ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಪುಟ್ಟಣ್ಣರನ್ನು ಬಹಿರಂಗ ಚರ್ಚೆಗೆ ಕರೆದ NR ರಮೇಶ್
ಬಿಜೆಪಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಪುಟ್ಣಣ್ಣನವರಿಗೆ ಪತ್ರ ಬರೆದು ಬಹಿರಂಗ ಚರ್ಚೆಗೆ ಆಹ್ವಾನಿಸಿದ ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್.
ಬೆಂಗಳೂರು, ಮಾರ್ಚ್ 15: ಬಿಜೆಪಿ ಪಕ್ಷದಿಂದ ಶಿಕ್ಷಣ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದಾರೆ. ಈ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಎನ್. ಆರ್.ರಮೇಶ್ ಬುಧವಾರ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಸೇರಿದ ಪುಟ್ಟಣ್ಣ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಪುಟ್ಟಣ್ಣನವರ ಆಯ್ಕೆ, ಅದಕ್ಕಾಗಿ ಪಟ್ಟ ಬಿಜೆಪಿಗೆ ಕಾರ್ಯಕರ್ತರ ಶ್ರಮ ಮತ್ತು ಕಾಂಗ್ರೆಸ್ ಸೇರಿದ್ದರ ಬಗ್ಗೆ ಅವರು ಪ್ರಶ್ನಿಸಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆದಂತಹ ವಿಧಾನ ಪರಿಷತ್ ಚುನಾವಣೆಯಲ್ಲಿ ನೀವು (ಪುಟ್ಟಣ್ಣ) ಆಯ್ಕೆಯಾಗಿರುತ್ತೀರಿ. ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಗಳಭಾರತೀಯ ಜನತಾ ಪಾರ್ಟಿಯ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮ ಪರವಾಗಿ ಹಗಲಿರುಳೆನ್ನದೆ ಹತ್ತಾರು ದಿನಗಳ ಕಾಲ ನಿಸ್ವಾರ್ಥ ಕಾರ್ಯ ಮಾಡಿದ್ದಾರೆ. ಅದರ ಫಲವಾಗಿ ತಮಗೆ ಜಯ ದೊರೆತಿದೆ.
ವಿಶೇಷವಾಗಿ ಈ ಭಾಗದ ಶಿಕ್ಷಕರು ಬಿಜೆಪಿ ಪಕ್ಷದ ಮೇಲಿನ ಒಲವಿನಿಂದ ಹಾಗೂ ತಮ್ಮ ಮೇಲಿನ ನಂಬಿಕೆಯಿಂದ ತಮ್ಮ ಪರವಾಗಿ ಮತ ಚಲಾವಣೆ ಮಾಡಿದ್ದಾರೆ. ತಮ್ಮನ್ನು ದೊಡ್ಡ ಅಂತರದಿಂದ ಜಯಗಳಿಸುವಂತೆ ಮಾಡಲು ಸಫಲರಾಗಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಕರಿಗೆ ಸಂಬಂಧಿಸಿದ ಯಾವ ಸಮಸ್ಯೆಗಳ ಬಗ್ಗೆಯೂ ಚಕಾರವೆತ್ತದ ತಾವು ಕೇವಲ ಬಿಜೆಪಿ ಸಚಿವರಾಗಬೇಕೆಂಬ ಏಕೈಕ ದುರುದ್ದೇಶದಿಂದಲೇ ಪಕ್ಷ ಸೇರಿದ್ದ ವಿಷಯ ಈಗ ತಮ್ಮ ಕಾಂಗ್ರೆಸ್ ಸೇರ್ಪಡೆಯ ನಡೆಯಿಂದ ಬಹಿರಂಗವಾಗಿದೆ ಎಂದು ಎನ್.ಆರ್.ರಮೇಶ್ ದೂರಿದ್ದಾರೆ.

ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಗಳಲ್ಲಿ ತಮ್ಮನ್ನು ನಿಷ್ಠೆಯಿಂದ ತೊಡಗಿಸಿಕೊಳ್ಳಬೇಕಿದ್ದ ತಾವು, ಆ ಕರ್ತವ್ಯ ಮರೆತು ಕೇವಲ ಅಧಿಕಾರದ ವ್ಯಾಮೋಹದಿಂದ ಪಕ್ಷ ತ್ಯಜಿಸಿದ್ದೀರಿ., ಕಳೆದ 75 ವರ್ಷಗಳ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ 55 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿ ದೇಶ, ಕರ್ನಾಟಕ ಲೂಟಿ ಹೊಡೆದ ಹಾಗೂ ಸುಮಾರು 150 ಕ್ಕೂ ಹೆಚ್ಚು ಬೃಹತ್ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್(ಐ) ಪಕ್ಷ ಸೇರ್ಪಡೆಯಾಗಿದ್ದೀರಿ. ಇದು ನಿಮ್ಮ ಮಾನಸಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಚುನಾವಣೆಯಲ್ಲಿ ಶಿಕ್ಷಕರು-ಮತದಾರರು ಪಾಠ
ತಮ್ಮ ಅವಧಿ ಇನ್ನೂ ಮೂರೂವರೆ ವರ್ಷಗಳಿಗೂ ಹೆಚ್ಚು ಕಾಲ ಇದೆ. ಆದರೂ ಸಹ ತಮ್ಮ ಮೇಲೆ ಅಪಾರ ವಿಶ್ವಾಸವನ್ನಿರಿಸಿ ನಿಮಗಾಗಿ ಮತ ಚಲಾಯಿಸಿದ್ದ ಎಲ್ಲ ಶಿಕ್ಷಕರ ನಂಬಿಕೆ ಹುಸಿಗೊಳಿಸಿದ್ದೀರಿ ಎಂಬ ಕಹಿ ಸತ್ಯದ ಮಾತನ್ನು ತಮಗೆ ಹೇಳಲಿಚ್ಛಿಸುತ್ತೇನೆ. ನಿಮ್ಮ ಈ ಅತಿಯಾದ ಅಧಿಕಾರದ ವ್ಯಾಮೋಹ ಮತ್ತು ಮಂತ್ರಿಯಾಗಲೇಬೇಕೆಂಬ ಏಕೈಕ ಗುರಿ ಹೊಂದಿರುವ ಸ್ವಾರ್ಥ ರಾಜಕಾರಣಿಯಾಗಿದ್ದೀರಿ. ನೀವು ಕಾಂಗ್ರೆಸ್ ಮೂಲಕ ಬೆಂಗಳೂರಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸಹ ಆ ಕ್ಷೇತ್ರಗಳಲ್ಲಿನ ಮತದಾರರು ಮತ್ತು ಶಿಕ್ಷಕರು ನಿಮಗೆ ಸರಿಯಾದ ರಾಜಕೀಯ ಪಾಠ ಕಲಿಸುತ್ತಾರೆ ಎಂದು ಅವರು ಕಿಡಿ ಕಾರಿದ್ದಾರೆ.












Click it and Unblock the Notifications