ಮಕ್ಕಳು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಓದಬೇಕಾ? ಪಠ್ಯ ಬದಲಾವಣೆ ಬಗ್ಗೆ ಪ್ರಿಯಾಂಕ್ ಖರ್ಗೆ ಸುಳಿವು
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ಮಾಡಿದ್ದ ಪಠ್ಯವನ್ನು ಪರಿಷ್ಕರಣೆ ಮಾಡುವ ಕೂಗು ಕೇಳಿಬಂದಿದೆ. ವಿವಾದಿತ ಪಠ್ಯಗಳನ್ನು ಕೈಬಿಟ್ಟು, ಬಿಜೆಪಿ ಕೈಬಿಟ್ಟಿದ್ದ ಪಠ್ಯಗಳನ್ನು ಸೇರ್ಪಡೆ ಮಾಡುವಂತೆ ಹಲವು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಕೂಡ ಪಠ್ಯ ಪರಿಷ್ಕರಣೆ ಮಾಡುವ ಬಗ್ಗೆ ಸುಳಿವು ಕೊಟ್ಟಿದೆ, ಬೆಂಗಳೂರಿನಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಲೇಖಕ, ಭಾಷಣಕಾರ ಚಕ್ರವರ್ತಿ ಸೂಲಿಬೆಲೆಯವರ ಅವರ ಅರ್ಹತೆ ಮತ್ತು ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಯಾವ ಆಧಾರದ ಮೇಲೆ ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ಅಳವಡಿಸಿದ್ದಾರೆ. ಅವರು ಯಾವ ಪಿಹೆಚ್‌ಡಿ ಮಾಡಿದ್ದಾರೆ. ಬಾಡಿಗೆ ಭಾಷಣಕಾರ ಮತ್ತು ವಾಟ್ಸ್ಯಾಪ್ ಯೂನಿವರ್ಸಿಟಿಗಳ ಉಪ ಕುಲಪತಿಗಳು ಬರೆಯುವ ಪಾಠಗಳನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟು ಬರ ಬಂದಿದೆಯಾ? ಎಂದು ಪ್ರಶ್ನೆ ಮಾಡಿದರು.
ಚಕ್ರವರ್ತಿ ಸೂಲಿಬೆಲೆ ಯಾವುದಾದರೂ ವಿಷಯದಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದುಕೊಂಡಿದ್ದಾರ? ಪಠ್ಯ ಬರೆಯಲು ಅವರಿಗೆ ಇರುವ ಯೋಗ್ಯತೆ ಆದರೂ ಏನು, ಇಂತಹವರನ್ನೆಲ್ಲಾ ಸಾಹಿತಿಗಳು ಎನ್ನುವಷ್ಟು ಕರ್ನಾಟಕ ಸಾಹಿತ್ಯ ಲೋಕ ಬರಗೆಟ್ಟಿದೆಯಾ? ಎಂದು ಪ್ರಶ್ನೆ ಮಾಡಿದರು.
ನಿಮ್ಮ ಮಕ್ಕಳು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಓದಬೇಕಾ?
ಭಗತ್ ಸಿಂಗ್ ಅವರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಪಾರವಾದ ಗೌರವ ಇದೆ, ಅವರ ನಿಜವಾದ ಇತಿಹಾಸವನ್ನು ನಾವು ಹೇಳುತ್ತೇವೆ, ಅವರ ಪುಸ್ತಕ ಓದಿದ್ದೀರಾ ತಾವು, ನಾನು ನಾಸ್ತಿಕ ಯಾಕಾಗಿದ್ದೇನೆ ಎನ್ನುವ ಪುಸ್ತಕ ಬರೆದಿದ್ದಾರೆ ಅದನ್ನು ಬಿಜೆಪಿಯವರು ಓದಲಿ ಸಾಕು ಎಂದು ಹೇಳಿದರು.
ತಿರುಚಲು ಸಾಧ್ಯವಾಗದ ಪಠ್ಯವನ್ನು ಪುಸ್ತಕಗಳಲ್ಲಿ ಇಡುತ್ತೇವೆ, ಚಕ್ರವರ್ತಿ ಸೂಲಿಬೆಲೆ ಅವರ ಪಾಠ ನಮ್ಮ ಮಕ್ಕಳಿಗೆ ಅಗತ್ಯವಿಲ್ಲ. ಯಾವುದು ಕೇಸರೀಕರಣ ಇದೆ, ಯಾವ ಪಠ್ಯವನ್ನು ತಿರುಚಲಾಗಿದೆ ಅದನ್ನು ತೆಗೆಯುತ್ತೇವೆ, ನಾನು ಬರೆದರೆ ನೀವು ಓದ್ತೀರಾ? ನನಗೆ ಸಾಹಿತ್ಯದ ಯಾವ ಹಿನ್ನಲೆ ಇದೆ? ನಾನು ಇತಿಹಾಸವನ್ನು ಅಧ್ಯಯನ ಮಾಡಿದವನಾ? ಆಡಳಿತ ಪಕ್ಷದವರಿಗೆ ಹತ್ತಿರವಾಗಿದ್ದೇನೆ ಎಂದು ಪಠ್ಯಪುಸ್ತಕದಲ್ಲಿ ಪಾಠ ಸೇರಿಸುವುದು ಸರಿಯಾ? ನಾವು ಅದಕ್ಕೆ ವಿರುದ್ಧವಾಗಿದ್ದೇವೆ, ಸಾಹಿತಿಗಳ ಪಠ್ಯ ಇರಲಿ, ಸತ್ಯ ಇರಲಿ ಎಂದರು. ನಿಮ್ಮ ಮಕ್ಕಳನ್ನು ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಓದಿಸಬೇಕಾ ಇಲ್ಲ ಒಳ್ಳೆ ಯುನಿವರ್ಸಿಟಿಯಲ್ಲಿ ಓದಿಸಬೇಕಾ ಎಂದು ಪ್ರಶ್ನೆ ಮಾಡಿದರು.












Click it and Unblock the Notifications