Get Updates
Get notified of breaking news, exclusive insights, and must-see stories!

ಕನ್ನಡ ನಾಡಲ್ಲಿ ಪರಭಾಷಿಕರ ಮತಕ್ಕಾಗಿ ‘ಬಕೆಟ್’ ರಾಜಕಾರಣ?

ಬೆಂಗಳೂರು: ಶಿವಮೊಗ್ಗದಲ್ಲಿ ರಾಜಕೀಯ ಪಕ್ಷದ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಹಾಕಿ ಅರ್ಧಕ್ಕೆ ನಿಲ್ಲಿಸಿದ್ದರು. ಈ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ವಿಚಾರ ಏನೇ ಇರಲಿ ತಮಿಳು ನಾಡಗೀತೆ ಹಾಕಿ ಅರ್ಧಕ್ಕೆ ನಿಲ್ಲಿಸಿದ್ದು ತಪ್ಪು. ಇದೀಗ ರಾಜ್ಯದಲ್ಲಿ ಗಂಭೀರ ಚರ್ಚೆ ಶುರುವಾಗಿದ್ದು, ರಾಜಕೀಯ ಪಕ್ಷಗಳ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಆ ಬಗ್ಗೆ ವರದಿ ಇಲ್ಲಿದೆ.

ಭಾಷೆಗಳೆಲ್ಲಾ ಪರಸ್ಪರ ಸಂಬಂಧ ಹೊಂದಿವೆ, ಅದರಲ್ಲೂ ಭಾರತೀಯ ಭಾಷೆಗಳ ನಡುವೆ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ತಮಿಳು ಮತ್ತು ಕನ್ನಡ ಎರಡೂ ಸಹೋದರ ಭಾಷೆಗಳು. ಎರಡೂ ಭಾಷೆಗಳಲ್ಲಿ ಅದೆಷ್ಟೋ ಪದ ಇಂದಿಗೂ ಹೊಂದಾಣಿಕೆ ಆಗುತ್ತವೆ. ಕಾವೇರಿ ವಿಚಾರ, ಗಡಿ ವಿಚಾರ ಬಿಟ್ಟರೆ ತಮಿಳು ಭಾಷಿಕರ ಜೊತೆ ಕನ್ನಡಿಗರ ಸಂಬಂಧ ಚೆನ್ನಾಗಿಯೇ ಇದೆ. ಆದರೆ ರಾಜಕೀಯ ಪಕ್ಷಗಳ ಮತಬೇಟೆಗೆ ಭಾಷೆ ಕೂಡ ದಾಳವಾಗಿದೆಯಾ? ಎಂಬ ಡೌಟ್ ಶುರುವಾಗಿದೆ. ಈ ಮೂಲಕ ಭಾಷಾ ಜಗಳಕ್ಕೂ ಈ ಪ್ರಯತ್ನ ನಾಂದಿ ಹಾಡುತ್ತಾ? ಎಂಬ ಆತಂಕ ಭುಗಿಲೆದ್ದಿದೆ.

Political parties multi language strategy to attract other language voters in Karnataka

ಕನ್ನಡ ನಾಡಲ್ಲಿ ಪರಭಾಷಿಕರ ಓಲೈಕೆ!

