ಪಾಕಿಸ್ತಾನಿಯರಿಗೆ ಭಾರತ ಅಂದ್ರೆ ಬಲು ಪ್ರೀತಿ!
ಭಯೋತ್ಪಾದನೆ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ಬದ್ಧ ವೈರಿಗಳೇ. ಪಾಕಿಸ್ತಾನಿ ಉಗ್ರರು ನಮ್ಮ ಮೇಲೆ ಆಗಾಗ ಪ್ರಚೋದನಾತ್ಮಕ ದಾಳಿ ನಡೆಸುತ್ತಲೇ ಇರುತ್ತಾರೆ. ಎರಡೂ ದೇಶದ ನಡುವಿನ ಶಾಂತಿ ಸದ್ಯಕ್ಕೆ ದೂರವಾದ ಮಾತು. ಆದರೆ, ಪಾಕಿಸ್ತಾನದ ಸಾಮಾನ್ಯ ಜನರು ಭಾರತದ ಬಗ್ಗೆ, ಇಲ್ಲಿನ ಜನರ ಬಗ್ಗೆ, ಸ್ಥಳ, ಸಂಸ್ಕೃತಿಯ ಬಗ್ಗೆ ಯಾವ ನಿಲುವು ತಾಳಿದ್ದಾರೆ? ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದ ಯಂಗ್ ಲೀಡರ್ಸ್ ಇನಿಷಿಯೇಟಿವ್ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಆಯೇಷಾ, ಈ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
***
ದಶಕಗಳಿಂದ ನಡೆಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಕದನ ಮಾಧ್ಯಮಗಳ ಪಾಲಿಗೆ ದೊಡ್ಡ ಸುದ್ದಿ. ರಾಜಕೀಯ ಪಕ್ಷಗಳು ಮೇಲಿಂದ ಮೇಲೆ ಶಾಂತಿ ಮಾತುಕತೆ ನಡೆಸುತ್ತಿವೆ. ಆದ್ರೆ ಅದ್ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ. ನೆರೆಯ ದೇಶಗಳೆರಡು ಬದ್ಧವೈರಿಗಳಾಗಿ ಕಾಣಿಸಿಕೊಳ್ಳುತ್ತಿವೆ. ಮಾಧ್ಯಮಗಳು ಕೂಡ ಎರಡು ದೇಶಗಳ ನಡುವಿನ ಶಾಂತಿ ಮಾತುಕತೆಯ ಸುದ್ದಿಯನ್ನು ಪದೇ ಪದೇ ಪ್ರಕಟಿಸುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿವೆ.
ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ಇಂಡಿಯಾ-ಪಾಕಿಸ್ತಾನ ಯಂಗ್ ಲೀಡರ್ಸ್ ಇನಿಶಿಯೇಟಿವ್ ಫೋರಂ ನಡೆದಿತ್ತು. ಭಾರತದಿಂದ ಪ್ರತಿನಿಧಿಸಿದ್ದ ಮೂವರು ಪ್ರತಿನಿಧಿಗಳಲ್ಲಿ ಬೆಂಗಳೂರಿನ ಆಯೇಷಾ ಕೂಡ ಒಬ್ಬರಾಗಿದ್ದರು. ಏಷಿಯಾ ಪೆಸಿಫಿಕ್ ವಲಯದಲ್ಲಿ ನೆಕ್ಸ್ಟ್ ಜನರೇಷನ್ ಲೀಡರ್‌ಗಳನ್ನು ಅಭಿವೃದ್ಧಿಪಡಿಸಲು ಏಷಿಯಾ ಸೊಸೈಟಿ 2006ರಲ್ಲಿ 21 ಯಂಗ್ ಲೀಡರ್ಸ್ ಇನಿಷಿಯೇಟಿವ್ ಆರಂಭಿಸಿತ್ತು. ಕಳೆದ 8 ವರ್ಷಗಳಲ್ಲಿ ಏಷಿಯಾ 21-30 ದೇಶಗಳ ಸುಮಾರು 700ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಏಷಿಯಾ-ಪೆಸಿಫಿಕ್‌ನ ನೆಕ್ಸ್ಟ್ ಜನರೇಷನ್ ನೆಟ್‌ವರ್ಕ್‌ನಲ್ಲಿ ಅಗ್ರಮಾನ್ಯವಾಗಿದೆ. ಇತ್ತೀಚೆಗೆ ಭಾರತ-ಪಾಕಿಸ್ತಾನ ವಲಯದ ಯಂಗ್ ಲೀಡರ್ಸ್ ಇನಿಷಿಯೇಟಿವ್ ಕೂಡ ಆರಂಭವಾಗಿದೆ.
ಆಯೇಷಾ ಅಮನ್ ಆರ್ಯನ್ ಫೌಂಡೇಷನ್‌ನ ಸಿಇಒ ಮತ್ತು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯನ್ನು ಕೂಡ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಆರ್ಯನ್ ಫೌಂಡೇಷನ್‌ನ ಸಿಎಸ್‌ಆರ್ ವಿಂಗ್ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ಪ್ರಯತ್ನವನ್ನು ಕೂಡ ಮಾಡುತ್ತಿದೆ. ಅವರ ಸಾಮಾಜಿಕ ಸೇವೆ ನೋಡಿ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. 2010ರಲ್ಲಿ ವುಮನ್ ಅಚೀವರ್ ಅವಾರ್ಡ್, 2011ರಲ್ಲಿ ವುಮನ್ ಲೀಡರ್ ಆಫ್ ಇಂಡಿಯಾ ಪ್ರಶಸ್ತಿಗಳು ಬಂದಿವೆ. ಈಗ ಆಯೇಷಾ ಇಸ್ಲಾಮಾಬಾದ್‌ನಲ್ಲಿ ನಡೆದ ಏಷಿಯಾ ಸೊಸೈಟಿ 21, ಯಂಗ್ ಲೀಡರ್ಸ್ ಪ್ರೋಗ್ರಾಂನಲ್ಲಿ ಭಾಗವಹಿಸಿದ್ದಾರೆ. ಆಯೇಷಾ ಜೊತೆಗಿನ ಸಂವಾದದ ತುಣುಕುಗಳು ಇಲ್ಲಿವೆ.

