ಸೋಮವಾರದಿಂದ ಸರ್ ಎಂವಿ ಟರ್ಮಿನಲ್‌ನಲ್ಲಿ ರೈಲು ಸಂಚಾರ ಆರಂಭ
ಬೆಂಗಳೂರು ಜೂನ್ 5: ಬೆಂಗಳೂರಿನ ಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ರೈಲುಗಳ ಸಂಚಾರ ಜೂನ್ 6ರಿಂದ ಆರಂಭವಾಗಲಿದೆ.
314 ಕೋಟಿ ರುಪಾಯಿ ವೆಚ್ಚದ್ದಲ್ಲಿ ವಿಮಾನ ನಿಲ್ದಾಣದ ಮಾದರಿಯ ಸೌಲಭ್ಯಗೊಂದಿಗೆ ನಗರದ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಸಿದ್ಧಗೊಂಡು 14 ತಿಂಗಳು ಕಳೆದರೂ ಅದಕ್ಕೆ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ. ಇದೀಗ ರೈಲುಗಳ ಸೇವೆ ಆರಂಭಿಸಲಿದೆ.
ಸರ್. ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೊದಲ ರೈಲು ಜೂನ್ 6 ರಂದು ರಾತ್ರಿ 7 ಗಂಟೆಗೆ ಹೊರಡಲಿದೆ. ಟರ್ಮಿನಲ್ ಅಧಿಕೃತ ಉದ್ಘಾಟನೆ ಸಮಾರಂಭ ಮುಂದಿನ ದಿನಗಳಲ್ಲಿ ನಡೆಯಲಿದೆ.
ಮೊದಲ ಹಂತದಲ್ಲಿ ಬಾಣಸವಾಡಿ ರೈಲು ನಿಲ್ದಾಣದಿಂದ ತೆರಳುತ್ತಿದ್ದ ಮೂರು ಜೋಡಿ ರೈಲುಗಳನ್ನು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಸ್ಥಳಾಂತರಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ರೈಲು ಸೋಮವಾರ ಸಂಚಾರ ಆರಂಭ
ವಾರಕ್ಕೆ ಮೂರು ಬಾರಿ ಇರುವ 12684 ಬಾಣಸವಾಡಿ-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಸರ್. ಎಂ. ವಿ. ಟರ್ಮಿನಲ್ ನಿಂದ ಹೊರಡುವ ಮೊದಲ ರೈಲಾಗಿದೆ. ಈ ರೈಲು ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಪ್ರತಿ ಸೋಮವಾರ, ಮಂಗಳವಾರ ಮತ್ತು ಗುರುವಾರದಂದು ಸಂಚರಿಸಲಿದೆ. ಮೊದಲ ರೈಲು ಜೂನ್ 6 ರಂದು ರಾತ್ರಿ 7 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ. ಈ ರೈಲು ಜೂನ್ 7 ರಂದು ಎರ್ನಾಕುಲಂ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅದೇ ರೀತಿ 12683 ಎರ್ನಾಕುಲಂ-ಬಾಣಸವಾಡಿ ರೈಲು ವಾರಕ್ಕೆ ಮೂರು ಬಾರಿ ಎರ್ನಾಕುಲಂ ರೈಲು ನಿಲ್ದಾಣದಿಂದ ಕಾರ್ಯಚಲಿಸಲಿದೆ. ಈ ರೈಲು ಸೋಮವಾರ, ಮಂಗಳವಾರ ಮತ್ತು ಗುರುವಾರದಂದು ಬೆಳಗಿನ ಜಾವ 3.30 ಗಂಟೆಗೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬಂದು ತಲುಪಲಿದೆ ಎಂದು ತಿಳಿಸಿದರು.