ಹೌದು, ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅಲ್ಲಿನ ಸ್ಥಳೀಯ ಭಾಷೆಗಳಲ್ಲೇ ಮತ ಕೇಳುತ್ತಾರೆ. ಅಲ್ಲಿ ರಾಜಕಾರಣಿಗಳು ಸ್ಥಳೀಯ ಭಾಷೆ ಬಳಸುತ್ತಾರೆ. ಆದರೆ ಕರ್ನಾಟಕದ ವಿಚಾರಕ್ಕೆ ಬಂದರೆ ಯಾಕಿಂಗೆ? ರಾಜ್ಯದ ಹೃದಯ ಬೆಂಗಳೂರಿಗೆ ಬಂದರೆ ತಮಿಳು, ತೆಲುಗು, ಹಿಂದಿ ಭಾಷಿಕರ ಓಲೈಕೆಗೋಸ್ಕರ ರಾಜಕೀಯ ಪಕ್ಷಗಳು ನಾ ಮುಂದು, ತಾ ಮುಂದು ಅಂತಾ ಮುಗಿಬೀಳುತ್ತವೆ. ಮತದಾರರನ್ನ ಸೆಳೆಯಲು ಅವರದ್ಧೇ ಭಾಷೆ ಬಳಸಿ ಓಲೈಕೆಗೆ ಮುಂದಾಗುತ್ತಾರೆ. ಹಾಗಾದರೆ ರಾಜಕೀಯ ಪಕ್ಷಗಳ ಈ ಕ್ರಮ ಒಪ್ಪಬಹುದಾ? ಮುಂದೆ ಓದಿ.

ಬೆಳಗಾವಿಯಲ್ಲಿ ಮರಾಠಿ ಭಾಷೆ ಸದ್ದು

ಪರಭಾಷಿಕರನ್ನು ಓಲೈಸುವ ಕೆಲಸ ಕೇವಲ ಒಂದು ಪಕ್ಷದಿಂದ ಆಗುತ್ತಿಲ್ಲ. ಬಹುತೇಕ ರಾಜಕೀಯ ಪಕ್ಷಗಳು ಪರಭಾಷೆ ಮತಗಳನ್ನು ಸೆಳೆಯಲು ಇಂತಹ ಓಲೈಕೆ ರಾಜಕಾರಣಕ್ಕೆ ಮುಂದಾಗುತ್ತವೆ. ಶಿವಮೊಗ್ಗದ ಘಟನೆ ಕೇವಲ ಉದಾಹರಣೆ. ಶಿವಮೊಗ್ಗದ ರೀತಿಯಲ್ಲೇ ಬೆಳಗಾವಿ ಜಿಲ್ಲೆಯನ್ನ ಉದಾಹರಣೆಯಾಗಿ ತೆಗೆದುಕೊಂಡರೆ, ಅಲ್ಲಿನ ಮರಾಠಿ ಸಮುದಾಯದ ಮತ ಗಳಿಸಲು ನಮ್ಮ ನೆಲದ ರಾಜಕಾರಣಿಗಳು ಮರಾಠಿ ಭಾಷೆಯನ್ನೇ ಬಳಸುತ್ತಾರೆ. ಹಾಗಾದರೆ ಎಲ್ಲಿ ಹೋಯಿತು ಕನ್ನಡ? ಎಲ್ಲಿಗೆ ಹೋಯಿತು ಕನ್ನಡ ತನ? ಎಂಬ ಪ್ರಶ್ನೆ ಉದ್ಭವಿಸದೇ ಇರಲ್ಲ.

ಬಳ್ಳಾರಿ ಭಾಗದ ಪರಿಸ್ಥಿತಿಯೂ ಹೀಗೆ

ರಾಜ್ಯದ ಮತ್ತೊಂದು ಗಡಿಯಲ್ಲಿ ಬರುವ ಬಳ್ಳಾರಿ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಏಕೆಂದರೆ ಆಂಧ್ರ ಪ್ರದೇಶದ ಪಕ್ಕ ಇರುವ ಬಳ್ಳಾರಿ ಜಿಲ್ಲೆಯಲ್ಲೂ ರಾಜಕೀಯ ಪಕ್ಷಗಳ ಕಥೆ ಇದೇ ರೀತಿ ಇದೆ. ಪರಭಾಷಿಕರ ಮತಗಳ ಓಲೈಕೆಗೆ ಅಲ್ಲೂ ಇದೇ ರೀತಿ ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಗಳನ್ನೇ ಹೆಚ್ಚಾಗಿ ಬಳಸುತ್ತಿರುವ ಆರೋಪ ಕೇಳಿಬರುತ್ತೆ. ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಕಥೆಯೂ ಇದೇ ಆಗಿದೆ ಅನ್ನಬಹುದು. ಆದರೆ ಇದೆಲ್ಲಾ ಬದಲಾಗೋದು ಯಾವಾಗ ಎಂಬ ಪ್ರಶ್ನೆಗೆ ರಾಜಕೀಯ ಪಕ್ಷಗಳೇ ಉತ್ತರ ನೀಡಬೇಕಿದೆ. ಇದರ ನಡುವೆ ಮತ್ತೊಂದು ಚರ್ಚೆ ಶುರುವಾಗಿದೆ.

