ಹಲಸೂರು ಕೆರೆ ಅಭಿವೃದ್ಧಿಗೆ ಪ್ರೆಸ್ಟೀಜ್ ಕಂಪನಿ ಆಸಕ್ತಿ
ಬೆಂಗಳೂರು, ಜನವರಿ 31: ಹಲಸೂರು ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೊಳಚೆ ನೀರು ಹಾಗೂ ಮಲಿನಗೊಂಡಿರುವ ಕೆರೆಯನ್ನು ಅಭಿವೃದ್ಧಿಪಡಿಸಲು ಪ್ರೆಸ್ಟೀಜ್ ಕಂಪನಿ ಮುಂದಾಗಿದೆ.
ಪ್ರೆಸ್ಟೀಜ್ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಗೆ ನಿಧಿಯಿಂದ ಸುಮಾರು126 ಎಕರೆ ವಿಸ್ತೀರ್ಣದ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಅನುಮತಿ ನೀಡುವಂತೆ ಬಿಬಿಎಂಪಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಿದೆ.
ಪ್ರೆಸ್ಟೀಜ್ ಕಂಪನಿಯು ಸಮ್ಮತಿ ಪತ್ರ ಸಲ್ಲಿಸಿದೆ. ಈ ಪ್ರಸ್ತಾವವನ್ನು ಡಿಎಸೆಂಬರ್ 23 ರಂದು ಪ್ರಾಧಿಕಾರದ ತಾಂತ್ರಿಕ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಸಮಿತಿಯು ನೀಡುವ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

15 ಕೋಟಿ ರೂ. ವೆಚ್ಚದಲ್ಲಿ ಕೆರೆ ಸಮಗ್ರವಾಗಿ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡಲು ಕಂಪನಿ ಆಸಕ್ತಿ ತೋರಿದೆ. ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಗಟ್ಟುವುದು, ಸುತ್ತಲೂ ವಿಹಾರ ಪಥ, ಸೈಕಲ್ ಪಥ, ಬಯಲು ವ್ಯಾಯಾಮ ಶಾಲೆ, ಬಯಲು ರಂಗಮಂದಿರ, ಕಾಫಿ ಶಾಪ್, ವಿಹಾರಿಗಳಿಗೆ ಕುಳಿತುಕೊಳ್ಳಲು ಆಸನ, ಸಾರ್ವಜನಿಕ ಶೌಚಾಲಯ, ವಿದ್ಯುತ್ ದೀಪ ಹಾಗೂ ಸಂಗೀತ ವ್ಯವಸ್ಥೆ ಕಲ್ಪಿಸುವುದು ಯೋಜನೆಯಲ್ಲಿ ಒಳಗೊಂಡಿದೆ ಎಂದು ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.












Click it and Unblock the Notifications