ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಆ ದಿನ ದರ್ಶನ್ ಧರಿಸಿದ್ದ ಬಟ್ಟೆ ವಿಜಯಲಕ್ಷ್ಮಿ ಫ್ಲಾಟ್‌ನಲ್ಲಿ ಪತ್ತೆ
ಬೆಂಗಳೂರು, ಜೂನ್ 18: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 19 ಮಂದಿಯನ್ನು ಈವರೆಗೆ ಬಂಧಿಸಲಾಗಿದ್ದು ತನಿಖೆ ತೀವ್ರಗೊಂಡಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಚಿತ್ರದುರ್ಗದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಇಂದು ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.
ಬೆಂಗಳೂರು ಸ್ಥಳ ಮಹಜರು ವೇಳೆ ಕೆಲ ಮಹತ್ವದ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದು, ರೇಣುಕಾಸ್ವಾಮಿ ಭೇಟಿ ವೇಳೆ ದರ್ಶನ್ ಧರಿಸಿದಂತಹ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಶ್ಚರ್ಯವೆಂದರೆ ದರ್ಶನ್ ಧರಿಸಿದಂತಹ ಬಟ್ಟೆಗಳು ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ನಲ್ಲಿ ಸಿಕ್ಕಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆಯ ದಿನ ದರ್ಶನ್ ಧರಿಸಿದಂತಹ ಬಟ್ಟೆಗಳು ಪತ್ನಿ ವಿಜಯಲಕ್ಷ್ಮಿ ಫ್ಲಾಟ್‌ನಲ್ಲಿ ಸ್ಥಳ ಮಹಜರು ವೇಳೆ ಸಿಕ್ಕಿದೆ. ಇದನ್ನು ನೋಡಿ ಸ್ವತಃ ವಿಜಯಲಕ್ಷ್ಮಿ ಅವರಿಗೂ ಶಾಕ್ ಆಗಿದೆ. ಯಾಕೆಂದರೆ ಕೃತ್ಯ ನಡೆದ ದಿನ ದರ್ಶನ್ ತನ್ನ ಬಟ್ಟೆಗಳನ್ನು ಬದಲಿಸಿ ಕಾಸ್ಟ್ಯೂಮ್ ಡಿಸೈನರ್ ಕೈಗೆ ಕೊಟ್ಟಿದ್ದನು. ಬಳಿಕ ಕಾಸ್ಟ್ಯೂಮ್ ಡಿಸೈನರ್ ಅವುಗಳನ್ನು ವಿಜಯಲಕ್ಷ್ಮಿ ಮನೆಯಲ್ಲಿ ಇಟ್ಟಿದ್ದಾನೆ. ಈ ವಿಚಾರ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿಗೆ ಗೊತ್ತಿರಲಿಲ್ಲ.
ಪೊಲೀಸರ ವಿಚಾರಣೆ ವೇಳೆ ದರ್ಶನ್ ಆ ದಿನ ಧರಿಸಿದ್ದ ಬಟ್ಟೆಗಳು ಮನೆಯಲ್ಲಿ ಇದೆ ಎಂದಿದ್ದ. ಆದರೆ ಸ್ಥಳ ಮಹಜರು ವೇಳೆ ಮನೆಗೆ ಹೋಗಿ ಬಟ್ಟೆ ಹುಡುಕಿದಾಗ ಸಿಕ್ಕಿರಲಿಲ್ಲ. ಬಳಿಕ ಕಾಸ್ಟ್ಯೂಮ್ ಡಿಸೈನರ್ ಕೈಗೆ ಕೊಟ್ಟಿರುವುದನ್ನು ದರ್ಶನ್ ಬಾಯ್ಬಿಟ್ಟಿದ್ದಾನೆ. ಕಾಸ್ಟ್ಯೂಮರ್ ಡಿಸೈನರ್‌ಗೆ ಕೇಳಿದಾಗ ತಾನೇ ವಿಜಯಲಕ್ಷ್ಮಿ ಮನೆಗೆ ತೆಗೆದುಕೊಂಡು ಹೋಗಿ ಇಟ್ಟಿದ್ದೇನೆ ಎಂದಿದ್ದಾನೆ. ಈ ವಿಚಾರ ದರ್ಶನ್‌ಗೆ ಸಹ ಗೊತ್ತಿರಲಿಲ್ಲ. ಕೊನೆಗೆ ವಿಜಯಲಕ್ಷ್ಮಿ ಅವರ ಮನೆಯಲ್ಲಿ ದರ್ಶನ್ ಬಟ್ಟೆಗಳು ಪತ್ತೆಯಾಗಿದ್ದು, ಸದ್ಯ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಮೈಸೂರಿನಲ್ಲಿ ಸ್ಥಳ ಮಹಜರು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಹಾಗೂ ಉಳಿದ ಆರೋಪಿಗಳನ್ನು ಪೊಲೀಸರು ಮೈಸೂರಿಗೆ ಕರೆದೊಯ್ಯಲಿದ್ದು, ಮೈಸೂರಿನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಮೈಸೂರಿಗೆ ತೆರಳಿದ್ದ ದರ್ಶನ್ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ದರ್ಶನ್ ವಾಸ್ತವ್ಯ ಹೂಡಿದ್ದರು. ಜೊತೆಗೆ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು. ಹೀಗಾಗಿ ಗೋಲ್ಡ್ ಜಿಮ್, ಚಿತ್ರೀಕರಣ ನಡೆಯುತ್ತಿದ್ದ ಲಲಿತ ಮಹಲ್ ಪ್ಯಾಲೇಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ಇಂದು ಸ್ಥಳ ಮಹಜರು ನಡೆಯಲಿದೆ.












Click it and Unblock the Notifications