Onion Price: ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಕೇಳಿ ಶಾಕ್ ಆದ ಗ್ರಾಹಕರು!
ರಾಜ್ಯದಲ್ಲಿ ಅನಿಯಮಿತ ಮಳೆ ಮತ್ತು ಅನಾವೃಷ್ಟಿಯಿಂದಾಗಿ ಈ ವರ್ಷದ ಈರುಳ್ಳಿ ಉತ್ಪಾದನೆ ಮೇಲೆ ಹೊಡೆತ ಬಿದ್ದಿದ್ದು, ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ನಿಧಾನವಾಗಿ ಏರಿಕೆಯಾಗುತ್ತಿದೆ.
ನಗರದ ಅನೇಕ ಅಂಗಡಿಗಳಲ್ಲಿ ಬೆಲೆಗಳು ಶೇಕಡಾ 50 ಕ್ಕಿಂತ ಹೆಚ್ಚಿವೆ, ಮಾರಾಟಗಾರರು ಈರುಳ್ಳಿಯನ್ನು ಸಮರ್ಪಕವಾಗಿ ಪೂರೈಸಲು ಸಾಕಷ್ಟು ದಾಸ್ತಾನು ಇಲ್ಲದೆ ಪರದಾಡುತ್ತಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಕಳೆದೆರಡು ವಾರಗಳಿಂದ ನಿರಂತರವಾಗಿ 35 ರಿಂದ 40 ರೂ.ಗಳ ನಡುವೆ ಇದ್ದ ಈರುಳ್ಳಿಯ ಸಗಟು ಬೆಲೆ ಗುರುವಾರದ ವೇಳೆಗೆ ಕೆಜಿಗೆ 65 ರೂಪಾಯಿಗೆ ಹೆಚ್ಚಳವಾಗಿದೆ.
ಒಂದು ವಾರದಿಂದ ಬೆಲೆ ಏರಿಕೆ
ಬೆಂಗಳೂರು ಆಲೂಗೆಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ರವಿಶಂಕರ್ ಬಿ ಮಾತನಾಡಿ, ಈ ವಾರದ ಆರಂಭದಿಂದಲೂ ಬೆಲೆ ಏರಿಕೆಯಾಗುತ್ತಿದೆ ಎಂದು ತಿಳಿಸಿರುವುದಾಗಿ ಡಿಹೆಚ್ ವರದಿ ಮಾಡಿದೆ.
"ಕಳೆದ ಎರಡು ವರ್ಷಗಳಿಂದ ಪೂರೈಕೆ ಕುಸಿಯುತ್ತಿದೆಯಾದರೂ, ಈ ಋತುವಿನಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ" ಎಂದು ರವಿಶಂಕರ್ ಡಿಹೆಚ್‌ಗೆ ತಿಳಿಸಿದ್ದಾರೆ.
"ಕೆಲವು ವರ್ಷಗಳ ಹಿಂದೆ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಪ್ರತಿದಿನ 500 ರಿಂದ 1,000 ಟ್ರಕ್‌ಲೋಡ್‌ಗಳು ದಾಸ್ತಾನು ಸಗಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು ಅದು ಈಗ ಪ್ರತಿದಿನ ಜಿಲ್ಲೆಗಳಿಂದ ಕೇವಲ 100 ಟ್ರಕ್‌ಲೋಡ್ ಅಥವಾ ಸರಿಸುಮಾರು 1,000 ಟನ್ ತಾಜಾ ಈರುಳ್ಳಿ ಮಾತ್ರ ಪೂರೈಕೆಯಾಗುತ್ತಿದೆ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆ
ತಾಜಾ ಈರುಳ್ಳಿ ಪೂರೈಕೆ ಕೊರತೆಯಿಂದಾಗಿ ಹಳೆಯ ದಾಸ್ತಾನುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಅನೇಕ ಮಾರಾಟಗಾರರು ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
"ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆಯಿಂದ ಉತ್ಪನ್ನಗಳನ್ನು ಪಡೆದ ನಂತರ ಗದಗ, ಹುಬ್ಬಳ್ಳಿ, ಬೆಳಗಾವಿಯಿಂದ ತಾಜಾ ದಾಸ್ತಾನು ಪಡೆಯಬೇಕಾಗಿತ್ತು. ದುರದೃಷ್ಟವಶಾತ್, ಈರುಳ್ಳಿ ಇಳುವರಿ ಸಾಕಷ್ಟು ಕಡಿಮೆಯಾಗಿದೆ" ಎಂದು ರವಿಶಂಕರ್ ಹೇಳಿದರು.
ಕೈಕೊಟ್ಟ ಮಳೆ, ಸುಮ್ಮನಾದ ರೈತರು
ಈ ವರ್ಷದ ಆರಂಭದಲ್ಲಿ ಹಲವಾರು ರೈತರು, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೆಳೆ ನಷ್ಟವನ್ನು ಅನುಭವಿಸಿದ ನಂತರ ಅನೇಕ ರೈತರು ಈರುಳ್ಳಿ ಬೆಳೆಯಲು ಹಿಂದೇಟು ಹಾಕಿದ್ದರು. ಅನಿಶ್ಚಿತ ಮಳೆಯ ಕಾರಣ ರೈತರು ನಷ್ಟದ ಭೀತಿಯಿಂದ ಈರುಳ್ಳಿ ಬೆಳೆಯದೇ ಇರುವುದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಪೂರೈಕೆ ಬಿಕ್ಕಟ್ಟಿನ ಮಧ್ಯೆ, ನಗರದ ಹಲವಾರು ಸೂಪರ್‌ಮಾರ್ಕೆಟ್‌ಗಳು ತಮ್ಮ ಬೆಲೆಯನ್ನು ಕೆಜಿಗೆ 55 ರಿಂದ 80 ರೂಪಾಯಿಗೆ ಹೆಚ್ಚಿಸಿವೆ.
"ಎರಡು ದಿನಗಳ ಹಿಂದೆ, ಕೆಜಿಗೆ 50 ರೂ ಬೆಲೆ ಇತ್ತು ಆದರೆ ನಾವು ಕಡಿಮೆ ಪೂರೈಕೆ ಮತ್ತು ಹೆಚ್ಚಿನ ಸಗಟು ಬೆಲೆಗಳಿಂದ ಹೆಣಗಾಡುತ್ತಿದ್ದೇವೆ. ಈಗ, ಇದು ಕೆಜಿಗೆ 60 ರೂಪಾಯಿಗೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು'' ತರಕಾರಿ ವ್ಯಾಪಾರಿಗಳು ಅಂದಾಜಿಸಿದ್ದಾರೆ.












Click it and Unblock the Notifications