ಭಾರೀ ಮಳೆಯಿಂದಾಗಿ ಹೆಸರಘಟ್ಟ ಕೆರೆಗೆ ಜೀವಕಳೆ
ಬೆಂಗಳೂರು, ಸೆಪ್ಟೆಂಬರ್ 12 : ಬೆಂಗಳೂರು ನಗರದ ಸುತ್ತ-ಮುತ್ತ ಭಾರೀ ಮಳೆಯಾಗಿದ್ದು, ಹೆಸರಘಟ್ಟ ಕೆರೆಗೆ ಜೀವಕಳೆ ಬಂದಿದೆ. ಬರಗಾಲದಿಂದ ಕಂಗೆಟ್ಟಿದ್ದ ರೈತರು ಕೆರೆ ತುಂಬುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ಬೆಂಗಳೂರು ನಗರಕ್ಕೆ ಹೆಸರಘಟ್ಟ ಕೆರೆ ನೀರು ಪೂರೈಕೆ ಮಾಡುತ್ತಿತ್ತು. ಆದರೆ, ಸತತ ಬರಗಾಲದಿಂದ ಕೆರೆ ಬತ್ತಿ ಹೋಗಿತ್ತು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೆರೆಗೆ 10 ಅಡಿ ನೀರು ಹರಿದುಬಂದಿದೆ.

ಕೆರೆ ತುಂಬಿರುವುದರಿಂದ ಕೆರೆ ಅಚ್ಚುಕಟ್ಟು ಪ್ರದೇಶದ ಕೊಳವೆ ಬಾವಿಗಳು ಮರುಜೀವ ಪಡೆದುಕೊಳ್ಳಲಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಮಧುರೆ ಗ್ರಾಮದ ಕೆರೆಯೂ ಭರ್ತಿಯಾಗುವ ಹಂತ ತಲುಪಿದ್ದು, ಇದು ಭರ್ತಿಯಾದರೆ ಹೆಚ್ಚಿನ ನೀರು ಹೆಸರಘಟ್ಟ ಕೆರೆಗೆ ಹರಿದುಬರಲಿದೆ. ಹೆಸರಘಟ್ಟ ಹೋಬಳಿಯ ಬ್ಯಾತ, ಹನಿಯೂರು, ಕಾಕೋಳು, ಮಧುರೆ, ದೊಡ್ಡ ಬೆಳವಂಗಲ ಕೆರೆಗಳಿಗೆ 7 ರಿಂದ 8 ಅಡಿ ನೀರು ಹರಿದುಬಂದಿದೆ.

ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲು ಹಿಂದೆ ಹೆಸರಘಟ್ಟ ಕೆರೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇಟ್ಟಿಗೆಗಳಿಂದ ನಿರ್ಮಿಸಿದ ಕಾಲುವೆ ಮೂಲಕ ಕೆರೆಯ ನೀರನ್ನು ತರಬನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿ ನೀರನ್ನು ಶುದ್ಧೀಕರಿಸಿ ಸೋಲ ದೇವನಹಳ್ಳಿಗೆ ತರಲಾಗುತ್ತಿತ್ತು. ಅಲ್ಲಿಂದ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲಾಗುತ್ತಿತ್ತು.
ಮೂರು ವರ್ಷಗಳ ಕಾಲ ಮಳೆಯಾಗದೆ ಕೆರೆ ಬತ್ತಿತ್ತು. ಆದ್ದರಿಂದ, ಪರ್ಯಾಯ ಜಲಮೂಲ ಹುಡುಕಲಾಯಿತು. ನಂತರ ಹೆಸರಘಟ್ಟ ಕೆರೆಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು.












Click it and Unblock the Notifications