ. 13: 'ಸಿಡಿ' ಪ್ರಕರಣದ ಕುರಿತು ಕೊನೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ಮಾಜಿ ಶಾಸಕ ಹಾಗೂ ಆಪ್ತ ನಾಗರಾಜ್ ಮೂಲಕ ದೂರನ್ನು ತಲುಪಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಎಫ್‌ಐಆರ್ ಹಾಕಿದ್ದು, ಎಸ್‌ಐಟಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.
ಮಾರ್ಚ್ 2 ರಂದು ಸಂಜೆ ರಮೇಶ್ ಜಾರಕಿಹೊಳಿ ಅವರ ಕುರಿತಾದ 'ಸಿಡಿ' ಬಹಿರಂಗವಾಗಿತ್ತು. ಅದಾದ ಬಳಿಕ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು ನಾನು ತಪ್ಪು ಮಾಡಿಲ್ಲ ಎಂದಿದ್ದರು. ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ 'ಸಿಡಿ' ಬಿಡುಗಡೆ ಪ್ರಕರಣ ನಡೆದು 12 ದಿನಗಳಾದರೂ ಯಾವುದೇ ದೂರು ದಾಖಲಾಗಿರಲಿಲ್ಲ. ಹೀಗಾಗಿ ಎಸ್‌ಐಟಿ ತನಿಖೆಗೂ ಹಿನ್ನಡೆಯಾಗಿತ್ತು.
ಇದೀಗ ದೂರು ಸಲ್ಲಿಸಿರುವ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದೂರು ಸಲ್ಲಿಸಿದ ಬಳಿಕ ತಮ್ಮ ಮೊದಲ ಮಹತ್ವದ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಅವರು ಏನು ಹೇಳಿದ್ದಾರೆ? ಮುಂದಿದೆ ಮಾಹಿತಿ.

ನಾನು ಅಧಿಕೃತವಾಗಿ ದೂರು ಸಲ್ಲಿಸಿದ್ದೇನೆ
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಬಳಿಕ ರಮೇಶ್ ಜಾರಕಿಹೊಳಿ ಅವರು ಹೇಳಿಕೆ ಕೊಟ್ಟಿದ್ದಾರೆ. ಅಧಿಕೃತವಾಗಿ ನಾನು ದೂರು ನೀಡಿದ್ದೇನೆ. ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದರೆ ನೀವು ಮುಂಜಾನೆಯಿಂದ ಕಾಯ್ತಿದ್ದೀರಿ ಅದಕ್ಕೆ ಮಾತನಾಡುತ್ತಿದ್ದೇನೆ. ಎಲ್ಲಾ ರಾಜಕೀಯ ನಾಯಕರು ಮಾಡಿರುವ ಷಡ್ಯಂತ್ರ ಇದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇವತ್ತು ಎಫ್‌ಐಆರ್ ದಾಖಲಾಗಿದೆ
ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಅದಕ್ಕಾಗಿ ದೂರು ದಾರಿ ತಪ್ಪಿಸುವ ರೀತಿ ಮಾಡಬೇಡಿ. ಇವತ್ತು ಎಫ್‌ಐಆರ್ ದಾಖಲಾಗಿದೆ. ನಾನು ಬೇಕಾದರೂ ವಿಚಾರಣೆಗೆ ಹೋಗ್ತೇನೆ. ನಾವೂ ನೇರವಾಗಿ ಹೆಸರು ಹೇಳಿದರೇ ಪ್ರಕರಣ ದುರ್ಬಲವ ಆಗುತ್ತದೆ. ನಾವೂ ನೇರವಾಗಿ ಹೆಸರು ಹೇಳುವುದು ತಪ್ಪಾಗುತ್ತದೆ. ಪೊಲೀಸರು ತುಂಬಾ ವೇಗವಾಗಿ ಆಗಿ ತನಿಖೆ ಮಾಡುತ್ತಿದ್ದಾರೆ. ಇನ್ನು ಎರಡ್ಮೂರು ದಿನಗಳ ಒಳಗೆ ಎಲ್ಲವೂ ಗೊತ್ತಾಗಬಹುದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಆರೋಪಿಗಳ ಹೆಸರು ಸಹಿತ ದೂರು ಕೊಟ್ಟಿಲ್ಲ!
ನಾನು ಕಾನೂನು ತಜ್ಞ ಅಲ್ಲ. ಹೀಗಾಗಿ ಹೆಸರು ಸಹಿತ ದೂರು ಕೊಟ್ಟಿಲ್ಲ. ನಮ್ಮ ವಕೀಲರು ಹೇಳಿದಂತೆ ದೂರು ಕೊಟ್ಟಿದ್ದೇನೆ. ನನ್ನ ಕಾನೂನು ಹೋರಾಟ ಇದೀಗ ಆರಂಭವಾಗಿದೆ. ವಕೀಲರ ಸಲಹೆಯಂತೆ ನಾನು ದೂರು ಕೊಟ್ಟಿದ್ದೇನೆ. ದೂರು ಎಫ್‌ಐಆರ್ ಕೂಡ ಆಗಿದೆ. ಹೀಗಾಗಿ ಪ್ರಕರಣದ ಕುರಿತು ಏನೂ ಕೇಳಬೇಡಿ. ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮಾರ್ಚ್ 2 ರಂದು ಬಿಡುಗಡೆಯಾಗಿದ್ದ 'ಸಿಡಿ'
ಕಳೆದ ಮಾರ್ಚ್ 2 ರಂದು ರಮೇಶ್ ಜಾರಕಿಹೊಳಿ ಅವರು ಇದ್ದಾರೆ ಎಂಬ ದೃಶ್ಯಗಳುಳ್ಳ ಸಿಡಿ ಬಿಡುಗಡೆಯಾಗಿತ್ತು. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ 'ಸಿಡಿ'ಯೊಂದಿಗೆ ದೂರು ಸಲ್ಲಿಸಿದ್ದರು. ಅದೇ ಸಂದರ್ಭದಲ್ಲಿ 'ಸಿಡಿ'ಯಲ್ಲಿನ ದೃಶ್ಯಾವಳಿಗಳೂ ಬಿಡುಗಡೆ ಆಗಿದ್ದವು. ಅದಾದ ಬಳಿಕ ಮಾರ್ಚ್ 3 ರಂದು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದರು. ನಂತರ ರಮೇಶ್ ಜಾರಕಿಹೊಳಿ ಅವರ ಮನವಿಯಂತೆ ರಾಜಗ್ಯ ಸರ್ಕಾರ ಪ್ರಕರಣದ ತನಿಖೆಗೆ ಮಾರ್ಚ್ 12ರಂದು ವಿಶೇಷ ತನಿಖಾ ತಂಡ ರಚಿಸಿತ್ತು.
ವಿಶೇಷ ತನಿಖಾ ತಂಡ ಹಲವರನ್ನು ವಶಕ್ಕೆ ಪಡೆದ ಬಳಿಕ, ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿತರ ಸಂಬಂಧಿಕರು ಕಾಣೆಯಾಗಿರುವ ದೂರು ದಾಖಲಿಸಿದ್ದರು. ಹೀಗಾಗಿ ಪ್ರಕರಣದ ತನಿಖೆಗೆ ಶೀಘ್ರವಾಗಿ ಎಫ್‌ಐಆರ್ ಮಾಡುವುದು ಅಗತ್ಯವಾಗಿತ್ತು. ಅದೇ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.











Click it and Unblock the Notifications