ನೆಲ್ಲೆ ಇಲ್ಲದ ಕಾಂಗ್ರೆಸ್: ಬಿಜೆಪಿ ನಾಯಕರು ಆತುರದ ನಿರ್ಧಾರ ಮಾಡದಂತೆ ಕಾರಜೋಳ ಮನವಿ
ರಾಯಚೂರು, ಏಪ್ರಿಲ್ 16: ರಾಜ್ಯ ವಿಧಾನಸಭಾ ಚುನಾವಣೆ 2023 ಹಿನ್ನೆಲೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಸೃಷ್ಟಿಯಾದ ಬಿಜೆಪಿ ಬಂಡಾಯ, ಪಕ್ಷಾಂತರ ಪರ್ವ ಮುಂದುವರಿದಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪಕ್ಷ ನಾಯಕರು ಯಾವುದೇ ಕಾರಣಕ್ಕೂ ಆತುರತದ ನಿರ್ಧಾರ ಕೈಗೊಳ್ಳಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಜಿಲ್ಲೆಯ ರಾಯಚೂರು ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಪಕ್ಷಾಂತರ ಪರ್ವ ಘಟನೆಗೆ ಬೇಸರ ವ್ಯಕ್ತಪಡಿಸಿದರು.

ಟಿಕೆಟ್ ಕೈ ತಪ್ಪುತ್ತಿದ್ದಂತೆ ರಾಜ್ಯದ ಬಿಜೆಪಿ ನಾಯಕರ ಬಂಡಾಯ ಶಮನಕ್ಕೆ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶುಕ್ರವಾರವಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದರು. ಅದರ ಬೆನ್ನಲ್ಲೆ ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯಲು ಮುಂದಾಗಿದ್ದಾರೆ. ಅವರು ಭಾನುವಾರ ಬೆಳಗ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಎಂ ಕಾರಜೋಳ. ನಾಯಕರು ಆತುರದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಅವಸರದ ನಿರ್ಧಾರದಿಂದ ನಮ್ಮ ಮೂಗನ್ನು ನಾವೇ ಕೊಯ್ದುಕೊಂಡಂತೆ ಆಗುತ್ತದೆ. ಆದ್ದರಿಂದ ಯಾರೊಬ್ಬರು ಹೀಗೆ ಅವಸರದ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಮನವಿ ಮಾಡಿದರು.
ನೆಲೆ ಇಲ್ಲದ ಕಾಂಗ್ರೆಸ್: ಆತುರದ ನಿರ್ಧಾರ ಬೇಡ
ನೆಲೆ ಇಲ್ಲದ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿ ಹುಡುಕುತ್ತಿದೆ. ಆದ್ದರಿಂದ ಯಾರೂ ಆತುರದ ನಿರ್ಧಾರ ಕೈಗೊಳ್ಳಬೇಡಿ ಕೈ ಮುಗಿದು ಕೇಳುತ್ತೇನೆ. ಹೀಗಾಗಿ ಬಿಜೆಪಿ ಟಿಕೆಟ್ ವಂಚಿತರ ಕೈ ಕಾಲು ಹಿಡಿದು ಅಭ್ಯರ್ಥಿಗಳನ್ನು ಕರೆದೊಯ್ಯುತ್ತಿದ್ದಾರೆ. ಅವಸರದ ನಿರ್ಧಾರ ಯಾವ ನಾಯಕರು ಮಾಡುವುದು ಬೇಡ. ಹೊಸ ಉತ್ಸಾಹಿ ಸದಸ್ಯರನ್ನು ತಯಾರು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ವಿವರಿಸಿದರು.

ಬಿಜೆಪಿಯಿಂದ ಹೊರ ಬಂದಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರದ ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್‌ನಿಂದ ಗೆಲ್ಲುತ್ತಾರಾ ಎಂಬ ಪ್ರಶ್ನೆಗೆ ಗೋವಿಂದ ಕಾರಜೋಳ ಅವರು ಉತ್ತರಿಸಿದರು. ಪ್ರದಾನಮಂತ್ರಿ ನರೇಂದ್ರ ಮೋದಿ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ. ಪಕ್ಷದಲ್ಲಿ ಕಾರ್ಯಕರ್ತರ ಸಮಸ್ಯೆ ಉಂಟಾಗಿಲ್ಲ. ಅವರೆಲ್ಲ ಪಕ್ಷಕ್ಕೆ ಬದ್ಧರಾಗಿದ್ದಾರೆ. ಜಗದೀಶ್ ಶೆಟ್ಟರ್ ನಿಲ್ಲುವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಪರಿಸ್ಥಿತಿ ಉದ್ಭವವಾಗುವುದೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೇಸರ ವ್ಯಕ್ತಪಡಿಸಿದ ಬಿಎಸ್‌ವೈ
ಜಗದೀಶ್ ಶೆಟ್ಟರ್ ಪಕ್ಷಾಂತರ ಕುರಿತ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಶೆಟ್ಟರ್‌ಗೆ ಎಲ್ಲಾ ಸ್ಥಾನಮಾನಗಳನ್ನು ಪಕ್ಷದಿಂದ ನೀಡಲಾಗಿತ್ತು. ವಿಧಾನಪರಿಷತ್ ಸ್ಥಾನವನ್ನು ನೀಡಿದ್ದೇವೆ. ಪಕ್ಷದಿಂದ ನಾವೇನು ಅವರಿಗೆ ಕಡಿಮೆ ಮಾಡಿರಲಿಲ್ಲ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಸಹ ತಮ್ಮ ಸ್ಥಾನದಲ್ಲಿ ಮುಂದುವರಿಯಬಹುದಿತ್ತು. ಎಲ್ಲಾ ಸ್ಥಾನಮಾನಗಳನ್ನು ಪಡೆದು ಈಗ ಪಕ್ಷ ಬಿಟ್ಟು ಬೇರೆ ಪಕ್ಷ ಸೇರ್ಪಡೆಗೊಂಡಿದ್ಧಾರೆ. ಇದು ನಂಬಿಕೆ, ವಿಶ್ವಾಸಕ್ಕೆ ಮಾಡಿದ ದ್ರೋಹ. ಮುಖ್ಯವಾಗಿ ಜನರಿಗೆ ಮಾಡಿದ ದ್ರೋಹ. ನಾಡಿನ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ಸವದಿ ಮತ್ತು ಶೆಟ್ಟರ್ ನಿರ್ಧಾರ ಕುರಿತು ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications