ತುಮಕೂರು ಮೆಟ್ರೋ ವಿಸ್ತರಣೆ ಯೋಜನೆ ದುಬಾರಿ: ನಮೋ ಭಾರತ್ ಸಾರಿಗೆ ಬೆಸ್ಟ್
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗವು ಮಾದಾವರದಿಂದ ತುಮಕೂರುವರೆಗಿನ ವಿಸ್ತರಣೆಗೆ ಸರ್ಕಾರ ಒಪ್ಪಿದೆ. ಇತ್ತೀಚೆಗೆ ಅಂತಿಮಗೊಂಡ ಯೋಜನೆ ಡಿಪಿಆರ್ ನಿರ್ಧಾರವನ್ನು ಬಿಜೆಪಿ ಸಂಸದ ಪಿಸಿ ಮೋಹನ್ ಅವರು ಟೀಕಿಸಿದ್ದಾರೆ. ಅದರೊಂದಿಗೆ ನಮೋ ಭಾರತ್ ರೈಲುಗಳ ಸಂಚಾರವನ್ನು ಪ್ರಸ್ತಾಪಿಸಿದ್ದಾರೆ. ಇದು ವೇಗದ ಹಾಗೂ ಕಡಿಮೆ ಸಮಯದಲ್ಲಿ ನಿರ್ಮಿಸಬಹುದಾದ, ಸ್ಥಳೀಯರಿಗೆ ಉತ್ತಮವಾದ ಸಾರಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತುಮಕೂರುವರೆಗೆ ಬೆಂಗಳೂರು ಮೆಟ್ರೋ ವಿಸ್ತರಣೆಗೆ ಡಿಪಿಆರ್ ತಯಾರಿಕೆಗೆ ಟೆಂಡರ್‌ನಲ್ಲಿ ಬಿಡ್ ಮಾಡಿದ ಆರ್ವೀ ಕಂಪನಿಯನ್ನು ಬಿಎಂಆರ್‌ಸಿಎಲ್ ಅಂತಿಮಗೊಳಿಸಿದೆ. 1.26 ಕೋಟಿ ರೂ.ಗೆ ಬಿಡ್ ಕೂಗಿದ್ದು, ಐದು ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಲು ಮೆಟ್ರೋ ಅಧಿಕಾರಿಗಳು ಗಡುವು ನೀಡಿದ್ದಾರೆ. ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆಯನ್ನು ಈ ಹಿಂದೆಯು ಬಿಜೆಪಿ ನಾಯಕರು ವಿರೋಧಿಸಿದ್ದರು. ಇದೀಗ ಪಿಸಿ ಮೋಹನ್ ಅವರು ಟೀಕಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪರ್ಯಾಯ ರೈಲು ಸಾರಿಗೆ 'ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ' (RRTS) ಯನ್ನು ಉಲ್ಲೇಖಿಸಿದ್ದಾರೆ.

ನಮ್ಮ ಮೆಟ್ರೋ ಮಾದವರದಿಂದ ತುಮಕೂರುವರೆಗಿನ 59.6 ಕಿ.ಮೀ ಮೆಟ್ರೋ ವಿಸ್ತರಣೆಗೆ ಹೊಸದಾಗಿ ಅನುಮೋದಿಸಲಾಗಿದೆ. ಅದಕ್ಕಾಗಿ 1.2 ಕೋಟಿ ವೆಚ್ಚದ ಡಿಪಿಆರ್ ಅಂತಿಮಗೊಳಿಸಿದ್ದಾರೆ. ಇದು ಪ್ರಾದೇಶಿಕ ಅಗತ್ಯಗಳಿಗಿಂತ ನಗರಕ್ಕೆ ಆದ್ಯತೆ ನೀಡಲಿದೆ. ಪ್ರತಿ ಗಂಟೆಗೆ 60-80 ಕಿಲೋ ಮೀಟರ್ ವೇಗದಲ್ಲಿ ತುಂಬಾ ನಿಧಾನವಾಗಿ ಕಾರ್ಯ ನಿರ್ವಹಿಸುವ ಸಾರಿಗೆ ಆಗಿದೆ. ಯೋಜನೆಗೆ ಅಧಿಕ ವೆಚ್ಚವಾಗಲಿದೆ ಎಂದಿದ್ದಾರೆ.
RRTS ನಿರ್ಮಾಣ ವೆಚ್ಚ ಕಡಿಮೆ
ನಮೋ ಭಾರತ್ ರೈಲು ಪ್ರತಿ ಗಂಟೆಗೆ 180 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ. ದೆಹಲಿ-ಗಾಜಿಯಾಬಾದ್ ವರೆಗೆ 'ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ' (RRTS) ಅಡಿ ನಮೋ ಭಾರತ್ ಸೇವೆ ಆರಂಭವಾಗಿದೆ. ಮೆಟ್ರೋ ಯೋಜನೆ, ಅಧ್ಯಯನಗಳಿಗೆ ಹೋಲಿಸಿದರೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ನಿರ್ಮಾಣ ವೆಚ್ಚ ಶೇಕಡಾ 30 ರಿಂದ 50ರಷ್ಟು ರಷ್ಟು ಕಡಿಮೆ ಆಗುತ್ತದೆ. ಮೆಟ್ರೋ ಬದಲಾಗಿ ಈ ಸಾರಿಗೆ ಸೇವೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಿಂದ ತುಮಕೂರು ಸುಮಾರು 70-ಕಿಲೋ ಮೀಟರ್ ಅಂತರವಿದೆ. ಅಲ್ಲಿಂದ ನಗರಕ್ಕೆ ಬರುವ ದೈನಂದಿನ ಪ್ರಯಾಣಿಕರಿಗೆ ಈ ಅಂತರ ಕ್ರಮಿಸಲು ನಮ್ಮ ಮೆಟ್ರೋ ಬದಲಾಗಿ ನಮೋ ಭಾರತ್ ರೈಲುಗಳು ಸೇವೆ ಸೂಕ್ತವಾಗಲಿದೆ ಎಂದು ತಿಳಿಸಿದ್ದಾರೆ..
ತುಮಕೂರುವರೆಗೆ ಮೆಟ್ರೋ ವಿಸ್ತರಣೆ
ಕಂಪನಿಯು ಡಿಪಿಆರ್ ಸಿದ್ದಪಡಿಸಿ ಇನ್ನೈದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ. ಅದಾದ ಬಳಿಕ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ದೊರೆತ ಬಳಿಕ ಕಾಮಗಾರಿ ಆರಂಭಿಸಲು ಟೆಂಡರ್ ಆಹ್ವಾನಿಸಲಾಗುತ್ತದೆ. ನಂತರವೇ ಗುತ್ತಿಗೆ ಕಂಪನಿ, ಯೋಜನೆ ಅಂದಾಜು ವೆಚ್ಚ ಎಲ್ಲವು ತಿಳಿಯಲಿದೆ. ತುಮಕೂರು, ನೆಲಮಂಗಲ ಹಾಗೂ ಸುತ್ತಮುತ್ತಲಿನ ಊರುಗಳಿಂದ ಬೆಂಗಳೂರಿಗೆ ಆಗಮಿಸುವವರಿಗೆ ಮತ್ತೊಂದು ಸಾರಿಗೆ ಸೇವೆ ಸಿಕ್ಕಂತಾಗುತ್ತದೆ.












Click it and Unblock the Notifications