KIA: ಬೆಂಗಳೂರು ಏರ್ಪೋರ್ಟ್ಗೆ 18ರ ಸಂಭ್ರಮ: ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಗೌರವ
ಬೆಂಗಳೂರು: ವಾರ್ಷಿಕ 44 ಮಿಲಿಯನ್ ಪ್ರಯಾಣಿಕರ ಸಂಚಾರಕ್ಕೆ ಸಾಕ್ಷಿಯಾಗಿರುವ ಬೆಂಗಳೂರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸ್ಥಾಪನೆಯಾಗಿ ಬಂದು 18 ವರ್ಷಗಳು ಪೂರೈಸಿದೆ. ಇದರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 'ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು, 'ವಿಶೇಷ ಅಂಚೆ ಲಕೋಟೆ' ಹಾಗೂ 'ಅಂಚೆ ಕಾರ್ಡ್ಗಳನ್ನು' ಬಿಡುಗಡೆಗೊಳಿಸಿದೆ.
ರಾಜ್ಯ ಮತ್ತು ರಾಷ್ಟ್ರದ ಸಾಂಸ್ಕೃತಿಕ, ನಾವೀನ್ಯತೆ ಹಾಗೂ ಆಧುನಿಕ ವಿನ್ಯಾಸದ ಪ್ರತಿಬಿಂಬದ ಸಂಕೇತವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಹೆಗ್ಗುರುತನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಇವುಗಳನ್ನು ಲೋಕಾರ್ಪಣೆ ಮಾಡಲಾಗಿದೆ. 2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಭಾರತದ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿ ಕಾರ್ಯಾರಂಭಗೊಂಡಿತು. ಬೆಂಗಳೂರನ್ನು ಜಗತ್ತಿನೊಂದಿಗೆ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈ ಮೂಲಕ ಗೌರವ ಸಲ್ಲಿಸಲಾಗಿದೆ.

ಅಂಚೆ ಚೀಟಿ ರದ್ದತಿ ಮೊಹರಿನ ವೈಶಿಷ್ಟ್ಯ
ಬೆಂಗಳೂರು ಐತಿಹಾಸಿಕ ಬೇರುಗಳಿಂದ ಬೆಳೆದು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಮೃದ್ಧ ಸಂಸ್ಕೃತಿಯ ಹೆಮ್ಮೆಯ ಕೇಂದ್ರವಾಗಿ ಬೆಳೆದು ನಿಂತಿದೆ. ಅದರ ಅದ್ಭುತ ವಿಕಾಸದ ಪಯಣವನ್ನು ಭಾರತೀಯ ಅಂಚೆಯ ಈ ಉಪಕ್ರಮದ ಮೂಲಕ ಆಕರ್ಷಕವಾಗಿ ಬಿಂಬಿಸುತ್ತವೆ. ವಿಮಾನ ನಿಲ್ದಾಣ ಅಂಚೆ ಕಚೇರಿಯಲ್ಲಿ ಬಳಸಲಾಗುವ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರಿನಲ್ಲಿ ನಾಡಪ್ರಭು ಕೆಂಪೇಗೌಡರ ಚಿತ್ರಣದೊಂದಿಗೆ ನಿಲ್ದಾಣದ ಭವ್ಯತೆ ಕಾಣಿಸುತ್ತದೆ. ಇದು ನಗರದ ಶ್ರೀಮಂತ ಪರಂಪರೆ ಮತ್ತು ಆಧುನಿಕ ಜಾಗತಿಕ ಅಸ್ಮಿತೆಯ ನಡುವಿನ ಅವಿನಾಭಾವ ಸಂಬಂಧ ಸಾರುತ್ತದೆ.
ಬೆಂಗಳೂರು, ಏರ್ಪೋರ್ಟ್ ಬೆಳವಣಿಗೆ ಸ್ಮರಣೆ
ಇನ್ನೂ 'ವಿಶೇಷ ಅಂಚೆ ಲಕೋಟೆ' ಮತ್ತು 'ಅಂಚೆ ಕಾರ್ಡ್'ಗಳಿಂದ ಈ ವೈಶಿಷ್ಟ್ಯಗಳು ಮತ್ತಷ್ಟು ವಿಸ್ತರಿಸಲಿವೆ. ಪ್ರಯಾಣಿಕರು ಹಾಗೂ ಅಂಚೆ ಚೀಟಿ ಸಂಗ್ರಹಕಾರರಿಗೆ ಬೆಂಗಳೂರಿನ ಹೆಮ್ಮೆಯ ಸಂಸ್ಕೃತಿಯನ್ನು ನೆನಪಿಸಲಿದ್ದಾರೆ. ಏರ್ ಪೋರ್ಟ್ನ ಪ್ರಸಿದ್ಧ 'ಫೀಲ್ಸ್ ಲೈಕ್ ಬಿಎಲ್ಆರ್' ಅಭಿಯಾನಕ್ಕೆ ಪೂರಕವಾಗಿ ಈ ಉಪಕ್ರಮಗಳು ಬಿಡುಗಡೆಯಾಗಿವೆ. ವಿಮಾನಯಾನ ಪ್ರಯಾಣಿಕರು ಪ್ರಯಾಣದೊಂದಿಗೆ ಸಾಂಸ್ಕೃತಿಕವಾಗಿಯೂ ಒಂದಷ್ಟು ನೆನಪುಗಳನ್ನು ನೀಡಲಾಗುತ್ತದೆ. ಬೆಂಗಳೂರಿನೊಂದಿಗೆ ಪ್ರಯಾಣಿಕರು ಕೇವಲ ಭೌತಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಆಳವಾದ ಬಾಂಧವ್ಯ ಬೆಳೆಸಿಕೊಳ್ಳುವಂತೆ ಮಾಡುತ್ತದೆ ಎಂದು ಬಿಐಎಎಲ್ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರು ತಿಳಿಸಿದರು.
