ಬೆಂಗಳೂರಲ್ಲಿ ಸೆರೆಸಿಕ್ಕ ಅಸ್ಸಾಂ ಬೋಡೋ ಉಗ್ರರು
ಬೆಂಗಳೂರು, ಜೂ. 13: ಬೆಂಗಳೂರು ಆಂತರಿಕ ಭದ್ರತಾ ದಳದ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದು ಉದ್ಯಾನಗರಿಯಲ್ಲಿ ಅಡಗಿ ಕುಳಿತಿದ್ದ ನಾಲ್ವರು ಬೋಡೋ ಉಗ್ರರನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ರಾಜಗೋಪಾಲನಗರದ ಪ್ಲಾಸ್ಟಿಕ್ ಕಾರ್ಖಾನೆಯೊಂದರಲ್ಲಿ ಉಗ್ರರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತೋನಾರ ಬಸುಮತ್ರಿ, ಸಂಧನ್ ಬಸುಮತ್ರಿ, ನಸೀನ್ ಬಸುಮತ್ರಿ, ಜಿಬಾಲ್ ನಸ್ರರಿ ಬಂಧಿತ ಶಂಕಿತ ಉಗ್ರರು. ಖಚಿತ ಮಾಹಿತಿ ಮೇರೆಗೆ ರಾಜಗೋಪಾಲನಗರ ಮನೆಯ ಮೇಲೆ ಆಂತರಿಕ ಭದ್ರತಾ ದಳ, ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರು ಸೆರೆಸಿಕ್ಕಿದ್ದಾರೆ. ರಾಜ್ಯದ ಹಲವೆಡೆ ಇನ್ನಷ್ಟು ಉಗ್ರರು ಅಡಗಿರುವ ಶಂಕೆಯಿದೆ ಎಂದು ಹೇಳಲಾಗಿದೆ. ಬಂಧಿತರು ಅಸ್ಸಾಂನಲ್ಲಿ ಹಿಂಸಾಚಾರ ನಡೆಸಿ ತಲೆಮರೆಸಿಕೊಂಡು ರಾಜ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ.[ಬೆಂಗ್ಳೂರಲ್ಲಿ ಸಿಕ್ತು ಮಣಿಪುರ ಉಗ್ರನ 1 ಕೋಟಿ ಹಣ]

ಐಎಸ್ ಡಿ ಡಿವೈಎಸ್ ಪಿ ಸುಬ್ರಹ್ಮಣ್ಯಸ್ವಾಮಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬಂಧಿತ ಬೋಡೊ ಉಗ್ರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಅಡಗಿರುವ ಇನ್ನಷ್ಟು ಉಗ್ರರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಬೆಂಗಳೂರು ಉಗ್ರರ ಅಡಗುತಾಣವಾಗುತ್ತಿದೆಯೇ?]
ರಾಜ್ಯದಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಮೊದಲಿನಿಂದಲೂ ಆತಂಕ ಇತ್ತು. ಅಲ್ಲದೇ ಕೇಂದ್ರ ಸರ್ಕಾರ ಉಗ್ರರ ಧಮನಕ್ಕೆ ಕೆಲ ಕ್ರಮಗಳನ್ನು ಕೈ ಗೊಳ್ಳುವಂತೆ ನಿರ್ದೇಶನ ನೀಡಿತ್ತು. ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟದ ನಂತರ ಭದ್ರತೆ ಹೆಚ್ಚು ಮಾಡಿದ್ದರೂ ಉಗ್ರರ ನುಸುಳುವಿಕೆ ಮತ್ತು ಚಟುವಟಿಕೆ ಇನ್ನು ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.












Click it and Unblock the Notifications