ಬಾಣಸವಾಡಿ-ಕೊಚುವೆಲಿ ರೈಲು ಸಂಚಾರ
ಇದರೊಂದಿಗೆ 16320 ಬಾಣಸವಾಡಿ-ಕೊಚುವೆಲಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಮಧ್ಯಾಹ್ನ 1.30 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಹೊರಡಲಿದೆ. ಜೂನ್ 10ರಿಂದ ಇದರ ಸಂಚಾರ ಆರಂಭವಾಗಲಿದೆ. 16319 ಕೊಚುವೆಲಿ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ಮತ್ತು ಭಾನುವಾರ ಬೆಳಗ್ಗೆ 10.10 ಗಂಟೆಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಣಸವಾಡಿ-ಪಾಟ್ನಾ ರೈಲು ಸಂಚಾರ
ರೈಲು ನಂಬರ್ 22354 ಬಾಣಸವಾಡಿ-ಪಾಟ್ನಾ-ಹಮ್ಸಫರ್ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಸರ್. ಎಂ. ವಿ. ಟರ್ಮಿನಲ್‌ನಿಂದ ಮಧ್ಯಾಹ್ನ 1.50 ಗಂಟೆಗೆ ಹೊರಡಲಿವೆ. ಜೂನ್ 12 ರಿಂದ ಇದರ ಸಂಚಾರ ಆರಂಭವಾಗಲಿದೆ. ಅದೇ ರೀತಿ ವಾಪಸು 22353 ಪಾಟ್ನಾ-ಬಾಣಸವಾಡಿ-ಹಮ್ಸಫರ್ ಎಕ್ಸ್ ಪ್ರೆಸ್ ರೈಲು ಪಟ್ನಾ ನಿಲ್ದಾಣದಿಂದ ಹೊರಟು ಶನಿವಾರದಂದು ಸಂಜೆ 5.10 ಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರಿಂದ ಅಧಿಕೃತ ಚಾಲನೆ
"ಸರ್. ಎಂ. ವಿ. ಟರ್ಮಿನಲ್‌ನಿಂದ ಜೂನ್ 6 ರಿಂದ ಈ ಮೂರು ಜೋಡಿ ರೈಲುಗಳ ಚಾಲನೆಗೆ ರೈಲ್ವೆ ಮಂಡಳಿಯಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟರ್ಮಿನಲ್‌ನ ಅಧಿಕೃತ ಉದ್ಘಾಟನೆ ಆಗಲಿದೆ,'' ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು. 2021ರ ಮಾರ್ಚ್ ನಲ್ಲಿ ಸರ್. ಎಂ. ವಿ. ಟರ್ಮಿನಲ್ ಕಾಮಗಾರಿ ಪೂರ್ಣಗೊಂಡಿತು. ಆದರೆ ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಉದ್ಘಾಟನೆ ಸಮಾರಂಭ ಮುಂದೂಡಲಾಯಿತು.

ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಾಣ
ಏಪ್ರಿಲ್ 5 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಬೇಕಿತ್ತು. ಆದರೆ ಇತರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳ ಕಾರಣದಿಂದ ಟರ್ಮಿನಲ್ ಉದ್ಘಾಟನೆ ಸಮಾರಂಭ ರದ್ದಾಯಿತು. ವಿಮಾನ ನಿಲ್ದಾಣದ ಮಾದರಿಯಲ್ಲಿ ಸರ್. ಎಂ. ವಿ. ಟರ್ಮಿನಲ್ ನಿರ್ಮಿಸಲಾಗಿದೆ. 314 ಕೋಟಿ ರೂ. ವೆಚ್ಚದಲ್ಲಿ 4,200 ಚದರ ಅಡಿ ವಿಸ್ತೀರ್ಣದಲ್ಲಿ ಟರ್ಮಿನಲ್ ನಿರ್ಮಾಣಗೊಂಡಿದೆ. ನಿತ್ಯ 50,000 ಪ್ರಯಾಣಿಕರು ತೆರಳಬಹುದಾದ ಸಾಮರ್ಥ್ಯ ಹೊಂದಿದೆ. ಇಲ್ಲಿ ಒಟ್ಟು ಏಳು ಪ್ಲಾಟ್‌ಫಾರ್ಮ್ ಗಳು ಇವೆ. ಪ್ರತಿ ದಿನ 50 ರೈಲುಗಳು ಟರ್ಮಿನಲ್ ನಿಂದ ಕಾರ್ಯನಿರ್ವಹಿಸಬಹುದಾಗಿದೆ. ಅಲ್ಲದೇ ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ಸೆಂಟ್ರಲೈಸ್ಡ್ ಎಸಿ ಸೌಲಭ್ಯ ಹೊಂದಿದೆ. ಸರ್. ಎಂ. ವಿ. ಟರ್ಮಿನಲ್ ಮಾದರಿಯಲ್ಲಿ ಮಧ್ಯಪ್ರದೇಶದ ಹಬೀಬ್ ಗಂಜ್ ಮತ್ತು ಗುಜರಾತ್ ನ ಗಾಂಧಿನಗರದಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ. ಇವೆರಡು ಟರ್ಮಿನಲ್ ಗಳು ಸರ್. ಎಂ. ವಿ. ಟರ್ಮಿನಲ್ ಸಿದ್ಧವಾದ ನಂತರ ನಿರ್ಮಾಣಗೊಂಡಿದ್ದರೂ ಸಹ ಈಗಾಗಲೇ ಉದ್ಘಾಟನೆಗೊಂಡಿವೆ.












Click it and Unblock the Notifications