ಬೆಂಗಳೂರು-ತುಮಕೂರು ರಸ್ತೆಯ ವಾಹನ ಸವಾರರ ಗಮನಕ್ಕೆ
ಬೆಂಗಳೂರು, ನವೆಂಬರ್ 10; ಬೆಂಗಳೂರು ನಗರವನ್ನು ಹಲವು ಜಿಲ್ಲೆಗಳು ಮತ್ತು ಹೊರ ರಾಜ್ಯದೊಂದಿಗೆ ಬೆಸೆಯುವ ಪ್ರಮುಖ ರಸ್ತೆ ಬೆಂಗಳೂರು-ತುಮಕೂರು ರಸ್ತೆ. ಈ ರಸ್ತೆಯಲ್ಲಿ ಪೀಣ್ಯದಲ್ಲಿರುವ 4.5 ಕಿ. ಮೀ. ಉದ್ದದ ಫ್ಲೈ ಓವರ್ ವಾಹನ ಸವಾರರಿಗೆ ಸಂಕಷ್ಟ ತಂದಿದೆ. ಫ್ಲೈ ಓವರ ದುರಸ್ತಿ ಕಾಮಗಾರಿ ಗಡುವು ಮೀರುತ್ತಿದೆ.
ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬರುವ ಫ್ಲೈ ಓವರ್‌ನ ಕೇಬಲ್ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾಹಿತಿ ಪ್ರಕಾರ 2024ರ ಏಪ್ರಿಲ್ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಫ್ಲೈ ಓವರ್ ಮೇಲೆ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

2007ರಲ್ಲಿ ಕಾಮಗಾರಿ ಆರಂಭಿಸಿ 2010ರಲ್ಲಿ ಸುಮಾರು 775.70 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಯಿತು. ಆದರೆ ಫ್ಲೈ ಓವರ್ ಕೇಬಲ್‌ಗಳ ಕಾರಣದಿಂದ 2021ರಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಬಳಿಕ 2022ರ ಫೆಬ್ರವರಿಯಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಗಡುವು ಮೀರುತ್ತಿರುವ ಕಾಮಗಾರಿ; ಮೊದಲು ಫ್ಲೈ ಓವರ್‌ನಲ್ಲಿ 8ನೇ ಮೈಲಿ ಜಂಕ್ಷನ್ ಸಮೀಪದ 102 ಮತ್ತು 103ನೇ ಪಿಲ್ಲರ್ ನಡುವಿನ 5 ಕೇಬಲ್ ಬಾಗಿದ್ದರಿಂದ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಬಳಿಕ ಐಐಎಸ್‌ಸಿಯ ತಜ್ಞರು ಪರಿಶೀಲನೆ ನಡೆಸಿ ಭಾರೀ ವಾಹನಗಳ ಸಂಚಾರ ನಡೆಸಿದರೆ ಅಪಾಯ ಎಂದು ಹೇಳಿದ್ದರು.
ಎನ್‌ಹೆಚ್‌ಎಐ 2023ರ ಜನವರಿಯಲ್ಲಿ ಫ್ಲೈ ಓವರ್‌ನ ಎಲ್ಲಾ 1243 ಕೇಬಲ್ ಬದಲಾವಣೆ ಮಾಡಲು ತೀರ್ಮಾನಿಸಿತು. ಇದಕ್ಕಾಗಿ ಟೆಂಡರ್ ಕರೆಯಿತು. ಆದರೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಕಾರಣ ಕಾಮಗಾರಿಯೂ ವಿಳಂಬವಾಯಿತು. ನಿಗದಿತ ಗಡುವಿನಲ್ಲಿ ಕೇಬಲ್ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.
38.5 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ 2024ರ ಏಪ್ರಿಲ್ ವೇಳೆಗೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಫ್ಲೈ ಓವರ್ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಪರಿಶೀಲನೆಯನ್ನು ನಡೆಸಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.
2022ರಲ್ಲಿ ಫ್ಲೈ ಓವರ್ ಮೇಲೆ ಭಾರೀ ಮತ್ತು ಲಘೂ ವಾಹನಗಳ ಪರೀಕ್ಷೆಗಳನ್ನು ನಡೆಸಿ ವರದಿ ತಯಾರು ಮಾಡಲಾಗಿತ್ತು. ಬಳಿಕ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು. ಭಾರೀ ವಾಹನಗಳು ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ಸಾಗುತ್ತವೆ. ಇದರಿಂದಾಗಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬರುವ ಈ ರಸ್ತೆ ರಾಜ್ಯದ ಸುಮಾರು 20 ಜಿಲ್ಲೆಗಳ ಸಂಪರ್ಕಕ್ಕೆ ಪ್ರಮುಖ ಹೆದ್ದಾರಿ. ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಗುವ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ. ಆದ್ದರಿಂದ ಲಾರಿ, ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರ ಹೆಚ್ಚಿದೆ. ಫ್ಲೈ ಓವರ್ ಮೇಲೆ ಸಾಗಲು ಅವಕಾಶವಿಲ್ಲದ ಕಾರಣ ಬಸ್, ದೊಡ್ಡ ದೊಡ್ಡ ಲಾರಿಗಳು ಕೆಳಗಿನ ರಸ್ತೆ ಮೂಲಕ ಸಾಗಬೇಕು.
ಪೀಣ್ಯ ಫ್ಲೈ ಓವರ್ ವಿಚಾರ ವಿಧಾನಸಭೆಯಲ್ಲಿಯೂ ಚರ್ಚೆಯಾಗಿತ್ತು. ಆಗ ಮುಖ್ಯಮಂತ್ರಿಗಳೇ ಫ್ಲೈ ಓವರ್ ಸ್ಥಿತಿ ಕುರಿತು ಸದನಕ್ಕೆ ಉತ್ತರ ನೀಡಿದ್ದರು. ಅಸಮರ್ಪಕ ನಿರ್ವಹಣೆ ಸೇರಿದಂತೆ ವಿವಿಧ ಕಾರಣದಿಂದಾಗಿ ಉದ್ಘಾಟನೆಗೊಂಡ 12 ವರ್ಷಕ್ಕೆ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪೀಣ್ಯ ಸಂಚಾರಿ ಠಾಣೆ ವಿಭಾಗದ ಪೊಲೀಸರು ಫ್ಲೈ ಓವರ್ ಮೇಲೆ ಭಾರೀ ವಾಹನಗಳು ಸಂಚಾರ ನಡೆಸದಂತೆ, ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಹೆಚ್ಚಿನ ಜನರು ಬೆಂಗಳೂರು ನಗರದಿಂದ ಹೊರ ಹೋಗುವುದರಿಂದ ಸಹಜವಾಗಿ ಸಂಚಾರ ದಟ್ಟಣೆ ಉಂಟಾಗುತ್ತದೆ.












Click it and Unblock the Notifications