ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಷಯದಲ್ಲಿ ಸಿಹಿಸುದ್ದಿ
ಬೆಂಗಳೂರು, ಜೂನ್ 29: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗೆ ವಿವಿ ಸಿಹಿಸುದ್ದಿ ನೀಡಿದೆ. ಹಳೆಯ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಂದು ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿ ನೀಡುವ ಬಗ್ಗೆ ಆದೇಶ ಹೊರಡಿಸಲಾಗಿದೆ.
ಈ ಕುರಿತು ಆದೇಶವನ್ನು ಹೊರಡಿಸಲಾಗಿದ್ದು, 2018-19ನೇ ಶೈಕ್ಷಣಿಕ ಸಾಲು ಹಾಗೂ ಅದರ ಹಿಂದಿನ ಸಾಲುಗಳಲ್ಲಿ ಸ್ನಾತಕ (under- graduate) ಮತ್ತು ಸ್ನಾತಕೋತ್ತರ ಪದವಿಗಳಿಗೆ (post-graduate) ಪ್ರವೇಶಾತಿ ಪಡೆದು (ಸೆಮಿಸ್ಟರ್ ಮತ್ತು ವಾರ್ಷಿಕ ಪದ್ಧತಿಯಡಿ) ಪದವಿ ಮುಗಿಸಲು ನಿಗದಿಪಡಿಸಿರುವ ಕಾಲಮಿತಿ ಮೀರಿರುವ ಹಳೆಯ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಂದು ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿ ನೀಡುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.

ಆದೇಶದ ವಿವರಗಳು: 2018-19ನೇ ಶೈಕ್ಷಣಿಕ ಸಾಲು ಹಾಗೂ ಅದರ ಹಿಂದಿನ ಸಾಲುಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ ಪಡೆದು (ಸೆಮಿಸ್ಟರ್ ಮತ್ತು ವಾರ್ಷಿಕ ಪದ್ಧತಿಯಡಿ) ಪದವಿ ಮುಗಿಸಲು ನಿಗದಿಪಡಿಸಿರುವ ಕಾಲಮಿತಿ ಮೀರಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಒಂದು ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿ ನೀಡುವ ಬಗ್ಗೆ ಪ್ರಸ್ತಾವನೆಯನ್ನು ವಿದ್ಯಾವಿಷಯಕ ಪರಿಷತ್ತಿನ ಸಭೆಯ ಪರಿಗಣನೆಗೆ ಮಂಡಿಸಲಾಗಿತ್ತು ಎಂದು ಆದೇಶ ಹೇಳಿದೆ.
ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ 2014-15ನೇ ಶೈಕ್ಷಣಿಕ ಸಾಲಿನ ನಂತರದ ವಿದ್ಯಾರ್ಥಿಗಳಿಗೆ ತಮ್ಮ ಅನುತ್ತೀರ್ಣಗೊಂಡ ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪರೀಕ್ಷಾ ವಿಭಾಗದ ಅಭ್ಯಂತರವಿಲ್ಲವೆಂದು ಹಾಗೂ 2014-15ನೇ ಶೈಕ್ಷಣಿಕ ಸಾಲುಗಳ ಹಿಂದಿನ ಸಾಲುಗಳಲ್ಲಿನ ಹಳೆಯ ವಿದ್ಯಾರ್ಥಿಗಳಿಗೆ ಏಕಾ-ಏಕೀ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಕಷ್ಟಕರವಾಗುತ್ತದೆ.
ವಿದ್ಯಾರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ಪಠ್ಯಕ್ರಮದಡಿ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಸಿಕೊಂಡು ಅವರು ಅನುತ್ತೀರ್ಣಗೊಂಡ ವಿಷಯಗಳ ಪಟ್ಟಿ ಸಿದ್ಧಪಡಿಸಿ ಅದಕ್ಕೆ ಅನುಗುಣವಾಗಿ ಪರಿಷ್ಕೃತ ಪಠ್ಯಕ್ರಮದಡಿ ಅನುತ್ತೀರ್ಣ ವಿದ್ಯಾರ್ಥಿಗಳು ಅಭ್ಯಸಿಸಲು ಅನುವಾಗಲು, ತತ್ಸಮಾನ ವಿಷಯಗಳನ್ನು ನಿಗದಿಪಡಿಸಬೇಕಾಗುತ್ತದೆ ಎಂದು ಕುಲಸಚಿವರು (ಮೌಲ್ಯಮಾಪನ) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಪ್ರಕ್ರಿಯೆಗಳು ಪೂರ್ಣಗೊಳಿಸಿದ ನಂತರವಷ್ಟೇ ಪರೀಕ್ಷೆಗಳನ್ನು ನಡೆಸಲು ಸುಮಾರು 4 ರಿಂದ 6 ತಿಂಗಳ ಕಾಲಾವಕಾಶದ ಅವಶ್ಯಕತೆ ಇರುವ ಅಂಶದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. 2018-19ನೇ ಸಾಲಿಗಿಂತ ಹಿಂದಿನ ವರ್ಷಗಳಲ್ಲಿ ವಿವಿಧ ಪದವಿ ಕೋರ್ಸಿಗೆ ಪ್ರವೇಶ ಪಡೆದು ಪರೀಕ್ಷೆಗಳಲ್ಲಿ ಇನ್ನೂ ಉತ್ತೀರ್ಣರಾಗದ ಸಾವಿರಾರು ವಿದ್ಯಾರ್ಥಿಗಳು/ ಅವರ ಪೋಷಕರು ಪ್ರತಿ ದಿನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಸುವಂತೆ ಮನವಿ ಮಾಡುತ್ತಲೇ ಇದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆದಿದೆ.