ಇಸ್ಲಾಮಾಬಾದ್‌ನಲ್ಲಿನ ಅನುಭವದ ಬಗ್ಗೆ ಹೇಳಿ
ಇದೊಂದು ಅದ್ಭುತ ಅವಕಾಶ. ಅವರಿಗೆ ಭಾರತೀಯರ ಬಗ್ಗೆ ಯಾವುದೇ ಸೇಡಿನ ಭಾವನೆ ಇಲ್ಲ. ನಾನು ಅಲ್ಲಿ ಸಾಮಾನ್ಯ ಜನರ ಜೊತೆ ಮಾತನಾಡುವ ಉದ್ದೇಶದಿಂದ ಒಂದು ದಿನ ಒಬ್ಬಳೇ ಉಳಿದುಕೊಂಡಿದ್ದೆ. ಇದು ನನಗೆ ಭಾರತ-ಪಾಕಿಸ್ತಾನ ನಡುವೆ ಯಾವುದೇ ಭಿನ್ನತೆ ಇಲ್ಲ ಅನ್ನೋದನ್ನ ಅರಿಯಲು ಸಹಾಯ ಮಾಡಿತು. ಅಲ್ಲಿನ ಪ್ರತಿಯೊಬ್ಬ ಪ್ರಜೆಯ ಬಳಿಯೂ ಭಾರತಕ್ಕೆ ಸಂಬಂಧಿಸಿದ ಒಂದೊಂದು ಕಥೆಯಿದೆ. ಸುಮಾರು 100 ಜನರನ್ನು ನಾನು ಮಾತನಾಡಿಸಿದ್ದೆ. ಅವರೆಲ್ಲ ಭಾರತೀಯ ಪ್ರಜೆ ಅನ್ನೋದಕ್ಕೆ ಹೆಚ್ಚಿನ ಗೌರವ ನೀಡಿದರು.

ಸಮ್ಮೇಳನದಲ್ಲಿ ನಿಮ್ಮ ಸಲಹೆ ಏನಿತ್ತು?
ಎರಡೂ ದೇಶದ ಪ್ರಜೆಗಳಿಗೆ ಸುಲಭವಾಗಿ ವೀಸಾ ದೊರೆಯಬೇಕು. ಇದು ಎರಡು ದೇಶಗಳ ನಡುವೆ ಇರುವ ಅಂತರವನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು. ಈ ಬಗ್ಗೆ ನಾವು ಜಾಹೀರಾತು, ಪೋಸ್ಟರ್‌ಗಳು ಮತ್ತು ಶಾರ್ಟ್ ಫಿಲ್ಮ್‌ಗಳ ಮೂಲಕ ಮಾಹಿತಿ ನೀಡುವ ಆಲೋಚನೆ ಮಾಡಿದ್ದೇವೆ. ಭಯೋತ್ಪಾದನೆ ಮತ್ತು ಸುಲಭ ವೀಸಾ ನಡುವೆ ಯಾವುದೇ ಸಂಬಂಧವಿಲ್ಲ. ಏನಾದ್ರು ಆಗ್ಬೇಕು ಅಂತಿದ್ರೆ ಅದು ಆಗೇ ಆಗುತ್ತದೆ. ಗಾಳಿ ಸುದ್ದಿ ಮತ್ತು ತಪ್ಪು ಮಾಹಿತಿಗಳ ಮೂಲ ದ್ವೇಷವನ್ನು ಹೆಚ್ಚಿಸುವ ಬದಲು ಅದನ್ನು ಬದಿಗಿಟ್ಟು ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು.

