ಬೆಂಗಳೂರು: ತೇಜಸ್ವಿ ಸಾಂಸ್ಕೃತಿಕ ಹಬ್ಬ ಲೋಕಾರ್ಪಣೆ
ಬೆಂಗಳೂರು, ಜುಲೈ, 28: ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕುರಿತ 'ತೇಜಸ್ವಿ ಎಂಬ ವಿಸ್ಮಯ' ಸಾಕ್ಷ್ಯಚಿತ್ರ ಸರಣಿಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಇಂದು (ಜುಲೈ 28) ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತೇಜಸ್ವಿ ಸಾಂಸ್ಕೃತಿಕ ಹಬ್ಬವನ್ನು ಅನಾವರಣಗೊಳಿಸಲಾಯಿತು.
ಸಮಾರಂಭದಲ್ಲಿ ಸಾಕ್ಷ್ಯಚಿತ್ರ ಸರಣಿಯ ಕರ್ಟನ್ ರೈಸರ್ ಬಿಡುಗಡೆಗೊಳಿಸಿ ಮಾತನಾಡಿದ ಡಾ.ಸಿ.ಎನ್.ಅಶ್ವಯತ್ಥ್ ನಾರಾಯಣ, ವಿಶ್ಯುಯಲ್ ಮೀಡಿಯಾ ತುಂಬಾ ಪರಿಣಾಮಕಾರಿ. ಮಾಧ್ಯಮದ ಅನೇಕ ಸಂಸ್ಥೆಯವರು ತೇಜಸ್ವಿ ಅವರ ಕುರಿತು ಸಾಕ್ಷ್ಯಚಿತ್ರ ಸರಣಿ ರೂಪಿಸಿರುವುದು ಶ್ಲಾಘನೀಯ. ಕರ್ಟನ್ ರೈಸರ್ ತುಂಬಾ ಆಕರ್ಷಕವಾಗಿದ್ದು, ಸರಣಿ ವೀಕ್ಷಿಸುವ ಕುತೂಹಲ ಮೂಡಿಸುತ್ತದೆ ಎಂದರು.

ತೇಜಸ್ವಿ ಅವರ ಬದುಕು, ಬರಹ, ಸಂದೇಶಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಸಾಕ್ಷ್ಯಚಿತ್ರ ನೆರವಾಗಲಿದೆ. ಅರ್ಥಪೂರ್ಣ ಸಾಕ್ಷ್ಯಚಿತ್ರ ರೂಪಿಸಿರುವ ಮಾಧ್ಯಮ ಅನೇಕ ಸಂಸ್ಥೆಯ ಮುಖ್ಯಸ್ಥರಾದ ಅರವಿಂದ ಮೋತಿ ಮತ್ತು ಅನು ಮೋತಿ ಅಭಿನಂದನಾರ್ಹರು ಎಂದರು.
ಮಾಧ್ಯಮ ಅನೇಕ ಸಂಸ್ಥೆಯ ಅರವಿಂದ ಮೋತಿ ಅವರು ಸಾಕ್ಷ್ಯಚಿತ್ರ ಸರಣಿ ಕುರಿತು ಮಾತನಾಡಿ, ನಮ್ಮ ಸಂಸ್ಥೆ ನಿರ್ಮಿಸಿರುವ ವಿಶಿಷ್ಟವಾದ ಸಾಕ್ಷ್ಯಚಿತ್ರವಿದು. ಇದು ಆರು ಎಪಿಸೋಡ್‌ಗಳಲಿದ್ದು, ಪ್ರತಿಯೊಂದು ಎಪಿಸೋಡ್‌ನಲ್ಲೂ ತೇಜಸ್ವಿ ಅವರ ವ್ಯಕ್ತಿತ್ವದ ವಿವಿಧ ಮಜಲುಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದೇವೆ. ಈ ಸಾಕ್ಷ್ಯಚಿತ್ರ ನರೇಟಿವ್ ಫಾರ್ಮ್ಯಾಟ್‌ನಲ್ಲಿದೆ. ಗ್ರಾಫಿಕ್ಸ್ - ಅನಿಮೇಷನ್‌ನೊಂದಿಗೆ ಅವರ ಬದುಕಿನ ಮೈಲುಗಲ್ಲುಗಳನ್ನು ರೀಕ್ರಿಯೇಟ್ ಮಾಡಿದ್ದೇವೆ ಎಂದರು.