ವಿಮಾನ ನಿಲ್ದಾಣ ಬೆಂಗಳೂರು 18 ವರ್ಷ ಪೂರೈಸಿದೆ. ನಗರದ ಬೆಳವಣಿಗೆ ಜೊತೆಗೆ ಏರ್ಪೋರ್ಟ್ ಪ್ರಗತಿಯನ್ನು ನೆನಪಿಸಿಕೊಳ್ಳುವ ಮಧುರ ಕ್ಷಣ ಇದಾಗಿದೆ. 2008ರಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಾಗಿ ಆರಂಭವಾಗಿ ಪ್ರಸ್ತುತ ಸಂಸ್ಕೃತಿ, ಸಂಪರ್ಕ ಹಾಗೂ ಭವಿಷ್ಯದ ಮೂಲ ಸೌಕರ್ಯಗಳೊಂದಿಗೆ ಭಾರತದ ಪ್ರಮುಖ ವಿಮಾನಯಾನ ಕೇಂದ್ರವಾಗಿ ರೂಪುಗೊಂಡಿದೆ. ಲಕ್ಷಾಂತರ ಪ್ರಯಾಣಿಕರಿಗೆ ಈ ವಿಮಾನ ನಿಲ್ದಾಣವೇ ಬೆಂಗಳೂರಿನ ಮೊದಲ ಅನುಭವವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಭಾರತೀಯ ಅಂಚೆ ಇಲಾಖೆ ಬಿಡುಗಡೆಯ ಉಪಕ್ರಮವು ಬೆಂಗಳೂರಿನ ಜೊತೆ ಜೊತೆಗೆ ವಿಮಾನ ನಿಲ್ದಾಣದ ಬೆಳವಣಿಗೆ ಅರ್ಥಪೂರ್ಣವಾಗಿ ಸ್ಮರಿಸುತ್ತದೆ. ಮುಂದಿನ ದಿನಗಳಲ್ಲಿಯೂ ಬೆಂಗಳೂರಿನ ಬೆಳೆಯುತ್ತಿರುವ ಆಶಯಗಳಿಗೆ ಬೆಂಬಲ ನೀಡುತ್ತಾ, ಇನ್ನಷ್ಟು ಸಮೃದ್ಧ ಪ್ರಯಾಣಿಕ ಅನುಭವಗಳನ್ನು ನಿರ್ಮಿಸುವತ್ತ ನಾವು ಗಮನ ಹರಿಸುತ್ತೇವೆ ಎಂದು ಹೇಳಿದರು.
ಭಾರತೀಯ ಅಂಚೆ ಇಲಾಖೆಯ ಬೆಂಗಳೂರು ಕೇಂದ್ರ ಕಚೇರಿ ವಲಯದ ಅಂಚೆ ಸೇವೆಗಳ ನಿರ್ದೇಶಕ ವಿ. ತಾರಾ ಅವರು, ಈ ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರಿನ ಬಿಡುಗಡೆಯು, ಬೆಂಗಳೂರಿಗೆ ಹಾಗೂ ಈ ವಿಶಾಲ ಪ್ರದೇಶಕ್ಕೆ ಪ್ರಮುಖ ಪ್ರವೇಶ ದ್ವಾರವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗೆ ಸಲ್ಲಿಸುವ ಗೌರವವಾಗಿದೆ. ನಗರದ ಪರಂಪರೆ ಹಾಗೂ ಸಮಕಾಲೀನ ಜಾಗತಿಕ ಗುರುತನ್ನು ಪ್ರತಿಬಿಂಬಿಸುವ ಸಂಸ್ಥೆಯೊಂದನ್ನು ಈ ಸಹಭಾಗಿತ್ವದ ಮೂಲಕ ಗೌರವಿಸುತ್ತಿರುವುದು ಸಂತಸದ ವಿಷಯ ಎಂದರು.
ಇಂದು ಬಿಡುಗಡೆಗೊಂಡ ಅಂಚೆ ಚೀಟಿ ರದ್ದತಿ ಮೊಹರು, ಲಕೋಟೆ, ಅಂಚೆ ಕಾರ್ಡ್ಗಳು ಏರ್ಪೋರ್ಟ್ ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ಅಂಚೆ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













Click it and Unblock the Notifications