ರಫೇಲ್ ಯುದ್ಧ ವಿಮಾನಗಳಿಗೆ ಬೆಂಗಳೂರಲ್ಲಿ ಬಿಡಿಭಾಗ ತಯಾರು! ದೇವನಹಳ್ಳಿಯಲ್ಲಿ ಬೃಹತ್ ಘಟಕ ಆರಂಭ
ಬೆಂಗಳೂರು: ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಅಗತ್ಯವಾದ ಅತ್ಯಾಧುನಿಕ ಹಾಗೂ ನಿಖರವಾದ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಪ್ರತಿಷ್ಠಿತ 'ಹೈಕ್ಯಾಲ್ ಟೆಕ್ನಾಲಜೀಸ್' ಕಂಪನಿಯು ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ನೂತನ ಬೃಹತ್ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಇದರಿಂದ ಕಂಪನಿಯ ಸಾಮರ್ಥ್ಯ ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಮಾರುಕಟ್ಟೆಯಲ್ಲಿ ಇನ್ನಷ್ಟು ವಿಸ್ತಾರಗೊಂಡಿದೆ.
ದೇವನಹಳ್ಳಿಯಲ್ಲಿ ತಲೆಎತ್ತಿರುವ ಈ ನೂತನ ಘಟಕವು ಬರೋಬ್ಬರಿ 60,000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದೆ. ಕಂಪನಿಯ ಇತರ ಘಟಕಗಳಲ್ಲಿ ಇದು ಕೂಡ ಬೃಹದಾಕಾರವಾಗಿದೆ. ವಾಣಿಜ್ಯ ಬಳಕೆಯ ವಿಮಾನಗಳು ಹಾಗೂ ಭಾರತೀಯ ವಾಯುಪಡೆಯ ಪ್ರಬಲ ರಫೇಲ್ ಯುದ್ಧ ವಿಮಾನಗಳಿಗೆ ಬೇಕಾಗುವ ಸಂಕೀರ್ಣ ಎಲೆಕ್ಟ್ರೋಮ್ಯಾಗ್ನೆಟಿಕ್ಸ್, ಎಲೆಕ್ಟ್ರೋಮೆಕ್ಯಾನಿಕಲ್, ಹೈಡ್ರಾಲಿಕ್ ಮತ್ತು ಕಂಟ್ರೋಲ್ ಸಿಸ್ಟಮ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಹೊಸ ಘಟಕದ ವೈಶಿಷ್ಟ್ಯಗಳು
ವಿಶೇಷವೆಂದರೆ ಗ್ರಾಹಕರಿಗೆ ಹೈಕ್ಯಾಲ್‌ನ ಘಟಕಗಳ ಕಾರ್ಯವೈಖರಿ ಮತ್ತು ತಂತ್ರಜ್ಞಾನವನ್ನು ಪರಿಚಯಿಸಲು ವಿಶೇಷವಾದ 'ಅನುಭವ ಕೇಂದ್ರ'ವನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ. ಜಾಗತಿಕೆ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಪೂರೈಸಲಾಗುತ್ತದೆ ಎಂದು ಹೈಕ್ಯಾಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಯಶಸ್ ಜೈವೀರ್ ಅವರು ಹೊಸ ಘಟಕೆ ಕುರಿತು ವಿವರಿಸಿದರು.
ದೇವನಹಳ್ಳಿಯ ಈ ನೂತನ ಘಟಕವು ಜಾಗತಿಕ ಮಟ್ಟದ ಸಂಕೀರ್ಣ ಏರೋಸ್ಪೇಸ್ ಮತ್ತು ರಕ್ಷಣಾ ಯೋಜನೆಗಳಿಗೆ ಅಗತ್ಯ ಬಲ ತುಂಬಲಿದೆ. ನಿಖರತೆ, ವಿಶ್ವಾಸಾರ್ಹತೆ ಮತ್ತು ಶಿಸ್ತಿನೊಂದಿಗೆ ಜಾಗತಿಕ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಇದು ನಮಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.
ಹೊಸೂರಿನಲ್ಲಿಯೂ ಮತ್ತೊಂದು ಬೃಹತ್ ಘಟಕ
ಬೆಂಗಳೂರಿನ ದೇವನಹಳ್ಳಿಯಲ್ಲಿ ಹೊಸ ಘಟಕ ಮಾತ್ರವಲ್ಲದೆ, ತಮಿಳುನಾಡಿನ ಹೊಸೂರಿನಲ್ಲಿಯೂ ಹೈಕ್ಯಾಲ್ ಟೆಕ್ನಾಲಜೀಸ್ ಬರೋಬ್ಬರಿ 1,60,000 ಚದರಡಿ ವಿಸ್ತೀರ್ಣದ ಬೃಹತ್ ಏರೋಸ್ಪೇಸ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ಕಳೆದ ಜುಲೈನಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿದೆ. ಕಾಮಗಾರಿ ಭರದಿಂದ ಸಾಗಿದೆ.
ಹೊಸೂರು ಘಟಕವು ನಿಖರವಾದ ಯಂತ್ರೋಪಕರಣಗಳು ಮತ್ತು ಫ್ಯಾಬ್ರಿಕೇಷನ್‌ಗಾಗಿ ಮೀಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಎನ್‌ಎಡಿಸಿಎಪಿʼ ಮಾನ್ಯತೆ ಪಡೆಯುವ ಹಾದಿಯಲ್ಲಿದೆ. ದೇವನಹಳ್ಳಿ ಮತ್ತು ಹೊಸೂರಿನ ಈ ಎರಡೂ ಘಟಕಗಳು ಒಟ್ಟಾಗಿ ಸೇರಿ ಹೈಕ್ಯಾಲ್‌ನ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಲಿವೆ.
'ಆತ್ಮನಿರ್ಭರ್ ಭಾರತ್'ಉಪಕ್ರಮಕ್ಕೆ ಬಲ
ಹೈ ಪ್ರೆಸಿಶನ್ ಎಲೆಕ್ಟ್ರೋಮೆಕ್ಯಾನಿಕಲ್ ಸಿಸ್ಟಮ್ಸ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಹೈಕ್ಯಾಲ್ ಟೆಕ್ನಾಲಜೀಸ್ ವಿಶ್ವದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳಿಗೆ ನಂಬಿಗಸ್ತ ಪೂರೈಕೆದಾರನಾಗಿದೆ. ಭಾರತದ ರಕ್ಷಣಾ ವಲಯದ ಉತ್ಪಾದನಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆ, ತನ್ನ ಈ ಹೊಸ ವಿಸ್ತರಣೆಯ ಮೂಲಕ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ದೃಷ್ಟಿಕೋನಕ್ಕೆ ಆನೆಬಲ ತಂದುಕೊಟ್ಟಿದೆ ಎಂದರು.


Click it and Unblock the Notifications