ದಿನೇ ದಿನೇ ಇಂತಹವರುಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಮತ್ತು ಈಗಾಗಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಅನುಸಾರ 2021-22ನೇ ಶೈಕ್ಷಣಿಕ ಸಾಲಿನಿಂದ ನವೀನ ಪಠ್ಯಕ್ರಮಗಳು ಜಾರಿಯಲ್ಲಿರುವುದರಿಂದ ಹಳೆಯ ವಿದ್ಯಾರ್ಥಿಗಳು ಪದವಿ ಮುಗಿಸಿಕೊಳ್ಳಲು ಅನುವು ಮಾಡಿಕೊಡುವ ಅವಶ್ಯಕತೆಯನ್ನು ವಿದ್ಯಾವಿಷಯಕ ಪರಿಷತ್ತಿನ ಸಭೆಯು ಗಮನಿಸಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000 ಪ್ರಕರಣದನ್ವಯ 31ರಡಿ ವಿದ್ಯಾವಿಷಯಕ ಪರಿಷತ್ ತನಗೆ ಪ್ರದತ್ತವಾದ ಅಧಿಕಾರದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯಮಿಕ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಲು ಅವಕಾಶವನ್ನು ಕಲ್ಪಸುವ ಬಗ್ಗೆ ವಿಸ್ತಾರವಾಗಿ ಸಭೆಯಲ್ಲಿ ಚರ್ಚಿಸಲಾಗಿತ್ತು.
2018-19ನೇ ಹಾಗೂ ಅದರ ಹಿಂದಿನ ಶೈಕ್ಷಣಿಕ ಅವರು ಅನುತ್ತೀರ್ಣಗೊಂಡ ವಿಷಯಗಳಲ್ಲಿ ಪರೀಕ್ಷೆಗಳನ್ನು ನೀಡಲು ನಿರ್ಣಯಿಸಲಾಗಿದೆ. ವಿಶೇಷ ಸಿಂಡಿಕೇಟ್ ಸಭೆಯ ನಿರ್ಣಯ ಹಾಗೂ ವಿಶೇಷ ವಿದ್ಯಾವಿಷಯಕ ಪರಿಷತ್ತಿನ ನಿರ್ಣಯಗಳನುಸಾರ, 2014-15ನೇ ಶೈಕ್ಷಣಿಕ ಸಾಲಿನಿಂದ ಪ್ರವೇಶ ಪಡೆದಿರುವ (CBCS ಪದ್ಧತಿ ಜಾರಿಯಾದ ವರ್ಷದಿಂದ) ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳು ಮತ್ತು ಸಂಯೋಜಿತ (affiliated) ಸ್ವಾಯತ್ತ (autonomous) ಕಾಲೇಜುಗಳಲ್ಲಿನ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಕೂಡಲೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು 'ಒಂದು ಬಾರಿಯ ಅವಕಾಶ' ನೀಡಿ ಪರೀಕ್ಷೆಗಳನ್ನು ಬರೆಯಲು ಈ ಮೂಲಕ ಆದೇಶಿಸಲಾಗಿದೆ.
ವಿದ್ಯಾರ್ಥಿಗಳಿಗೆ 2024ರ ನವೆಂಬರ್/ ಡಿಸೆಂಬರ್ ತಿಂಗಳಲ್ಲಿ ನಡೆಯುವ 1,3,5 ಹಾಗೂ 7ನೇ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು, ಸಪ್ಟೆಂಬರ್ ಮತ್ತು ಅಕ್ಟೋಬರ್ 2024ರಲ್ಲಿ ನಡೆಯುವ ಸ್ನಾತಕೋತರ ಪದವಿಯ 1 ಮತ್ತು 3ನೇ ಸೆಮಿಸ್ಟರ್ ಹಾಗೂ 2025ರ ಜೂನ್/ ಜುಲೈ ತಿಂಗಳುಗಳಲ್ಲಿ ನಡೆಸಲಿರುವ 2,4, 6 ಮತ್ತು 8ನೇ ಸೆಮಿಸ್ಟರ್‌ಗಳ ಪರೀಕ್ಷೆಗಳು (ಸ್ನಾತಕ ಪದವಿ)/ ಫೆಬ್ರವರಿ/ ಮಾರ್ಚ್ 2025ರಲ್ಲಿ ನಡೆಯುವ ಸ್ನಾತಕೋತರ ಪದವಿಯ 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಕುಲಸಚಿವರು (ಮೌಲ್ಯಮಾಪನ)ರವರು ಅಧಿಕೃತವಾಗಿ ಪರೀಕಾ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ.












Click it and Unblock the Notifications