Rachin Ravindra: ಮನೆಗೆ ಬಂದ ರಚಿನ್ ರವೀಂದ್ರ: ಮೊಮ್ಮಗನಿಗೆ ದೃಷ್ಟಿ ತೆಗೆದು ಆಶೀರ್ವದಿಸಿದ ಅಜ್ಜಿ
ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್‌ನ ಯುವ ಕ್ರಿಕೆಟಿಗ ರಚಿನ್ ರವೀಂದ್ರ ಬೆಂಗಳೂರು ಮೂಲದವರು ಎಂದು ಗೊತ್ತಿದೆ. ಗುರುವಾರ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಚಿನ್ ರವೀಂದ್ರ ಶ್ರೀಲಂಕಾ ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ 2 ವಿಕೆಟ್ ಪಡೆಯುವ ಜೊತೆಗೆ 34 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಚಿನ್ ರವೀಂದ್ರ ಅವರ ತಂದೆ ತಾಯಿ ನ್ಯೂಜಿಲೆಂಡ್‌ನಲ್ಲಿ ನೆಲೆಸಿದ್ದರೂ ಅವರ ಅಜ್ಜಿ ತಾತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿಗೆ ಬಂದಿರುವ ರಚಿನ್ ರವೀಂದ್ರ ಅಜ್ಜಿ ಮನೆಗೆ ಭೇಟಿ ನೀಡಿ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.
Newzeland cricket player Rachin Ravindra at his grandparents home in Bengaluru. pic.twitter.com/bcGoVGHeRQ
— MTN KUMAR ಮಂಡ್ಯ… (@pourvanikumar) November 10, 2023
ಮೊಮ್ಮಗನಿಗೆ ದೃಷ್ಟಿ ತೆಗೆದ ಅಜ್ಜಿ
ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಚಿನ್ ರವೀಂದ್ರ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಮನೆಗೆ ಬಂದ ಮೊಮ್ಮಗನಿಗೆ ಅಜ್ಜಿ ದೃಷ್ಟಿ ತೆಗೆದಿದ್ದು ಮೊಮ್ಮಗನ ಯಶಸ್ಸಿಗೆ ಹಾರೈಸಿದ್ದಾರೆ. ರವೀಂದ್ರ ಅವರಿಗೆ ದೃಷ್ಟಿ ತೆಗೆಯುವ ವಿಡಿಯೋ ಭಾರಿ ವೈರಲ್ ಆಗಿದ್ದು, ಅಜ್ಜಿಯ ಮುಗ್ದ ಪ್ರೀತಿಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
ಈ ಸಂಸ್ಕೃತಿಯು ಭಾರತದಾದ್ಯಂತ ಬಹಳ ಜನಪ್ರಿಯವಾಗಿದೆ, ಚಿಕ್ಕ ಮಕ್ಕಳು, ಮೊಮ್ಮಕ್ಕಳಿಗೆ ದೃಷ್ಟಿ ಆದಾಗ, ಅಜ್ಜಿಯಂದಿರುವ ವಿವಿಧ ಮಾದರಿಯಲ್ಲಿ ದೃಷ್ಟಿ ತೆಗೆಯುವುದು ಆಚರಣೆಯಲ್ಲಿದೆ. ರಚಿನ್ ರವೀಂದ್ರ ಅವರಿಗೆ ಇದು ಹೊಸದಾದರು, ಅಜ್ಜಿಯ ಪ್ರೀತಿಯಂತೂ ಸಿಕ್ಕಿದೆ.
ಅಜ್ಜಿಯ ಪ್ರೀತಿಯನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ, ವಿಡಿಯೋಗೆ ಕಾಮೆಂಟ್ ಮಾಡಿರುವ ಹಲವರು ಇಂತಹ ಸುಂದರ ಕುಟುಂಬವನ್ನು ಪಡೆಯಲು ರಚಿನ್ ರವೀಂದ್ರ ಪುಣ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ, ಇನ್ನೂ ಕೆಲವರು, "ಓಹ್, ಅದಕ್ಕೇ ಚಿನ್ನಸ್ವಾಮಿಯಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತದೆ.. ಅವನು ಲೋಕಲ್ ಹುಡುಗ" ಎಂದು ಕಮೆಂಟ್ ಮಾಡಿದ್ದಾರೆ.
ಆರ್ ಸಿಬಿ ತಂಡಕ್ಕೆ ಆಡ್ತಾರ ರಚಿನ್?
ಇನ್ನು ರಚಿನ್ ರವೀಂದ್ರ ಅವರ ಪ್ರದರ್ಶನವನ್ನು ಕಂಡ ಆರ್ ಸಿಬಿ ಅಭಿಮಾನಿಗಳು ಅವರನ್ನು ಆರ್ ಸಿಬಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇನ್ನೂ 22 ವರ್ಷದ ರಚಿನ್ ಅವರು ಆರ್ ಸಿಬಿ ಪಾಳಯ ಸೇರಿದರೆ ಭವಿಷ್ಯದ ಪ್ರಮುಖ ಆಟಗಾರರಾಗುವ ಅವಕಾಶ ಹೊಂದಿದ್ದಾರೆ. ಅಲ್ಲದೆ ಬೆಂಗಳೂರಿನ ಜೊತೆ ಕೂಡ ಭಾವನಾತ್ಮಕ ನಂಟು ಹೊಂದಿದ್ದು ಅವರು ಆರ್ ಸಿಬಿ ಪರವಾಗಿ ಆಡಬೇಕು ಎಂದು ಅಭಿಮಾನಿಗಳ ಬೇಡಿಕೆ ಇಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ರಚಿನ್ ರವೀಂದ್ರ ಕೂಡ ಬೆಂಗಳೂರು ಜನತೆಯ ಪ್ರೀತಿಗೆ ಧನ್ಯವಾದ ಹೇಳಿದ್ದರು, ಚಿನ್ನಸ್ವಾಮಿಯಲ್ಲಿ ಹೆಚ್ಚಿನ ಪಂದ್ಯಗಳನ್ನಾಡಲು ಎದುರು ನೋಡುತ್ತಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಆರ್ ಸಿಬಿ ಪರವಾಗಿ ಆಡುವ ಆಸೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications