ಜಯನಗರ ಚುನಾವಣೆ : ಎನ್.ನಾಗರಾಜ್ ಮೇಲೆ ಎಫ್‌ಐಆರ್
ಬೆಂಗಳೂರು, ಮೇ 28 : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಬಿಬಿಎಂಪಿ ಸದಸ್ಯ ಎನ್.ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದೆ.
ಜಯನಗರ 3ನೇ ಬ್ಲಾಕ್‌ನ ಪೈ ವೈಸ್‌ರಾಯ್ ಹೋಟೆಲ್‌ನಲ್ಲಿ ಮೇ 22ರಂದು ಸಾಮೂಹಿಕ ಭೋಜನ ಕೂಟ ಏರ್ಪಡಿಸಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕ್ಷೇತ್ರದ ಚುನಾವಣಾ ಆಯೋಗದ ಸಂಚಾರಿ ದಳದ ಅಧಿಕಾರಿ ಬಿ.ಬಿ.ಬೋರಿ ಅವರು ಜಯನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಎನ್.ನಾಗರಾಜ್ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

ಎನ್.ನಾಗರಾಜ್ ಅವರು ಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದ ನಾಯಕರ ಮೇಲೆ ಒತ್ತಡ ಹೇರಿ ಟಿಕೆಟ್ ಪಡೆಯುವ ಉದ್ದೇಶದಿಂದ ಪಕ್ಷದ ಮುಖಂಡರು, ಬಿಬಿಎಂಪಿ ಸದಸ್ಯರನ್ನು ಆಹ್ವಾನಿಸಿ ಮೇ 22ರಂದು ಸಭೆ, ಭೋಜನ ಕೂಟ ನಡೆಸಿದ್ದರು.
ಈ ಸಭೆ ಮತ್ತು ಭೋಜನ ಕೂಟಕ್ಕೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಸಂಚಾರಿ ದಳದ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ಮಾಡಿದ್ದರು. ಜೂನ್ 11ರಂದು ಜಯನಗರದ ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್ ಅವರ ನಿಧನದಿಂದಾಗಿ ಮೇ 12ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ವಿಜಯ ಕುಮಾರ್ ಸಹೋದರ ಬಿ.ಎನ್.ಪ್ರಹ್ಲಾದ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ನಿಂದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಜೆಡಿಎಸ್‌ನಿಂದ ಕಾಳೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ಚುನಾವಣಾ ಕಣದಲ್ಲಿದ್ದಾರೆ.












Click it and Unblock the Notifications