ಮತಕ್ಕಾಗಿ ಏನು ಬೇಕಾದ್ರೂ ಮಾಡ್ತಾರಾ?

ಶಿವಮೊಗ್ಗದ ಘಟನೆ ಕುರಿತು ಭಾರಿ ಚರ್ಚೆ ಶುರುವಾಗಿದೆ. ತಮಿಳು ಭಾಷಿಕ ಸಹೋದರರ ಮತ್ತು ಕನ್ನಡಿಗರ ನಡುವೆ ಇಂತಹ ಘಟನೆಗಳು ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನೆರೆ ರಾಜ್ಯದ ನಾಡಗೀತೆ ಅರ್ಧಕ್ಕೆ ನಿಲ್ಲಿಸಿದರೆ ಪರಿಣಾಮ ಮುಂದೆ ಭೀಕರವಾಗಿರುತ್ತದೆ ಎಂಬ ಮಾತು ಕೇಳಿಬರುತ್ತಿವೆ. ಕನ್ನಡಿಗರು, ತಮಿಳು ಭಾಷಿಕರ ಮಧ್ಯೆ ಇಂತಹ ಅನಾವಶ್ಯಕ ಘಟನೆಗಳು ಕಿಚ್ಚು ಹಚ್ಚಿದರೆ ಅದಕ್ಕಿಂತ ದುರಂತ ಬೇರೆ ಇಲ್ಲ. ಇಷ್ಟೆಲ್ಲದರ ಮಧ್ಯೆ ಮತಕ್ಕಾಗಿ ಏನು ಬೇಕಾದ್ರೂ ಮಾಡ್ತಾರಾ? ಎಂಬ ಪ್ರಶ್ನೆ ಕೂಡ ಈಗ ಉದ್ಭವಿಸಿದೆ.

ಭವಿಷ್ಯದಲ್ಲಿ ಇನ್ನೂ ಭೀಕರ ಸ್ಥಿತಿ?

ಹೌದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಪರಭಾಷಿಕರನ್ನು ಓಲೈಕೆ ಮಾಡಲು ನಡೆಸುತ್ತಿರುವ ನಾಟಕ ನೋಡಿ ಉದ್ಭವಿಸುವ ಪ್ರಶ್ನೆ 'ಮುಂದೆ ಹೇಗೆ?' ಅನ್ನೋದು. ಯಾಕಂದ್ರೆ ಈಗಾಗಲೇ ಕರ್ನಾಟಕದಲ್ಲಿ ಪರಭಾಷಿಕರ ಸಂಖ್ಯೆಯೇ ತೀವ್ರವಾಗಿ ಏರುತ್ತಿದೆ. ಅದರಲ್ಲೂ ಬೆಂಗಳೂರಿನ ಕಥೆ ಎಲ್ಲರಿಗೂ ಗೊತ್ತು. ದೇಶದ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಲಕ್ಷಾಂತರ ಜನ ಸೆಟಲ್ ಆಗಿದ್ದಾರೆ. ಮುಂದಿನ 10ರಿಂದ 20 ವರ್ಷದಲ್ಲಿ ಈ ಸಂಖ್ಯೆ ಕೋಟಿಯ ಲೆಕ್ಕ ದಾಟಿ ಹೋಗುತ್ತದೆ. ಆಗ ರಾಜಕೀಯ ಪಕ್ಷಗಳು ಕನ್ನಡಿಗರನ್ನ ಸಂಪೂರ್ಣ ಮರೆತು ಹೋಗುತ್ತವಾ? ಗೊತ್ತಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಮಹಾಯುದ್ಧ!

