ರಾಜ್ಯಕ್ಕೆ ಮತ್ತೆ ಮೋದಿ: ಅಪೂರ್ಣ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ಎಂದು ಕಾಂಗ್ರೆಸ್ ವ್ಯಂಗ್ಯ
ಪ್ರಧಾನಿ ಮೋದಿ ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ 13 ಕಿಲೋಮೀಟರ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು, ಮಾರ್ಚ್. 22: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು 'ಅರ್ಧ ಬೆಂದ' ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ. ಇಂತಹ ಕೆಲಸ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು, ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗವು ಇನ್ನು ಪೂರ್ಣಗೊಂಡಿಲ್ಲ. ಮೆಟ್ರೋ ಮಾರ್ಗ ಉದ್ಘಾಟನೆಗೆ ಪ್ರಧಾನಿ ಮೋದಿಯವರು ಬರ್ತಿದ್ದಾರೆ. ಅರ್ಧಬೆಂದ ಯೋಜನೆಗಳನ್ನ ಉದ್ಘಾಟನೆ ಮಾಡಲು ಬರ್ತಿದ್ದಾರೆ. ಇದು ಬೆಂಗಳೂರಿಗರಿಗೆ ಪರಿಹರಿಸುವುದಕ್ಕಿಂತ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದಿದ್ದಾರೆ.

ಕೆಆರ್ ಪುರಂ-ವೈಟ್‌ಫೀಲ್ಡ್ ಮಾರ್ಗವು ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗುವ ನೇರಳೆ ಮಾರ್ಗದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. ''ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಆರ್ ಪುರಂ ಮೆಟ್ರೋ ನಿಲ್ದಾಣದವರೆಗಿನ ಮೆಟ್ರೋ ಮಾರ್ಗದ ಕಾಮಗಾರಿ ಪೂರ್ಣಗೊಂಡಿಲ್ಲ" ಎಂದು ತಿಳಿಸಿದ್ದಾರೆ.
ಮೆಟ್ರೋ ಮಾರ್ಗದ ಈ ಭಾಗವು ವಿದ್ಯುದ್ದೀಕೃತ ರೈಲು ಮಾರ್ಗದ ಮೇಲೆ ಹೋಗಬೇಕಾಗಿದ್ದು, ಮುಂದಿನ 6 ತಿಂಗಳವರೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿಲ್ಲ. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮೆಟ್ರೋ ಮಾರ್ಗದ ಸಂಪರ್ಕವಿಲ್ಲ ಎಂಬುದು ಸ್ಪಷ್ಟವಾಗಿದೆ. ಮಾರ್ಚ್ 25 ರಂದು ವೈಟ್‌ಫೀಲ್ಡ್ ಮೆಟ್ರೋ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಉದ್ಘಾಟಿಸುತ್ತಿದ್ದಾರೆ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಇತ್ತ, ಮಾರ್ಚ್ 25 ರಂದು ರಾಜಧಾನಿಗೆ ಪ್ರಧಾನಿ ಬರುವುದು ಖಚಿತವಾಗಿದೆ. ಅಂದು ಅವರು ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ 13 ಕಿಲೋಮೀಟರ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಕೆಆರ್ ಪುರಂ - ವೈಟ್‌ಫೀಲ್ಡ್ ಮಾರ್ಗವು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ಸೇರಿದಂತೆ 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.
ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೊಸ ಮಾರ್ಗದಲ್ಲಿ ಪ್ರಯಾಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಉದ್ಘಾಟಿಸಲಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಹಂತ I ಅಡಿಯಲ್ಲಿ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿಯವರೆಗೆ ನಮ್ಮ ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದರು.

ಮಾರ್ಚ್ 25 ರಂದು (ಶನಿವಾರ) ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ವೈಟ್‌ಫೀಲ್ಡ್ ಮಾರ್ಗವನ್ನು ಉದ್ಘಾಟಿಸಲಿರುವ ಪ್ರಧಾನಿ ಬಳಿಕ ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ, ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ತೆರಳಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ನಂತರ ದಾವಣಗೆರೆಗೆ ತೆರಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆಯಲ್ಲಿ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಭಾಷಣ ಮಾಡುವ ರ್ಯಾಲಿಗೆ ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಶಿವಮೊಗ್ಗಕ್ಕೆ ತೆರಳಿ ಹೊಸ ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.











Click it and Unblock the Notifications