"ಇನ್ಫೋಸಿಸ್ ಕಂಪನಿ ಆಂಧ್ರಕ್ಕೆ ಹೋದ್ರೆ ಕರ್ನಾಟಕ ಸರ್ಕಾರದ ಗತಿ ಏನು?'
ಬೆಂಗಳೂರು, ಅಕ್ಟೋಬರ್ 19: ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ವಿರುದ್ಧ ಸಿಟ್ಟಿದ್ದರೆ, ಆ ಸಿಟ್ಟನ್ನು ಬಿಜೆಪಿಯ ಮೇಲೆಯೇ ತೀರಿಸಿಕೊಳ್ಳಲಿ. ಆದರೆ ರಾಷ್ಟ್ರಭಕ್ತಿಯಿಂದ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕಿಲ್ಲ. ಕಾಂಗ್ರೆಸ್ ಸರ್ಕಾರ ಪಾಕಿಸ್ತಾನಕ್ಕೆ ಪರ ಜೈಕಾರ ಹಾಕುವವರನ್ನು ಬೆಂಬಲಿಸುತ್ತದೆ. ಭಾರತ್ ಮಾತಾ ಕೀ ಜೈ ಎನ್ನುವವರನ್ನು ವಿರೋಧಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಆಕ್ರೋಶ ಹೊರಹಾಕಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಸರ್ಕಾರ ಬೆಂಬಲಿಸುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದು ಸಾಬೀತಾಗಿದೆ. ಆಗ ಅವರು ಹಾಗೆ ಹೇಳಿಯೇ ಇಲ್ಲ ಎಂದು ಸಚಿವರು ಹೇಳಿದ್ದರು. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡುವವರನ್ನು ಬ್ರದರ್ ಎಂದಿದ್ದರು. ಎಲ್ಲವೂ ಸಾಬೀತಾದರೂ ಅವರನ್ನೇ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಬಿಜೆಪಿ ನಮಾಜ್ ನಿಷೇಧಿಸಿಲ್ಲ
ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಶುಕ್ರವಾರ ನಮಾಜ್ ಮಾಡಿ ರಸ್ತೆ ಬಂದ್ ಮಾಡುತ್ತಾರೆ. ಬಿಜೆಪಿ ಸರ್ಕಾರವಿದ್ದಾಗ ಅದನ್ನು ಎಂದೂ ನಿಷೇಧಿಸಿರಲಿಲ್ಲ. ಆದರೆ ಆರ್‌ಎಸ್‌ಎಸ್ ಪಥ ಸಂಚಲನ ಮಾಡಲು ಹೊರಟರೆ ಅದಕ್ಕೆ ಅವಕಾಶ ನೀಡಲ್ಲ. ಆರ್‌ಎಸ್‌ಎಸ್ ಅನುಮತಿ ಪಡೆದೇ ಪಥ ಸಂಚಲನ ಮಾಡುತ್ತಿದೆ. ಎಲ್ಲ ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ಗೆ ಖಂಡಿತ ಹೋಗುತ್ತಾರೆ. ಹಾಗಾದರೆ ಕಾಂಗ್ರೆಸ್ ನಾಯಕರ ಮಕ್ಕಳು ಯಾವುದಾದರೂ ಹೋರಾಟಕ್ಕೆ ಹೋಗಿದ್ದಾರಾ? ಯಾವ ದಲಿತ ಸಂಘಟನೆಯ ಹೋರಾಟಗಳಲ್ಲಿ ನಾಯಕರ ಮಕ್ಕಳು ಭಾಗವಹಿಸಿದ್ದಾರೆ? ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಕೋರ್ಟ್ ಛೀಮಾರಿ
ಆರ್‌ಎಸ್‌ಎಸ್ ವಿರುದ್ಧ ಕೈಗೊಳ್ಳುವ ಕ್ರಮಗಳು ಮುಂದೆ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ. ಪಥ ಸಂಚಲನದ ಅನುಮತಿಗೆ ಸಂಬಂಧಿಸಿದಂತೆ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಯಾವುದೇ ಸಂಘಟನೆಗಳ ಕಾರ್ಯಕ್ರಮಕ್ಕೆ ನಾವು ಎಂದೂ ಕಡಿವಾಣ ಹಾಕಿಲ್ಲ. ಅದೇ ರೀತಿ ಕಾಂಗ್ರೆಸ್ ಕೂಡ ನಡೆದುಕೊಳ್ಳಬೇಕು. ಆರ್‌ಎಸ್‌ಎಸ್‌ನ ಕಾರ್ಯಗಳೇನು ಎಂಬುದನ್ನು ಇವರು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇನ್ಫೋಸಿಸ್ ಆಂಧ್ರಕ್ಕೆ ಹೋದರೆ ಗತಿ ಏನು?
