ಪಾಕ್ ಪರ ಘೋಷಣೆ: 3 ಆರೋಪಿಗಳ ಬಂಧನ
ಬೆಂಗಳೂರು, ಮಾರ್ಚ್ 04: ಬೆಂಗಳೂರು ವಿಧಾನಸೌಧದಲ್ಲಿ ಇತ್ತೀಚೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪ್ರಕರಣದಲ್ಲಿ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಹೌದು, ರಾಜ್ಯದಲ್ಲಿ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಗುರಿಯಾಗಿದ್ದ ವಿಧಾನಸೌಧದಲ್ಲಿನ ಪಾಕ್ ಪರ ಘೋಷಣೆಯು ಖಾಸಗಿ ಎಫ್‌ಎಸ್‌ಎಲ್ ವರದಿ ಬಂದಿದೆ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಎಫ್‌ಎಸ್‌ಲ್ ವರದಿ ತಿಳಿಸಿದೆ. ಈ ವರದಿ ಇನ್ನಿತರ ಸಾಕ್ಷ್ಯಾಧಾರ ಪರಿಗಣಿಸಿ ವಿಧಾನಸೌಧ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಪೊಲೀಸರೇ ಮಾಧ್ಯಮ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ. ಬಂಧಿತ ಶೀಘ್ರವೇ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಅವರು ರಾಜ್ಯ ಸಭೆಗೆ ಆಯ್ಕೆ ಆದ ಫೆಬ್ರವರಿ 27ರಂದು ಈ ಘಟನೆ ನಡೆದಿತ್ತು.
ಆರೋಪಿಗಳನ್ನು ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ನಾಸಿಪುಡಿ, ಬೆಂಗಳೂರು ಆರ್‌ಟಿ ನಗರದ ಮುನಾವರ್ ಮತ್ತು ದೆಹಲಿ ಮೂಲದ ಇಲ್ತಾಜ್ ಎಂದು ತಿಳಿದು ಬಂದಿದೆ.
ಪಾಕ್ ಪರ ಘೋಷಣೆ ವಿಡಿಯೋ
ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಯ್ಯದ್ ನಾಸೀರ್ ಹುಸೇನ್ ಅವರು ಆಯ್ಕೆ ಆದರು. ಈ ವೇಳೆ ವಿಧಾನಸೌಧದಲ್ಲಿ ಸಂಸದರನ್ನು ಹೊತ್ತು ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ನಾಸಿರ್ ಹುಸೇನ್ ಝಿಂದಾಬಾದ್ ಜೊತೆಗೆ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಬಿಜೆಪಿ ನಾಯಕರು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಇದೀಗ ವೈರಲ್ ಆಗಿದ್ದ ವಿಡಿಯೋ ಕುರಿತು ಖಾಸಗಿ ವಿಧಿ ವಿಜ್ಞಾನ ಪ್ರಯೋಗಾಲಯ (FSL) ವರದಿ ಬಂದಿದೆ. ಅದರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು, ಸಾಬೀತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ದೊರೆತ ಸಾಕ್ಷಿ ಆಧಾರಗಳ ಆಧರಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಬಿಜೆಪಿ ಆರ್.ಅಶೋಕ್ ಅವರು ಟ್ವೀಟ್ ಮಾಡಿದ್ದು, FSL ವರದಿಯ ಅಸಲಿಯತ್ತು ಪಾ'ಕೈ'ಸ್ತಾನ್ ಜಿಂದಾಬಾದ್ ಎಂದವರು ಅರೆಸ್ಟ್ ಆಗಿದ್ದಾರೆ. ಪೊಲೀಸರು ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು ದೃಢವಾಗುತ್ತಿದ್ದಂತೆ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಆದರೆ, ಅಯೋಗ್ಯ ಕರ್ನಾಟಕ ಕಾಂಗ್ರೆಸ್ ಮಾತ್ರ ನಾಸೀರ್ ಸಾಬ್ ಜಿಂದಾಬಾದ್ ಎನ್ನುತ್ತಿದೆ. ಮಜಾವಾದಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ಕಾರ 'ಪಾಕೈಸ್ತಾನ್' ಎಂದ ಬ್ರದರ್ಸ್‌ಗಳ ಬೆನ್ನಿಗೆ ನಿಂತು ದೇಶ ದ್ರೋಹಿ ಕೃತ್ಯ ಎಸಗುತ್ತಿದೆ. ಸಿದ್ದರಾಮಯ್ಯನವರೇ ನೀವು ನಮ್ಮ ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಫೇಕ್ ಫ್ಯಾಕ್ಟಿರಿಯ ಕೆಲಸ: ಕಾಂಗ್ರೆಸ್ ತಿರುಗೇಟು
ಕರ್ನಾಟಕ ಬಿಜೆಪಿ ಟ್ವೀಟ್‌ನಲ್ಲಿ ಪ್ರಿಯಾಂಕ್ ಖರ್ಗೆಯವರೇ ಈಗಲಾದರೂ ಕ್ಷಮೇ ಕೇಳುವಿರಾ? ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, 'ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ಏನು ಬೇಕಿದ್ದರೂ ತಯಾರಾಗುತ್ತವೆ'. ಪಾಕಿಸ್ತಾನ್ ಜಿಂದಾಬಾದ್ ಎನ್ನುವುದೂ ಬಿಜೆಪಿ ಫ್ಯಾಕ್ಟರಿಯಲ್ಲೇ ತಯಾರಾಗುತ್ತವೆ, FSL ರಿಪೋರ್ಟ್ ಗಳೂ ಬಿಜೆಪಿಯಲ್ಲೇ ತಯಾರಾಗುತ್ತವೆ ಎಂದು ಹೇಳಿದೆ.
ಸುಳ್ಳು, ನಕಲಿತನವನ್ನು ಹುಟ್ಟಿಸಿದ ಅಪ್ಪ ಅಮ್ಮನೇ ಬಿಜೆಪಿ. ನಕಲಿ, ಅನಧಿಕೃತ FSL ವರದಿಯನ್ನು ತಯಾರಿಸಿದ ಕರ್ನಾಟಕ ರಾಜ್ಯ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬೀಗ ಜಡಿಯುವುದು ನಮ್ಮ ಸರ್ಕಾರಕ್ಕೆ ತಿಳಿದಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.












Click it and Unblock the Notifications