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಈ ರೀತಿ ಪರಭಾಷಿಕರನ್ನು ಓಲೈಸುತ್ತಿರುವ ಸಂಸ್ಕೃತಿ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಮಹಾಯುದ್ಧ ಶುರುವಾಗಿದೆ. ಇನ್ನಾದರೂ ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳುತ್ತವಾ? ಅಥವಾ ಇಂತಹದ್ಧೇ ಕೆಲಸ ಮಾಡಿ ಕಾಂಟ್ರವರ್ಸಿ ಸೃಷ್ಟಿ ಮಾಡಲಿವೆಯಾ? ಎಂದು ಪ್ರಶ್ನೆ ಕೇಳುತ್ತಿದ್ದಾರೆ ನೆಟ್ಟಿಗರು. ಅದಕ್ಕೆಲ್ಲಾ ಕಾಲವೇ ಉತ್ತರ ನೀಡಬೇಕಿದೆ.

ಗಡಿ ಭಾಗದಲ್ಲಿ ಭಾಷಾ ಸಮಸ್ಯೆ

ರಾಜ್ಯದ ಗಡಿ ಭಾಗದಲ್ಲಿ ಆಗಾಗ ಉದ್ಭವಿಸುವ ಭಾಷಾ ಸಮಸ್ಯೆ ಇತ್ಯರ್ಥ ಮಾಡಲು ಈವರೆಗೂ ಯಾವುದೇ ರಾಜಕೀಯ ಪಕ್ಷಕ್ಕೂ ಸಾಧ್ಯವಾಗಿಲ್ಲ. ಆದರೆ ಗಡಿ ಭಾಗದಲ್ಲಿ ಅವರದ್ಧೇ ಭಾಷೆಯಲ್ಲಿ ವ್ಯವಹರಿಸಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿವೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು. ಚುನಾವಣೆ ಬಂದ ತಕ್ಷಣ ಭಾಷ ಅಸ್ತ್ರ ಪ್ರಯೋಗ ಕೂಡ ರಾಜಕೀಯ ಪಕ್ಷಗಳ ಪ್ರಚಾರ ತಂತ್ರಗಳಲ್ಲಿ ಒಂದು ಎನ್ನಬಹುದು. ಅದರಲ್ಲೂ ಗಡಿ ಭಾಗದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವೂ ಪ್ರೀ ಪ್ಲ್ಯಾನ್ ಮಾಡಿ ಪರಭಾಷಿಕರ ಓಲೈಕೆಗೆ ಮುಂದಾಗುತ್ತಿವೆ ಆರೋಪ ಆಗಾಗ ಕೇಳಿಬರುತ್ತಿದೆ.

ಒಟ್ನಲ್ಲಿ ಮತಗಳ ಓಲೈಕೆಗಾಗಿ ರಾಜಕೀಯ ಪಕ್ಷಗಳು ಭಾಷಾ ಅಸ್ತ್ರ ಪ್ರಯೋಗಿಸುತ್ತಿವೆ. ಆದರೆ ರಾಜಕೀಯ ಪಕ್ಷಗಳ ಮತ ಓಲೈಕೆ ತಂತ್ರ ಅದೆಷ್ಟರಮಟ್ಟಿಗೆ ವರ್ಕೌಟ್ ಆಗತ್ತೆ ಅನ್ನೋದನ್ನ ತಿಳಿಯಲು ಇನ್ನು ಕೆಲವೇ ದಿನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕರ್ನಾಟಕದಲ್ಲಿ ಯಾವ ಅಸ್ತ್ರ ವರ್ಕೌಟ್ ಆಗಿದೆ ಅನ್ನೋದು ಕೂಡ ಕನ್ಫರ್ಮ್ ಆಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+