ಸುಧಾಮೂರ್ತಿ ಅವರನ್ನು ಸಿಎಂ ಸಿದ್ದರಾಮಯ್ಯ ಬೃಹಸ್ಪತಿಗಳಾ ಎಂದು ಕೇಳುತ್ತಾರೆ. ಇಷ್ಟ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದು ಹೈಕೋರ್ಟ್ ಹೇಳಿದೆ. ಆದರೂ ಅವರನ್ನು ಟೀಕಿಸುವುದು ನ್ಯಾಯಾಂಗ ನಿಂದನೆಯಾಗಿದೆ. ಇನ್ಫೋಸಿಸ್‌ನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅವರೂ ಆಂಧ್ರಕ್ಕೆ ಹೋದರೆ ಸರ್ಕಾರದ ಗತಿ ಏನು? ಸಿಎಂ ಸಿದ್ದರಾಮಯ್ಯ ಯಾವ ರೀತಿಯ ಬೃಹಸ್ಪತಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಿಂದ ಒಂದು ಯೋಜನೆ ಸಹ ಆಗಿಲ್ಲ
ಪ್ರತಿ ವರ್ಷ ಬಿಜೆಪಿ ಸರ್ಕಾರ ಬಿಬಿಎಂಪಿಗೆ 7-8 ಸಾವಿರ ರೂ. ನೀಡಿದೆ. ಇದೇ ಅನುದಾನದಲ್ಲಿ ಈಗಲೂ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಈಗಿನ ಸರ್ಕಾರದಲ್ಲಿ ಒಂದೇ ಒಂದು ಯೋಜನೆ ನಡೆದಿಲ್ಲ. ಸರ್ಕಾರ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನ ಜನರು ತಮ್ಮ ಮುಂದಿನ ರಸ್ತೆಗಳನ್ನು ಅವರೇ ಡಾಂಬರೀಕರಣ ಮಾಡಿಕೊಳ್ಳಬೇಕಿದೆ. ಗ್ರಂಥಪಾಲಕರು, ನೀರುಗಂಟಿಗಳಿಗೆ ಸಂಬಳ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಹಾಗೂ ಈಗಿನ ಸರ್ಕಾರ ಎಷ್ಟು ಸಾಲ ಮಾಡಿದೆ, ಈಗ ಹಣ ಎಷ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.
ಹಿಂದಿನ ಕಾಂಗ್ರೆಸ್ ಮಾಡಿದ್ದ 15,000 ಕೋಟಿ ರೂ. ಸಾಲವನ್ನು ಬಿಜೆಪಿ ಸರ್ಕಾರ ತೀರಿಸಿದೆ. ಈ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಉತ್ತರಿಸಲಿ. ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂ. ನೀಡಬೇಕಿದ್ದು, ಅಷ್ಟೊಂದು ಹಣ ಕೊಡಬೇಕೆಂದರೂ ಖಜಾನೆಯಲ್ಲಿ ಹಣವೇ ಇಲ್ಲ ಎಂದರು.












Click it and Unblock the Notifications