ತೇಜಸ್ವಿ ಅವರ ಜೊತೆ ಕೆಲಸ ಮಾಡಿದವರು, ಒಡನಾಡಿದವರು, ಕುಟುಂಬದವರು ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ್ದಾರೆ. ಸಾಕ್ಷ್ಯಚಿತ್ರ ಸರಣಿಗೆ ನಟ ವಸಿಷ್ಠ ಸಿಂಹ ಅವರು ಮತ್ತು ಸಾಕ್ಷ್ಯಚಿತ್ರದ ಕರ್ಟನ್ ರೈಸರ್‌ಗೆ ಡಾ ನಮನ ಅವರು ಧ್ವನಿ ನೀಡಿದ್ದಾರೆ. ಸಾಕ್ಷ್ಯಚಿತ್ರ ರೂಪಿಸುತ್ತೇವೆ ಎಂದಾಗ ರಾಜೇಶ್ವರಿ ತೇಜಸ್ವಿ ಅವರು ತುಂಬು ಉತ್ಸಾಹ, ಆಸಕ್ತಿಯಿಂದ ಸಹಕಾರ ನೀಡಿದರು. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ತೇಜಸ್ವಿ ಅವರ ಮಕ್ಕಳು ಹಾಗೂ ಸಾಕ್ಷ್ಯಚಿತ್ರಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾದ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ ಕೆ.ಸಿ.ಶಿವಾರೆಡ್ಡಿ, ತೇಜಸ್ವಿಯವರ ಸಾಹಿತ್ಯ ಆತ್ಮವಿಶ್ವಾಸ ಮೂಡಿಸುವ, ಗಂಭೀರವಾದ ಬದುಕಿಗೆ ಪ್ರೇರಣೆ ನೀಡುವಂತಹ ಸಾಹಿತ್ಯ. ತಮ್ಮ ಕಾಲದ ರಾಜಕೀಯ, ಸಾಮಾಜಿಕ ಸಂದರ್ಭಗಳಿಗೆ ತಮ್ಮ ಬರವಣಿಗೆ ಮೂಲಕ ಸ್ಪಂದಿಸುತ್ತಾ ಬದುಕಿದವರು. ತೇಜಸ್ವಿಯವರ ಹೊಸ ಓದಿಗೆ ಪ್ರೇರಣೆಯಾಗಬೇಕು ಎನ್ನುವುದು ಈ ತೇಜಸ್ವಿ ಹಬ್ಬದ ಆಶಯವಾಗಿದೆ ಎಂದರು.
ತೇಜಸ್ವಿ ಎಂಬ ವಿಸ್ಮಯ ಸಾಕ್ಷ್ಯಚಿತ್ರ ಸರಣಿ ಈ ಹಬ್ಬದ ಅಂದ ಹೆಚ್ಚಿಸಿದೆ ಎಂದರು. ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಪ್ರೊ ಬಿ.ಎನ್.ಶ್ರೀರಾಮ್ ಉದ್ಘಾಟಿಸಿದರು. ಡಾ ಕೆ.ಚಿದಾನಂದ ಗೌಡ, ನಾಡೋಜ ಡಾ ವೂಡೇ ಪಿ ಕೃಷ್ಣ, ಪ್ರೊ ಎಸ್.ಜಿ. ಸಿದ್ದರಾಮಯ್ಯ, ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ವಿ.ಪರಶಿವಮೂರ್ತಿ, ಸರೋಜ ಎಂ ಚಂದ್ರಶೇಖರ್, ಅನು ಮೋತಿ, ತಾರಿಣಿ ಚಿದಾನಂದ, ತೇಜಸ್ವಿ ಅವರ ಪುತ್ರಿಯರಾದ ಸುಶ್ಮಿತಾ ಮತ್ತು ಈಶಾನ್ಯೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications