ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವರುಣನ ಅಬ್ಬರ, ಮುಂದಿನ 3 ಗಂಟೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಆಗಸ್ಟ್ 29: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ಬೆಳ್ಳಂ ಬೆಳಗ್ಗೆ ಮಳೆ ಅಬ್ಬರಿಸಿದ್ದು, ಜನರಿಗೆ ಸಂಕಷ್ಟ ತಂದೊಡ್ಡಿದೆ. ಕಚೇರಿಗೆ ತೆರಳಲು ಜನರು, ಶಾಲೆಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳಿಂದ ನಗರದ ಜನತೆಯನ್ನು ಕಂಗೆಡಿಸಿದ್ದ ಮಳೆರಾಯ ಸೋಮವಾರ ಮುಂಜಾನೆಯಿಂದಲೇ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಎಲಿಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಜೆಪಿ ನಗರ, ಕೆಂಗೇರಿ, ವಿಜಯನಗರ, ನಾಗರಬಾವಿ ಸೇರಿದಂತೆ ಹಲವೆಡೆ ಮಳೆ ಅಬ್ಬರಿಸಿದೆ. ಇನ್ನೂ ಕೆಲವು ಕಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಬಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮಳೆ ಹೆಚ್ಚಾಗಿದೆ. ಆಗಸ್ಟ್ 31ರ ತನಕವೂ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮಾತ್ರವಲ್ಲದೇ, ರಾಮನಗರ , ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಕೋಲಾರ, ಮೈಸೂರು, ಚಿತ್ರದುರ್ಗದ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿಗೆ ಹಳದಿ ಅಲರ್ಟ್ ಸೂಚನೆ ನೀಡಲಾಗಿದೆ.
ಗುಡುಗು ಸಹಿತ ಮಿಂಚು ಜೊತೆಗೆ ಸಾಧಾರಣ ಮಳೆಯ ಜೊತೆಗೆ ರಭಸದ ಗಾಳಿಯ ವೇಗ 30-40 ಕಿ. ಮೀ. ವೇಗವನ್ನು ತಲುಪುವ ಸಾಧ್ಯತೆಯಿದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ , ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಲಾಗಿದೆ.

ಮುಂದಿನ ಮೂರು ಗಂಟೆಗಳ ಕಾಲ ಮಳೆ
ಬೆಂಗಳೂರಿನಲ್ಲಿ ಮುಂದಿನ 3 ಗಂಟೆಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಂಜೆ 9 ಗಂಟೆಯವರೆಗೆ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಮಂಡ್ಯ, ಕೋಲಾರ ಜಿಲ್ಲೆಗಳಿಗೂ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕೊಡಗಿನಲ್ಲಿ ಮಳೆ ಅಬ್ಬರ
ಕೊಡಗಿನಲ್ಲಿ ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆಗೆ ಎರಡು ಕಡೆ ಭೂ ಕುಸಿತ ಉಂಟಾಗಿದೆ. ಮಡಿಕೇರಿ ತಾಲೂಕಿನ ದೇವರಕೊಲ್ಲಿ ಗ್ರಾಮದ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು ವಾಹನ ಸವಾರರು ಪರಾಟ ನಡೆಸಿದ್ದಾರೆ. ಇನ್ನೂ ಹೆದ್ದಾರಿ ಸಂಚಾರ ವ್ಯವಸ್ಥೆ ಸ್ಥಗಿತವಾದ ಕಾರಣ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತಿವೆ.

ಮೈಸೂರಿನಲ್ಲಿ ಜಿಟಿ ಮಳೆ
ಮೈಸೂರು ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ನಂಜನಗೂಡು ತಾಲೂಕಿನ ಆಲಂಬೂರು ಮುಂಟಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ. ಗೌರಮ್ಮ ಬಸವೇಗೌಡ ಎಂಬುವರ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಪಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಟ
ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರದಲ್ಲಿ ಸೋಮವಾರವೂ ಮಳೆಯ ರೌದ್ರ ನರ್ತನ ಮುಂದುವರಿದಿದ್ದುಸಾರ್ವಜನಿಕರು ಸಂಕಷ್ಟ ಅನುಭವಿಸಿದ್ದಾರೆ. ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಯಗಾನಹಳ್ಳಿ ಬಳಿ ನೀರು ತುಂಬಿಕೊಂಡಿದ್ದು, ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಬೆಂಗಳೂರು-ಮೈಸೂರು ಕಡೆಗೆ ಹೋಗ ಬೇಕಿದ್ದ ಪ್ರಯಾಣಿಕರು ಹರಸಾಹಸ ಪಡುತ್ತಿರುವ ದೃಶ್ಯಗಳು ಕಂಡುಬಂದಿದೆ. ಭಾರೀ ಮಳೆಯಿಂದ ಚನ್ನಪಟ್ಟಣ ರೈಲ್ವೆ ಹಳಿಗಳ ಮೇಲೆ ನೀರು ನಿಂತು ರೈಲು ಸಂಚಾರಕ್ಕೂ ಕೂಡ ಅಡಚಣೆಯಾಗಿದೆ.












Click it and Unblock the Notifications