ಪರಮೇಶ್ವರ್ ಅವರನ್ನು ಭೇಟಿಯಾಗಲಿರುವ ಖಾಸಗಿ ವೈದ್ಯರು
ಬೆಂಗಳೂರು, ಜೂನ್ 19 : ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರನ್ನು ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಮಸೂದೆ ಕುರಿತಂತೆ ಮಂಗಳವಾರ ಭೇಟಿಯಾಗಲಿದ್ದಾರೆ.
ಈ ಮಸೂದೆಯ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಸೇವೆಯ ದರವನ್ನು ಸರಕಾರವೇ ನಿಗದಿಪಡಿಸಲಾಗುವುದು. ಈ ಮಸೂದೆ ಮಂಡನೆಯಾದರೆ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಖಾಸಗಿ ವೈದ್ಯರ ಅಳಲು.

ಈ ವಿಷಯದ ಕುರಿತು ಚರ್ಚಿಸಲೆಂದು ಮಂಗಳವಾರ, ಜೂನ್ 20ರಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್ ಗಳ ಒಕ್ಕೂಟ ಪರಮೇಶ್ವರ್ ಅವರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿಯಾಗಲಿದೆ.
ಈ ಮಸೂದೆ ಖಾಸಗಿ ಆಸ್ಪತ್ರೆಗಳ ಮೇಲೆ ಏಕೆ ಹೇರಲಾಗಿದೆ, ಸರಕಾರಿ ಆಸ್ಪತ್ರೆಗಳನ್ನು ಏಕೆ ಹೊರಗಿಡಲಾಗಿದೆ ಎಂದು ಪ್ರಶ್ನಿಸಿ ಸಾವಿರಾರು ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆದರೆ, ಈ ಮಸೂದೆ ಮಂಡನೆಯಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ವೈದ್ಯಕೀಯ ಖಾತೆ ಸಚಿವ ರಮೇಶ್ ಕುಮಾರ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ. ಮಸೂದೆ ಕಾನೂನು ಬಾಹಿರವಾಗಿದೆ ಎಂದು ಸಿಪಿಐ(ಎಂ) ಪಕ್ಷದ ಕರ್ನಾಟಕ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಅನಗತ್ಯವಾಗಿ ಚಿಕಿತ್ಸೆ ನೀಡುತ್ತಿದ್ದು, ಅವರಿಂದ ಚಿಕಿತ್ಸೆಯ ಮೌಲ್ಯವನ್ನೂ ಮೀರಿ ಹಣವನ್ನು ಕೀಳುತ್ತಿದ್ದಾರೆ ಎಂದು ಆರೋಪ ಬಂದಿರುವ ಹಿನ್ನೆಲೆಯಲ್ಲಿ ಈ ಮಸೂದೆ ಮಂಡಿಸಲಾಗುತ್ತಿದೆ. ಇದರಲ್ಲಿನ ನಿಯಮಗಳನ್ನು ಮೀರಿ ಹೆಚ್ಚಿಗೆ ಹಣ ಕೀಳಿದರೆ ಜೈಲು ಕೂಡ ಆಗಬಹುದು.












Click it and Unblock the Notifications