ಕೋವಿಡ್ ಹಗರಣ: 'ಪಿಎಸಿ ತನಿಖೆಗೆ ಸ್ಪಂದಿಸದ ಸ್ಪೀಕರ್ ವಿರುದ್ಧ ಹಕ್ಕು ಚ್ಯುತಿ'
ಬೆಂಗಳೂರು, ಮೇ 31: ಕೋವಿಡ್19 ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದ ಖರೀದಿಸಲಾದ ವೈದ್ಯಕೀಯ ಉಪಕರಣ, ಔಷಧಿ, ಪಿಪಿಇ ಕಿಟ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದಾಗಿದೆ.
ಆದರೆ, ಸಮಿತಿಯ ತನಿಖೆಗೆ ಸ್ವತಃ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಎಚ್ ಕೆ ಪಾಟೀಲ್ ಅವರು ಗರಂ ಆಗಿದ್ದು, ಸ್ಪೀಕರ್ ವಿರುದ್ಧ ಹಕ್ಕು ಚ್ಯುತಿ ದೂರನ್ನು ಸಲ್ಲಿಸಲು ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಮಿತಿ ತನಿಖೆಗೆ ಸಹಕರಿಸದಿರುವ ಸ್ಪೀಕರ್ ಕಾಗೇರಿ ಅವರ ವಿರುದ್ಧ ಮಂಗಳವಾರ ಹಕ್ಕು ಚ್ಯುತಿ ದೂರನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಕೋವಿಡ್19 ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದ ಖರೀದಿಸಲಾದ ವೈದ್ಯಕೀಯ ಉಪಕರಣ, ಔಷಧಿ, ಪಿಪಿಇ ಕಿಟ್‌ನಲ್ಲಿನಲ್ಲಿ ಅವ್ಯವಹಾರ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದ್ದಾರೆ.

ತನಿಖೆ ನಡೆಸುವುದು ನನ್ನ ಜವಾಬ್ದಾರಿ
ಪಿಎಸಿ ಸಮಿತಿಯಲ್ಲಿ ಎಲ್ಲ ಪಕ್ಷದವರು ಇದ್ದಾರೆ. ಸಮಿತಿಯ ಅಧ್ಯಕ್ಷನಾಗಿ ತನಿಖೆ ನಡೆಸುವುದು ನನ್ನ ಜವಾಬ್ದಾರಿ. ಆದರೆ ಸ್ಪೀಕರ್ ಅವರು ಅಡ್ಡಿಪಡಿಸುವುದು ಸರಿ ಅಲ್ಲ. ಇದು ನಮ್ಮ ಹಕ್ಕುಚ್ಯುತಿ ಆಗುತ್ತದೆ ಎಂದು ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಭೇಟಿಯನ್ನು ತಡೆದಿದ್ದಾರೆ
ತನಿಖೆಯ ಭಾಗವಾಗಿ ಬುಧವಾರ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಎಚ್ ಕೆ ಪಾಟೀಲ್ ಹಾಗೂ ಇತರೆ ಸದಸ್ಯರು ವಿವಿಧ ಆಸ್ಪತ್ರೆಗಳಿಗೆ, ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಭೇಟಿಯನ್ನು ತಡೆದಿದ್ದಾರೆ ಎಂದು ಎಚ್ ಕೆ ಪಾಟೀಲ್ ಆರೋಪಿಸಿದ್ದರು.

ಕೊರೊನಾವೈರಸ್ ಕಾರಣದಿಂದ ತಡೆಯಲಾಗಿದೆ
ಆದರೆ, ಈ ಬಗ್ಗೆ ಇಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊರೊನಾವೈರಸ್ ಹರಡುವುದನ್ನು ತಡೆಯಲು ಎಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಮಿತಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮೊದಲು ಸಭೆ ಸೇರದಂತೆ ಸೂಚಿಸಲಾಗಿತ್ತು. ನಂತರ ಸಮಿತಿ ಈ ಹಂತದಲ್ಲಿ ಸಾರ್ವಜನಿಕರನ್ನು ಭೇಟಿಯಾಗುವುದು ಸರಿ ಅಲ್ಲ ಎಂಬ ಉದ್ದೇಶದಿಂದ ಸಮಿತಿಯ ಭೇಟಿ ಕಾರ್ಯಕ್ರಮವನ್ನು ತಡೆಯಲಾಗಿತ್ತು ಎಂದು ಹೇಳಿದ್ದಾರೆ.

ಸಮಿತಿ ಅಧ್ಯಕ್ಷರು ತನಿಖೆ ನಡೆಸಲು ಸ್ವತಂತ್ರರು
ಅದನ್ನು ಹೊರತುಪಡಿಸಿ ಸಮಿತಿಯ ಸಾರ್ವಜನಿಕ ಭೇಟಿ ಕಾರ್ಯಕ್ರಮಕ್ಕೆ ತಡೆ ನೀಡುವುದರ ಹಿಂದೆ ಯಾವುದೇ ಉದ್ದೇಶವಿಲ್ಲ. ಕೆಲ ಮಾಧ್ಯಮಗಳು ಸ್ಪೀಕರ್ ಮೇಲೆ ಅನುಮಾನ ವ್ಯಕ್ತಪಡಿಸಿ ವರದಿ ಮಾಡಿವೆ. ಸ್ಪೀಕರ್, ಸಮಿತಿ ಅಧ್ಯಕ್ಷರು ತನಿಖೆ ನಡೆಸಲು ಸ್ವತಂತ್ರರು ಎಂದು ಹೇಳಿದ್ದಾರೆ ಎಂದು ಪ್ರಕಟಣೆಯಲ್ಲಿ ವಿಶಾಲಾಕ್ಷಿ ತಿಳಿಸಿದ್ದಾರೆ.












Click it and Unblock the Notifications