ಬಿಸಿಬಿಸಿ ಚರ್ಚೆ : ಅಲ್ಲಿಯೂ ಹಾಗೆನಾ?
ಇಲ್ಲ, ಎರಡೂ ದೇಶದ ಜನರಲ್ಲಿ ಸಾಮ್ಯತೆ ಇದೆ. ಸಂಸ್ಕೃತಿ, ಔಟ್‌ಲುಕ್ ಮತ್ತು ಭಾಷೆ ಸಾಧಾರಣವಾಗಿ ಒಂದೇ ಇದೆ. ಆದರೆ ಮಾಧ್ಯಮಗಳು ಸುದ್ದಿ ನೀಡುವ ಕ್ರಮ ಹೆಚ್ಚು ಅಗ್ರೆಸ್ಸಿವ್ ಆಗಿದೆ. ಪತ್ರಕರ್ತರು, ಮಾಧ್ಯಮಗಳು ಎರಡೂ ದೇಶದ ಸಂಬಂಧದ ವಿಚಾರ ಬಂದಾಗ ಅದನ್ನು ವೈಭವೀಕರಿಸದೆ ನೀಡಿದ್ರೆ ಬಾಂಧವ್ಯ ಬೆಸೆಯಲು ಸಹಕಾರಿಯಾಗಬಹುದು.

ಗಮನ ಸೆಳೆದ ಮುಖ್ಯ ಅಂಶ ಯಾವುದು?
ಪಾಕಿಸ್ತಾನಿಯರು ಭಾರತಕ್ಕೆ ಬಂದು ಇಲ್ಲಿನ ಸೊಗಸನ್ನು ಸವಿಯುವ, ಜನರನ್ನು ಭೇಟಿ ಮಾಡುವ ಕನಸು ಕಾಣ್ತಿದ್ದಾರೆ. ರಜಾ ಸಮಯದಲ್ಲಿ ತಾಜ್ ಮಹಲ್‌ಗೆ ಬಂದು ಸೊಬಗನ್ನು ವೀಕ್ಷಿಸುವ ಕನಸು ಎಲ್ಲರಿಗೂ ಇದೆ. ಎರಡು ದೇಶದ ಸಂಬಂಧ ವೃದ್ಧಿಯಾದರೆ ರಾಜಕೀಯಕ್ಕೆ ಯಾರನ್ನೂ ಕೂಡ ತಡೆಯಲು ಸಾಧ್ಯವಿಲ್ಲ. ಅಲ್ಲಿರುವ ಅನೇಕ ಹಿಂದೂಗಳನ್ನು ಭೇಟಿ ಮಾಡಿದ್ದೇನೆ. ಅವರ‍್ಯಾರು ಎರಡೂ ದೇಶಗಳ ನಡುವಿನ ರಾಜಕೀಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಜನರಿಗೆ ಏನು ಹೇಳಲು ಬಯಸುತ್ತೀರಾ?
ಪಾಕ್ ಬಗ್ಗೆ ಇರುವ ನಮ್ಮ ಮನೋಭಾವ ಬದಲಾಗಲೇಬೇಕು. ಯಾರೂ ವಾಸ್ತವಾಂಶ ಅರಿತಿಲ್ಲ. ಹೀಗಾಗಿ ನಾವು ಬೇರೆಯದೇ ಭಾವನೆಗಳೊಂದಿಗೆ ಬದುಕುತ್ತಿದ್ದೇವೆ. ಇದು ತಪ್ಪು. ಹಳೆಯದನ್ನು ಮರೆತು ಬಿಡಬೇಕು. ತಪ್ಪು ತಿಳಿವಳಿಕೆಯಿಂದ ಯಾವುದೇ ಪ್ರಯೋಜವಿಲ್ಲ. ಪಾಕಿಸ್ತಾನ ಯಾವತ್ತಿದ್ದರೂ ನಮ್ಮ ಒಂದು ಭಾಗವೇ. ನಮ್ಮ ಹೃದಯದಲ್ಲೂ ಅವರಿಗೆ ಜಾಗ ಕೊಟ್ಟು ಪ್ರೀತಿಸಬೇಕು.












Click it and Unblock the Notifications