ಬೆಳಗಾವಿ ಬೈಕ್ ಕಳ್ಳರು ಬೆಂಗಳೂರಲ್ಲಿ ಮಾಡಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 10: ಇಬ್ಬರು ಬೈಕ್ ಕಳ್ಳರು ಪೊಲೀಸರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಳಗಿನ ಜಾವ ಸುಮಾರು 3.30ರ ವೇಳೆ ಬೆಳ್ಳಂದೂರು ಪೊಲೀಸರು ಗಸ್ತು ತಿರುಗುತ್ತಿದ್ದಾಗ ಇಬ್ಬರು ಆರೋಪಿಗಳು ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದರು. ಪೊಲೀಸರಿಗೆ ಅನುಮಾನ ಬಂದು ಅವರನ್ನು ತಡೆದು ಪ್ರಶ್ನಿಸಿದಾಗ ಗಾಬರಿಗೊಂಡ ಕಳ್ಳರು ಪೊಲೀಸರ ಕಣ್ಣಿಗೆ ಕಾರದಪುಡಿ ಎರಚಿ ತಪ್ಪಿಸಿಕೊಳ್ಳಲು ಯತ್ನಿಸಿದರು ಆದರೆ ಪೊಲೀಸರು ಅವರನ್ನು ಹಿಡಿದು ಬಂಧಿಸಿದ್ದಾರೆ.
ಬೆಳಗಾವಿಯ ಮಂಜುನಾಥ್ ಪಾಟೀಲ್ ಹಾಗೂ ರಾಘವೇಂದ್ರ ಪಾಟೀಲ್ ಬಂಧಿತರು, ಪೊಲೀಸರು ಅವರನ್ನು ಹಿಡಿದ ಸಂದರ್ಭದಲ್ಲಿ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ, ಕೂಡಲೇ ಪೊಲೀಸ್ ತಮ್ಮ ಬಳಿ ಇದ್ದ ರೈಫಲ್ ಹಿಡಿದು ಬೆದರಿಸಿದಾಗ ಇಬ್ಬರೂ ಶರಣಾಗಿದ್ದಾರೆ.

ಈ ಇಬ್ಬರು ಆರೋಪಿಗಳು ಕೆಲ ತಿಂಗಳ ಹಿಂದಷ್ಟೇ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು, ಹಣ ಗಳಿಸುವ ಉದ್ದೇಶದಿಂದ ಅಲ್ಲಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಗಳ ಬಳಿ ಇದ್ದ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications